ಚೀನಾ ಗಡಿಯಿಂದ ನಮ್ಮ ಸೇನೆ ಹಿಂದೆ ಸರಿದಿದ್ದು ಶರಣಾಗತಿಯ ಸೂಚನೆ: ಎ.ಕೆ. ಆ್ಯಂಟನಿ ಟೀಕೆ
ಒಂದೆಡೆ ಪಾಕಿಸ್ತಾನ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ. ಮತ್ತೊಂದು ಕಡೆ, ಚೀನಾ ಯುದ್ಧ ಸನ್ನದ್ಧವಾಗಿರುವಂತೆ ವರ್ತಿಸುತ್ತಿದೆ. ಇಂಥಾ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರ, ರಾಷ್ಟ್ರೀಯ ಭದ್ರತೆಯ ವಿಚಾರಕ್ಕೆ ಅರ್ಹ ಪ್ರಾಶಸ್ತ್ಯ ನೀಡುತ್ತಿಲ್ಲ ಎಂದು ಆ್ಯಂಟನಿ ಅಸಮಧಾನ ವ್ಯಕ್ತಪಡಿಸಿದರು.
ದೆಹಲಿ: ಗಾಲ್ವಾನ್ ಕಣಿವೆ ಹಾಗೂ ಪಾಂಗಾಂಗ್ ಸರೋವರ ಪ್ರದೇಶಗಳಿಂದ ನಮ್ಮ ಸೇನಾಪಡೆಗಳನ್ನು ಹಿಂಪಡೆದಿರುವುದು ಮತ್ತು ಬಫರ್ ಝೋನ್ ನಿರ್ಮಿಸಿರುವುದು ಭಾರತವು ತನ್ನ ಹಕ್ಕುಗಳನ್ನು ಬಿಟ್ಟುಕೊಟ್ಟಿರುವುದರ ಸೂಚಕ ಎಂದು ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಭಾನುವಾರ (ಫೆ.14) ಆರೋಪಿಸಿದರು. ಚೀನಾ ಮತ್ತು ಪಾಕಿಸ್ತಾನದ ಎರಡೂ ಗಡಿಗಳಲ್ಲಿ ಭಾರತ ಯುದ್ಧದ ಆತಂಕ ಎದುರಿಸುತ್ತಿರುವಾಗ ಬಜೆಟ್ನಲ್ಲೂ ರಕ್ಷಣಾ ವಿಭಾಗಕ್ಕೆ ಕಡಿಮೆ ಅನುದಾನ ನೀಡಿರುವುದು ದೇಶಕ್ಕೆ ಮೋಸ ಮಾಡಿದಂತೆ ಎಂದು ಆ್ಯಂಟನಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಂದೆಡೆ ಪಾಕಿಸ್ತಾನ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ. ಮತ್ತೊಂದು ಕಡೆ, ಚೀನಾ ಯುದ್ಧ ಸನ್ನದ್ಧವಾಗಿರುವಂತೆ ವರ್ತಿಸುತ್ತಿದೆ. ಇಂಥಾ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರ, ರಾಷ್ಟ್ರೀಯ ಭದ್ರತೆಯ ವಿಚಾರಕ್ಕೆ ಪ್ರಾಶಸ್ತ್ಯ ನೀಡುತ್ತಿಲ್ಲ ಎಂದು ಆ್ಯಂಟನಿ ಅಸಮಧಾನ ವ್ಯಕ್ತಪಡಿಸಿದರು.
ಸೇನಾಪಡೆಗಳನ್ನು ಹಿಂಪಡೆದಿರುವುದು ಗಡಿಭಾಗದಲ್ಲಿ ಉದ್ವಿಗ್ನತೆ ಶಮನ ಮಾಡುವ ನೆಲೆಯಲ್ಲಿ ಒಳ್ಳೆಯ ನಿರ್ಧಾರವೇ ಆಗಿದೆ. ಆದರೆ, ದೇಶದ ರಕ್ಷಣೆಯನ್ನು ಒತ್ತೆ ಇಟ್ಟು ಈ ನಿರ್ಧಾರ ಕೈಗೊಳ್ಳಬಾರದಿತ್ತು ಎಂದು ಆ್ಯಂಟನಿ ಹೇಳಿದರು.
ಚೀನಾ ಗಡಿಪ್ರದೇಶದಿಂದ ಸೇನಾಪಡೆಗಳನ್ನು ಹಿಂಪಡೆಯುವ ಮೂಲಕ, ಸರ್ಕಾರ ಭಾರತದ ಯಾವ ಭೂಭಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟಿಲ್ಲ ಎಂದು ಸರ್ಕಾರ ಶುಕ್ರವಾರ ತಿಳಿಸಿತ್ತು. ಇದಕ್ಕೆ ಪ್ರತಿಯಾಗಿ, ಗಾಲ್ವಾನ್ ಹಾಗೂ ಪಾಂಗಾಂಗ್ ತ್ಸೊ ಪ್ರದೇಶದ ಸೇನಾಪಡೆಗಳನ್ನು ಹಿಂಪಡೆದಿರುವುದು ಶರಣಾಗತಿ ಸೂಚಿಸಿದಂತೆ ಎಂದು ಆ್ಯಂಟನಿ ಆರೋಪಿಸಿದರು.
ಗಾಲ್ವಾನ್ ಕಣಿವೆಯ ಭಾಗವು 1962ರಲ್ಲಿಯೂ ವಿವಾದಾತ್ಮಕ ಭೂಪ್ರದೇಶವಾಗಿರಲಿಲ್ಲ. ಈಗ ಅಲ್ಲಿನ ಸೇನಾಪಡೆಗಳನ್ನು ಹಿಂತೆಗೆದಿರುವುದು ನಮ್ಮ ಭೂಭಾಗದ ಶರಣಾಗತಿ ಸೂಚಿಸಿದಂತೆ ಆಗಿದೆ. ಸೇನಾಪಡೆಗಳನ್ನು ಹಿಂಪಡೆದು, ಬಫರ್ ಝೋನ್ ಮಾಡಿರುವುದರ ಪರಿಣಾಮಗಳು ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ ಎಂದು ಆ್ಯಂಟನಿ ಬೇಸರ ವ್ಯಕ್ತಪಡಿಸಿದರು. ಚೀನಾವು ಸಿಯಾಚಿನ್ ಗಡಿಯಲ್ಲಿ ಭಾರತದ ವಿರುದ್ಧ ಯಾವಾಗ ಬೇಕಾದರೂ ಪಾಕಿಸ್ತಾನಕ್ಕೆ ಸಹಕಾರ ನೀಡಬಹುದು ಎಂದು ಎಚ್ಚರಿಕೆ ನೀಡಿದರು.
ಏಪ್ರಿಲ್ 2020ರಲ್ಲಿ ಭಾರತ-ಚೀನಾ ಗಡಿಪ್ರದೇಶಗಳು ಯಾವ ರೀತಿ ಇದ್ದವೋ, ಅದೇ ರೀತಿಯ ಪರಿಸ್ಥಿತಿ ಎಂದಿನಿಂದ ನೆಲೆಗೊಳ್ಳಲಿದೆ? ಇದನ್ನು ಸಾಧಿಸಲು ಸರ್ಕಾರದ ಯೋಜನೆಗಳೇನು ಎಂದು ಆ್ಯಂಟನಿ ಪ್ರಶ್ನಿಸಿದರು. ಗಡಿಭಾಗದಲ್ಲಿ ಶಾಂತಿಯುತ ವಾತಾವರಣ ಪುನಃಸ್ಥಾಪಿಸಲು ಸರ್ಕಾರ ಸಾರ್ವಜನಿಕರ ಹಾಗೂ ದೇಶದ ಜನತೆಯನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು ಎಂದು ತಿಳಿಸಿದರು.
ಇಂತಹ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು, ಕೇಂದ್ರ ಸರ್ಕಾರ ಸರ್ವಪಕ್ಷಗಳ ನಾಯಕರ ಬಳಿ ಈ ಬಗ್ಗೆ ಚರ್ಚೆ ನಡೆಸಬೇಕಿತ್ತು. ರಾಷ್ಟ್ರೀಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ವ್ಯವಹರಿಸಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇಡೀ ದೇಶವೇ ಚೀನಾ ಹಾಗೂ ಪಾಕಿಸ್ತಾನದಿಂದ ಗಂಭೀರ ಸವಾಲು ಎದುರಿಸುತ್ತಿರುವಾಗ, ಬಜೆಟ್ನಲ್ಲಿಯೂ ರಕ್ಷಣೆಗೆ ಸೂಕ್ತ ಅನುದಾನ ನೀಡಬೇಕಿತ್ತು. ಕಳೆದ ಸಾಲಿನ ರಕ್ಷಣಾ ವೆಚ್ಚಕ್ಕೆ ಹೋಲಿಸಿದರೆ ಈ ಬಾರಿ ಬಜೆಟ್ನಲ್ಲಿ ಕೇವಲ ಶೇ 1.48ರಷ್ಟು ಅನುದಾನ ಹೆಚ್ಚಳವಾಗಿದೆ ಎಂದು ತಿಳಿಸಿದರು.
ಚೀನಾವನ್ನು ಸಮರ್ಥವಾಗಿ ಎದುರಿಸಲು ಬೇಕಿರುವಷ್ಟು ಅನುದಾನವನ್ನು ರಕ್ಷಣಾ ಇಲಾಖೆಗೆ ನೀಡಿಲ್ಲ. ಭಾರತಕ್ಕೆ ಚೀನಾವನ್ನು ಎದುರಿಸುವುದು ಬೇಕಿಲ್ಲ ಎಂದು ಈ ಮೂಲಕ ಪರೋಕ್ಷ ಸಂದೇಶ ರವಾನಿಸಿದಂತೆ ಆಗಿದೆ ಎಂದು ಅವರು ಟೀಕಿಸಿದರು
ಇನ್ನಷ್ಟು ಓದಿಗೆ..
Ladakh standoff: ಭಾರತ-ಚೀನಾ ಶೀತಲ ಸಮರ; ಪ್ಯಾಂಗಾಂಗ್ ಸರೋವರದಿಂದ ಮರಳುತ್ತಿರುವ ಯುದ್ಧ ಟ್ಯಾಂಕ್ಗಳು
Published On - 7:16 pm, Sun, 14 February 21