Explainer | Arjun Mark 1A Tank: ಭೂಸೇನೆಗೆ ಅರ್ಜುನ್​ ಟ್ಯಾಂಕ್ ಸೇರ್ಪಡೆ: ಏನು ವೈಶಿಷ್ಟ್ಯ? ಏಕೆ ಮುಖ್ಯ?

ಇದೀಗ ಸೇನೆಗೆ ಸೇರ್ಪಡೆಯಾಗಿರುವ Arjun Main Battle Tank MK-1A ಆವೃತ್ತಿ ಈ ಹಿಂದಿನ ಮಾದರಿಗಳಿಗಿಂತ ತುಸು ವಿಭಿನ್ನವಾಗಿದೆ. 14 ಮಹತ್ವದ ನವೀಕರಣವನ್ನು ಇದರಲ್ಲಿ ಮಾಡಲಾಗಿದೆ.

Explainer | Arjun Mark 1A Tank: ಭೂಸೇನೆಗೆ ಅರ್ಜುನ್​ ಟ್ಯಾಂಕ್ ಸೇರ್ಪಡೆ: ಏನು ವೈಶಿಷ್ಟ್ಯ? ಏಕೆ ಮುಖ್ಯ?
Arjun Battle tank Mk1a (ಸಂಗ್ರಹ ಚಿತ್ರ)
Follow us
Lakshmi Hegde
|

Updated on:Feb 14, 2021 | 6:31 PM

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು (ಫೆ.14) ಚೆನ್ನೈನಲ್ಲಿ ಭಾರತೀಯ ಸೇನೆಗೆ ಅರ್ಜುನ್​ ಯುದ್ಧ ಟ್ಯಾಂಕ್ (ಎಂಕೆ-1ಎ) (Arjun Main Battle Tank – MK-1A) ಹಸ್ತಾಂತರ ಮಾಡಿದರು. ಈ ಅರ್ಜುನ್​ ಯುದ್ಧ ಟ್ಯಾಂಕ್​ ಸ್ವದೇಶಿ ನಿರ್ಮಿತ ಎಂಬುದು ವಿಶೇಷ. ಯುದ್ಧ ವಾಹನಗಳ ಸಂಶೋಧನೆ, ಅಭಿವೃದ್ಧಿ ಸಂಸ್ಥೆ (Combat Vehicles Research & Development Establishment (CVRDE) ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು(DRDO) ಜಂಟಿಯಾಗಿ ಈ ಅರ್ಜುನ್​ ಯುದ್ಧ ಟ್ಯಾಂಕ್​ಗಳನ್ನು ನಿರ್ಮಾಣ ಮಾಡಿವೆ. ಇದರ ನಿರ್ಮಾಣ, ವಿನ್ಯಾಸ, ಅಭಿವೃದ್ಧಿಯಲ್ಲಿ ಸುಮಾರು15 ಶೈಕ್ಷಣಿಕ ಸಂಸ್ಥೆಗಳು, 8 ಪ್ರಯೋಗಾಲಯಗಳು ಹಾಗೂ ಹಲವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ (MSMEs)ಗಳ ನೆರವಾಗಿವೆ.

ಏನಿದು ಅರ್ಜುನ್​ ಯುದ್ಧ ಟ್ಯಾಂಕ್​? (Arjun Main Battle Tank MK-1A?) ಅರ್ಜುನ್​ ಮುಖ್ಯ ಯುದ್ಧ ಟ್ಯಾಂಕ್​ ಯೋಜನೆಗೆ ಸಂಬಂಧಪಟ್ಟ ಅಧ್ಯಯನ ಕೆಲಸವನ್ನು ಡಿಆರ್​ಡಿಒ (DRDO) 1972ರಲ್ಲಿ, ಯುದ್ಧ ವಿಮಾನಗಳ ಸಂಶೋಧನೆ, ಅಭಿವೃದ್ಧಿ ಸಂಸ್ಥೆಯೊಂದಿಗೆ (CVRDE) ಸೇರಿ ಪ್ರಾರಂಭಿಸಿತು. ಇದನ್ನು ಮಹತ್ವದ ಪ್ರಯೋಗವೆಂದು ಪರಿಗಣಿಸಿತ್ತು. ಉತ್ತಮ ಅಗ್ನಿಶಾಮಕ ಶಕ್ತಿ, ಹೆಚ್ಚಿನ ಚಲನಶೀಲತೆ ಮತ್ತು ಅತ್ಯುತ್ತಮ ರಕ್ಷಣಾ ಸಾಮರ್ಥ್ಯವುಳ್ಳ ಅತ್ಯಾಧುನಿಕ ಯುದ್ಧ ಟ್ಯಾಂಕ್​ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ಕೆಲಸ ಶುರುವಾಯಿತು. ಹೀಗೆ ಅರ್ಜುನ್​ ಯುದ್ಧ ಟ್ಯಾಂಕ್​ ಅಭಿವೃದ್ಧಿಗೊಳಿಸುವ ವೇಳೆ, ಅದರ ಇಂಜಿನ್​, ಸಂಚಾರ, ಬಂದೂಕು ನಿಯಂತ್ರಣ ವ್ಯವಸ್ಥೆ, ಹೊರಗಿನ ಹೊದಿಕೆಗಳ ವಿನ್ಯಾಸದಲ್ಲಿ CVRDE ಅದ್ಭುತ ಸಾಧನೆಯನ್ನೇ ಮಾಡಿತು. ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಾಗಿಯೇ ಯಶಸ್ವಿಯಾಯಿತು. ಅದಾದ ಬಳಿಕ 1996ರಿಂದ ತಮಿಳುನಾಡಿನ ಅವಾಡಿಯಲ್ಲಿರುವ ಭಾರತೀಯ ಆರ್ಡಿನನ್ಸ್​ ಫ್ಯಾಕ್ಟರಿಯ ಉತ್ಪಾದನಾ ಕೇಂದ್ರದಲ್ಲಿ ಅರ್ಜುನ್​ ಯುದ್ಧ ಟ್ಯಾಂಕ್​ಗಳ ಸಮೂಹ ತಯಾರಿಕೆ ಪ್ರಾರಂಭವಾಯಿತು.

ಸುಮಾರು 67 ಟನ್ ತೂಕದ ಈ ಟ್ಯಾಂಕ್​​ಗೆ 1.6 ಅಡಿ ಗ್ರೌಂಡ್​ ಕ್ಲಿಯರೆನ್ಸ್ ಇದೆ. ಗಂಟೆಗೆ ಗರಿಷ್ಠ 65 ಕಿಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅರ್ಜುನ್​ ಯುದ್ಧ ಟ್ಯಾಂಕ್​ಗಳು ಅವುಗಳಲ್ಲಿರುವ ಫಿನ್​ ಸ್ಟೆಬಿಲೈಸ್ಡ್​ ಆರ್ಮರ್​ ಪಿಯರ್ಸಿಂಗ್​ ಡಿಸ್​​ಕಾರ್ಡಿಂಗ್​ ಸಾಬೋಟ್​ (FSAPDS) ಯುದ್ಧ ಸಾಮಗ್ರಿಗಳಿಂದ ಹೆಸರುವಾಸಿಯಾಗಿದೆ. ದೊಡ್ಡ ಗಾತ್ರದ ಶೆಲ್​ಗಳನ್ನು ದೂರಕ್ಕೆ ಚಿಮ್ಮಿಸುವ ಶಕ್ತಿಯನ್ನು FSAPDS ನೀಡುತ್ತದೆ. 120 ಎಂಎಂ ಸಾಮರ್ಥ್ಯದ ರೈಫಲ್ಡ್​ ಗನ್​ ಅಳವಡಿಸಲಾಗಿದೆ. ಕಂಪ್ಯೂಟರ್​ ನಿಯಂತ್ರಿತ ಏಕೀಕೃತ ಅಗ್ನಿಶಾಮಕ ವ್ಯವಸ್ಥೆಯನ್ನು ಹೊಂದಿದೆ. ಅಷ್ಟೇ ಅಲ್ಲ, ಎಲ್ಲ ರೀತಿಯ ಬೆಳಕಿನ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಲು ಅನುಕೂಲವಾಗುವ ಸ್ಥಿರ ವೀಕ್ಷಣಾ ವ್ಯವಸ್ಥೆ ಅಳವಡಿಸಲಾಗಿದೆ.

ಅರ್ಜುನ್​​ ಟ್ಯಾಂಕ್​ ಅತ್ಯಾಧುನಿಕ ಶಾಕ್​ ಅಬ್ಸರ್​ವರ್​ ವ್ಯವಸ್ಥೆ ಹೊಂದಿದೆ. ಬ್ರಿಟನ್​ನ ‘ಚಾಲೆಂಜರ್​’ ಯುದ್ಧ ಟ್ಯಾಂಕ್​ಗಳೂ ಸೇರಿದಂತೆ ಹಲವು ಐಷಾರಾಮಿ ವಾಣಿಜ್ಯ ವಾಹನಗಳಲ್ಲಿ ಬಳಕೆಯಾಗಿರುವ ಹೈಡ್ರೋನ್ಯುಮಾಟಿಕ್ ಸಸ್ಪೆನ್ಷನ್ ತಂತ್ರಜ್ಞಾನ (Hydropneumatic Suspension) ಅರ್ಜುನ್ ಟ್ಯಾಂಕ್​ನಲ್ಲಿ ಬಳಕೆಯಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸುವಾಗಲೂ ಸಿಬ್ಬಂದಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಾರದು, ಟ್ಯಾಂಕ್​ಗಳ ಸಂಚಾರದ ವೇಗ, ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ಈ ತಂತ್ರಜ್ಞಾನವನ್ನು ಟ್ಯಾಂಕ್​ ರೂಪಿಸಿದ ವಿಜ್ಞಾನಿಗಳು ಅಳವಡಿಸಿದ್ದಾರೆ. ಟ್ಯಾಂಕ್​ಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಸ್ಪ್ರಿಂಗ್​ಗಳ ಶಾಕ್ ಅಬ್ಸರ್​ವರ್ ಬದಲು ದ್ರವ ಮತ್ತು ಅನಿಲಗಳ ಸಂಯೋಜನೆಯಿಂದ ಅರ್ಜುನ್​ನ​ ಈ ಶಾಕ್​ ಅಬ್ಸರ್​ವರ್ ಕೆಲಸ ಮಾಡುತ್ತದೆ.

2004ರಲ್ಲಿ ಮೊದಲ ಬಾರಿಗೆ ಸೇನೆ ಸೇರಿದ ಅರ್ಜುನ ಟ್ಯಾಂಕ್​ಗಳು ಹೀಗೆ ದೇಶೀಯವಾಗಿ ನಿರ್ಮಿಸಿ, ಅಭಿವೃದ್ಧಿ ಪಡಿಸಲಾದ ಅರ್ಜುನ ಯುದ್ಧ ಟ್ಯಾಂಕ್​ಗಳು ಮೊದಲ ಬಾರಿಗೆ ಭಾರತೀಯ ಸೇನೆ ಸೇರಿದ್ದು 2004ರಲ್ಲಿ. ಮೊದಲ ಬ್ಯಾಚ್​ನಲ್ಲಿ ಒಟ್ಟು 16 ಟ್ಯಾಂಕ್​ಗಳನ್ನು ಸೇನೆಗೆ ಸೇರಿಸಲಾಗಿದೆ. ಇವುಗಳನ್ನು 43 ಆರ್ಮ್​ರ್ಡ್​ ರೆಜಿಮೆಂಟ್​ನ ಸ್ಕ್ವಾಡ್ರನ್​ ಆಗಿ ನಿಯೋಜಿಸಲಾಗಿತ್ತು. 2011ರ ಹೊತ್ತಿಗೆ 100ಕ್ಕೂ ಹೆಚ್ಚು ಅರ್ಜುನ ಟ್ಯಾಂಕ್​ಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದವು. ಇದೀಗ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ, ₹ 8400 ಕೋಟಿ ವೆಚ್ಚದಲ್ಲಿ 118 ಅರ್ಜುನ್ ಮಾರ್ಕ್​-1 ಎ ಯುದ್ಧ ಟ್ಯಾಂಕ್​ ಖರೀದಿಸಿ, ಸೇನೆಗೆ ಹಸ್ತಾಂತರಿಸಿದೆ.

ಅರ್ಜುನ್ ಟ್ಯಾಂಕ್​ ಎಂಕೆ-1ಎ ಹೇಗೆ ವಿಭಿನ್ನ? ಇದೀಗ ಸೇನೆಗೆ ಸೇರ್ಪಡೆಯಾಗಿರುವ ಎಂಕೆ-1ಎ ಆವೃತ್ತಿ ಈ ಹಿಂದಿನ ಮಾದರಿಗಳಿಗಿಂತ ತುಸು ವಿಭಿನ್ನವಾಗಿದೆ. 14 ಮಹತ್ವದ ನವೀಕರಣವನ್ನು ಇದರಲ್ಲಿ ಮಾಡಲಾಗಿದೆ. ಅರ್ಜುನ್ ಎಂಕೆ-1 ಎಯಲ್ಲಿ ಕ್ಷಿಪಣಿ ಹಾರಿಸುವಂತೆಯೂ ವಿನ್ಯಾಸ ಮಾಡಲಾಗಿದ್ದು, ಸದ್ಯ ಅಂತಿಮ ಹಂತದ ಪರೀಕ್ಷೆ ನಡೆಯುತ್ತಿರುವುದರಿಂದ ಕ್ಷಿಪಣಿಯನ್ನು ಅಳವಡಿಸಿಲ್ಲ. ಈ ಹೊಸ ಆವೃತ್ತಿಯಲ್ಲಿ ಶೇ 54.3ರಷ್ಟು ಸ್ವದೇಶಿ ನಿರ್ಮಿತ ಬಿಡಿಭಾಗಗಳು ಇದ್ದು, ಹಳೇ ಆವೃತ್ತಿಯಲ್ಲಿ ಈ ಪ್ರಮಾಣ ಶೇ 41ರಷ್ಟು ಇತ್ತು.

ಇದನ್ನೂ ಓದಿ: PM Modi in Tamil Nadu: ಅರ್ಜುನ್ ಟ್ಯಾಂಕ್ ಸೇನೆಗೆ ಹಸ್ತಾಂತರ; ತಮಿಳುನಾಡು ರೈತರ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

Published On - 6:19 pm, Sun, 14 February 21