30 ವರ್ಷದ ಬಳಿಕ ‘ಕೂಲಿ’ ಸಿನಿಮಾಗಾಗಿ ಒಂದಾದ ಆಮಿರ್ ಖಾನ್-ರಜನಿಕಾಂತ್?
ಹಲವು ಕಾರಣಗಳಿಂದಾಗಿ ರಜನಿಕಾಂತ್ ಅವರ ‘ಕೂಲಿ’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದಲ್ಲಿ ಕನ್ನಡದ ನಟ ಉಪೇಂದ್ರ, ನಟಿ ರಚಿತಾ ರಾಮ್ ಕೂಡ ಅಭಿನಯಿಸುತ್ತಿದ್ದಾರೆ. ಶ್ರುತಿ ಹಾಸನ್, ಸತ್ಯರಾಜ್ ಮುಂತಾದವರು ಸಹ ಪಾತ್ರವರ್ಗದಲ್ಲಿ ಇದ್ದಾರೆ. ಇದೇ ಸಿನಿಮಾಗೆ ಈಗ ಆಮಿರ್ ಖಾನ್ ಎಂಟ್ರಿ ನೀಡಲಿದ್ದಾರೆ ಎಂದು ಸುದ್ದಿ ಆಗುತ್ತಿದೆ.
ರಜನಿಕಾಂತ್ ಅವರು ‘ಕೂಲಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ದೊಡ್ಡ ಬಜೆಟ್ನಲ್ಲಿ ತಯಾರಾಗುತ್ತಿದೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಹಲವು ಕಲಾವಿದರು ಇದ್ದಾರೆ. ರಜನಿಕಾಂತ್ ಜೊತೆ ಘಟಾನುಘಟಿ ಕಲಾವಿದರು ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾದ ಪಾತ್ರವರ್ಗಕ್ಕೆ ನಟ ಆಮಿರ್ ಖಾನ್ ಕೂಡ ಸೇರ್ಪಡೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅದಕ್ಕಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ.
ಆಮಿರ್ ಖಾನ್ ಅವರು ಸಿನಿಮಾಗಳ ಆಯ್ಕೆಯಲ್ಲಿ ತುಂಬ ಕಾಳಜಿ ವಹಿಸಬೇಕಿದೆ. ಯಾಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಅವರು ಅಭಿನಯಿಸಿದ ಸಿನಿಮಾಗಳು ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಮಾಡಲಿಲ್ಲ. ಈಗ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅದರ ನಡುವೆ ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರದಲ್ಲೂ ಆಮಿರ್ ಖಾನ್ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಮೊದಲು ಆಮಿರ್ ಖಾನ್ ಮತ್ತು ರಜನಿಕಾಂತ್ ಅವರು ‘ಆತಂಕ್ ಹಿ ಆತಂಕ್’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ 1995ರಲ್ಲಿ ಬಿಡುಗಡೆ ಆಗಿತ್ತು. ಆದರೆ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿರಲಿಲ್ಲ. ಈಗ ಬರೋಬ್ಬರಿ 30 ವರ್ಷಗಳ ನಂತರ ಅವರಿಬ್ಬರು ಜೊತೆಯಾಗಿ ಸಿನಿಮಾ ಮಾಡಬಹುದು ಎಂಬ ಸುದ್ದಿ ತಿಳಿದು ಅಭಿಮಾನಿಗಳಿಗೆ ಖುಷಿ ಆಗಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ನಲ್ಲಿ ‘ಲಾಪತಾ ಲೇಡೀಸ್’ ಪ್ರದರ್ಶನ; ಆಮಿರ್ ಖಾನ್, ಕಿರಣ್ ರಾವ್ಗೆ ಗೌರವ
ಆಮಿರ್ ಖಾನ್ ಮತ್ತು ರಜನಿಕಾಂತ್ ಅವರು ಜೊತೆಯಾಗಿ ನಟಿಸುವ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಎಲ್ಲವೂ ಈಗ ಅಂತೆ-ಕಂತೆಗಳ ಹಂತದಲ್ಲೇ ಇವೆ. ಇನ್ನು, ಆಮಿರ್ ಖಾನ್ ಅವರ ಮುಂದಿನ ಪ್ರಾಜೆಕ್ಟ್ಗೆ ಲೋಕೇಶ್ ಕನಗರಾಜ್ ಆ್ಯಕ್ಷನ್-ಕಟ್ ಹೇಳುತ್ತಾರೆ ಎಂಬ ಗಾಸಿಪ್ ಹಬ್ಬಿದೆ. ಆ ಪ್ರಾಜೆಕ್ಟ್ ಮೂಲಕ ಲೋಕೇಶ್ ಕನಗರಾಜ್ ಅವರು ಬಾಲಿವುಡ್ಗೆ ಎಂಟ್ರಿ ನೀಡುತ್ತಾರೆ ಎಂದು ಹೇಳಲಾಗುತ್ತಿದೆ.
‘ಕೂಲಿ’ ಮಾತ್ರವಲ್ಲದೇ ರಜನಿಕಾಂತ್ ಅವರ ಇನ್ನೊಂದು ಸಿನಿಮಾ ‘ವೆಟ್ಟಯ್ಯನ್’ ಕೂಡ ಬಹುತಾರಾಗಣ ಹೊಂದಿರಲಿದೆ. ಆ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್, ಮಂಜು ವಾರಿಯರ್, ರಾಣಾ ದಗ್ಗುಬಾಟಿ ಮುಂತಾದವರು ನಟಿಸುತ್ತಿದ್ದಾರೆ. ಆ ಚಿತ್ರ ಕೂಡ ಅಷ್ಟೇ ಹೈಪ್ ಕ್ರಿಯೇಟ್ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.