ಇಂಡಿಗೋ ಬಿಕ್ಕಟ್ಟಿನ ಮಧ್ಯೆ ಪೈಲಟ್ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ
ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಡಿಗೋದ ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇಂಡಿಗೋ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ್ದು, ಫೆಬ್ರವರಿ ವೇಳೆಗೆ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದೆ. ಈ ಬಿಕ್ಕಟ್ಟಿನ ಬೆನ್ನಲ್ಲೇ ಡಿಜಿಸಿಎ ರೋಸ್ಟರ್ ಆದೇಶವನ್ನು ಹಿಂಪಡೆದಿದೆ. ವಿಮಾನಯಾನ ಸಿಬ್ಬಂದಿ ಸಾಪ್ತಾಹಿಕ ವಿಶ್ರಾಂತಿಗೆ ರಜೆಯನ್ನು ಬದಲಾಯಿಸಬಾರದು ಎಂಬ ತನ್ನ ಇತ್ತೀಚಿನ ನಿರ್ದೇಶನವನ್ನು ಡಿಜಿಸಿಎ ತಕ್ಷಣವೇ ಹಿಂದಕ್ಕೆ ಪಡೆದುಕೊಂಡಿದೆ.

ನವದೆಹಲಿ, ಡಿಸೆಂಬರ್ 05: ಭಾರತದ ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ.60 ಕ್ಕಿಂತ ಹೆಚ್ಚು ಪಾಲನ್ನು ಹೊಂದಿರುವ ಇಂಡಿಗೋ(IndiGo) ಈಗ ಕಠಿಣ ಸಮಯವನ್ನು ಎದುರಿಸುತ್ತಿದೆ. ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಡಿಗೋದ ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇಂಡಿಗೋ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ್ದು, ಫೆಬ್ರವರಿ ವೇಳೆಗೆ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದೆ. ಈ ಬಿಕ್ಕಟ್ಟಿನ ಬೆನ್ನಲ್ಲೇ ಡಿಜಿಸಿಎ ರೋಸ್ಟರ್ ಆದೇಶವನ್ನು ಹಿಂಪಡೆದಿದೆ.
ವಿಮಾನಯಾನ ಸಿಬ್ಬಂದಿ ಸಾಪ್ತಾಹಿಕ ವಿಶ್ರಾಂತಿಗೆ ರಜೆಯನ್ನು ಬದಲಾಯಿಸಬಾರದು ಎಂಬ ತನ್ನ ಇತ್ತೀಚಿನ ನಿರ್ದೇಶನವನ್ನು ಡಿಜಿಸಿಎ ತಕ್ಷಣವೇ ಹಿಂದಕ್ಕೆ ಪಡೆದುಕೊಂಡಿದೆ. ಸಿಬ್ಬಂದಿ ಕೊರತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಈಗ ಪ್ರಶ್ನೆ ಉದ್ಭವಿಸುತ್ತಿರುವುದು ಇಷ್ಟು ದೊಡ್ಡ ವಿಮಾನಯಾನ ಸಂಸ್ಥೆಯು ಇದ್ದಕ್ಕಿದ್ದಂತೆ ಸಿಬ್ಬಂದಿ ಕೊರತೆಯನ್ನು ಏಕಾಏಕಿ ಹೇಗೆ ಎದುರಿಸುತ್ತಿದೆ ಎಂಬುದಾಗಿದೆ.
ಪ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ನಿಯಮದಿಂದ ಒಂದು ವಾರಕ್ಕೆ 2 ದಿನ ಪೈಲಟ್ ಗಳಿಗೆ ವಿಶ್ರಾಂತಿ ನೀಡಬೇಕಾಗಿತ್ತು . ಈಗ ಈ ನಿಯಮ ಕಡ್ಡಾಯ ಜಾರಿಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಪೈಲಟ್ ಗಳ ಕೊರತೆಯ ಸಮಸ್ಯೆಯು ಸ್ಪಲ್ಪ ಮಟ್ಟಿಗೆ ಬಗೆಹರಿದು ಪ್ರಯಾಣಿಕರ ಸಂಕಷ್ಟ ಸ್ಪಲ್ಪ ಪರಿಹಾರವಾಗುವ ನಿರೀಕ್ಷೆ ಇದೆ.
ಇನ್ನೂ ಇಂಡಿಗೋ ಪ್ರಯಾಣಿಕರ ಪರದಾಟ, ಪೈಲಟ್ ಗಳ ಕೊರತೆ ಹಾಗೂ ಅದನ್ನು ಬಗೆಹರಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮ ಮೋಹನ್ ನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ವಿವರಣೆ ನೀಡಿದ್ದಾರೆ.
ಇಂಡಿಗೋ ವಿಷಯದ ಬಗ್ಗೆ ರಾಮ್ ಮೋಹನ್ ನಾಯ್ಡು ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಹಿತಿ ನೀಡಿದ ನಂತರ ಆದೇಶವನ್ನು ಹಿಂಪಡೆಯಲಾಗಿದೆ. ಸಿಬ್ಬಂದಿ ಸಾಪ್ತಾಹಿಕ ವಿಶ್ರಾಂತಿಗೆ ಬದಲಾಗಿ ರಜೆ ಬಳಸುವುದನ್ನು ನಿಷೇಧಿಸುವ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಂಡಿದೆ.
24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಡಿಜಿಸಿಎ ತನ್ನ ಎಫ್‌ಡಿಟಿಎಲ್ ಮಾನದಂಡಗಳಿಗೆ ಮಾಡಿದ ಎರಡನೇ ಬದಲಾವಣೆ ಇದಾಗಿದೆ. ಗುರುವಾರ ರಾತ್ರಿ ಪೈಲಟ್ ಹಾರಾಟ ನಡೆಸಬಹುದಾದ ಸತತ ಗಂಟೆಗಳ ಸಂಖ್ಯೆಯ ಮಿತಿಯನ್ನು 12 ರಿಂದ 14 ಕ್ಕೆ ವಿಸ್ತರಿಸಿತ್ತು. ಮುಂದಿನ 48 ಗಂಟೆಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಇಂಡಿಗೋ ಭರವಸೆ ನೀಡಿದೆ.
ಮತ್ತಷ್ಟು ಓದಿ: IndiGo flights: 550 ಇಂಡಿಗೋ ವಿಮಾನಗಳ ಸಂಚಾರ ರದ್ದು, ಬೆಂಗಳೂರು ಸೇರಿ ಹಲವೆಡೆ ಪ್ರಯಾಣಿಕರ ಒದ್ದಾಟ
ಇಂಡಿಗೋ ನಾಲ್ಕನೇ ದಿನವೂ ಮುಂಬೈ, ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಿಂದ ಸುಮಾರು 400 ವಿಮಾನಗಳನ್ನು ರದ್ದುಗೊಳಿಸಿದೆ. ದೆಹಲಿಯಿಂದ ಬರುವ ಎಲ್ಲಾ 200 ವಿಮಾನಗಳನ್ನು ಇಂದು ರದ್ದುಗೊಳಿಸಲಾಗಿದೆ. ತಾಂತ್ರಿಕ ದೋಷಗಳು, ಹವಾಮಾನ ಮತ್ತು ಹೊಸ ಸಿಬ್ಬಂದಿ ರೋಸ್ಟರಿಂಗ್ ನಿಯಮಗಳಿಂದಾಗಿ ಇಂಡಿಗೋ ನಿರಂತರವಾಗಿ ಅಡಚಣೆಗಳನ್ನು ಅನುಭವಿಸುತ್ತಿದೆ.
ನವೆಂಬರ್ 1 ರಿಂದ ಜಾರಿಯಲ್ಲಿರುವ ಹೊಸ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟ್ (ಎಫ್‌ಡಿಟಿಎಲ್) ನಿಯಮಗಳಿಂದಾಗಿ ಇಂಡಿಗೋ ಪೈಲಟ್‌ಗಳು ಮತ್ತು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಭಾರತ ವಿಮಾನಯಾನ ಕಂಪನಿಗಳಲ್ಲಿ ಸಿಬ್ಬಂದಿಯ ಕೊರತೆ ಹೆಚ್ಚಿದೆ, ಅದರಲ್ಲೂ ಎಲ್ಲರೂ ಒತ್ತಡದಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಯ ಆರೋಗ್ಯ ಹದಗೆಡುತ್ತಿದೆ. ಮಾನಸಿಕ ನೆಮ್ಮದಿಯೂ ಹಾಳಾಗಿದೆ.
ಇತ್ಯಾದಿ ಸಮಸ್ಯೆಯನ್ನು ಪರಿಗಣಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಪೈಲಟ್‌ಗಳು ಮತ್ತು ಸಿಬ್ಬಂದಿಗೆ ಸಾಕಷ್ಟು ವಿಶ್ರಾಂತಿ ನೀಡಲು ಹೊಸ ನಿಯಮಗಳನ್ನು ಜಾರಿ ಮಾಡಿದೆ. ಈ ನಿಯಮವನ್ನು ಕಂಪನಿಗಳು ಈಗ ಕಡ್ಡಾಯವಾಗಿ ಪಾಲನೆ ಮಾಡಬೇಕಾದ ಕಾರಣ ಇಂಡಿಗೋ ಕಾರ್ಯಾಚರಣೆಯಲ್ಲಿ ಸಮಸ್ಯೆ ಆರಂಭವಾಗಿದೆ.
ಪೈಲಟ್ ಅಥವಾ ಕ್ಯಾಬಿನ್ ಸಿಬ್ಬಂದಿಗೆ ಒಂದು ದಿನದಲ್ಲಿ ಒಟ್ಟು 10-13 ಗಂಟೆ ಕರ್ತವ್ಯ ನಿರ್ವಹಿಸಬಹುದಿತ್ತು. ಆದರೆ ವಿಮಾನಯಾನ ರೋಸ್ಟರ್ ಮಾನದಂಡಗಳ ಪ್ರಕಾರ ಈಗ ಗರಿಷ್ಠ 10 ಗಂಟೆ ಮಾತ್ರ ನಿಗದಿ ಮಾಡಲಾಗಿದೆ. ಈ ಮೊದಲು ವಾರದಲ್ಲಿ ಕನಿಷ್ಠ 36 ಗಂಟೆ ವಿಶ್ರಾಂತಿ ನೀಡಲಾಗುತ್ತಿತ್ತು. ಆದರೆ ಈಗ ಕನಿಷ್ಠ 48 ಗಂಟೆ ವಿಶ್ರಾಂತಿ ಪಡೆಯಬೇಕೆಂದು ಸೂಚಿಸಲಾಗಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ ಬಳಿಕ 10 ಗಂಟೆ ವಿಶ್ರಾಂತಿ ಪಡೆಯಬಹುದಾಗಿತ್ತು. ಆದರೆ ಈಗ ಈ ಅವಧಿಯನ್ನು12 ಗಂಟೆಗೆ ವಿಸ್ತರಿಸಲಾಗಿದೆ.
ಮೊದಲು ರಾತ್ರಿ ಸಮಯದಲ್ಲಿ 6 ಬಾರಿ ಲ್ಯಾಂಡಿಂಗ್ ಮಾಡಲು ಅವಕಾಶವಿತ್ತು. ಆದರೆ ಈಗ 2 ಬಾರಿ ಮಾತ್ರ ಲ್ಯಾಂಡಿಂಗ್‌ಗೆ ಅವಕಾಶ ನೀಡಲಾಗಿದೆ. ದಿನಕ್ಕೆ 8-10 ಗಂಟೆಗಳು, ವಾರಕ್ಕೆ 30 ಗಂಟೆಗಳು ಅಥವಾ 28 ದಿನಗಳಲ್ಲಿ ಗರಿಷ್ಠ100 ಗಂಟೆ ವಿಮಾನ ಹಾರಾಟಕ್ಕೆ ಸಮಯ ಮಿತಿಯನ್ನು ಹಾಕಲಾಗಿದೆ.
ಇದು ವಾರ್ಷಿಕವಾಗಿ 1,000 ಗಂಟೆಗಳಿಗಿಂತ ಹೆಚ್ಚಿರಬಾರದು. ಯಾವುದೇ ವಿಮಾನಯಾನ ಸಂಸ್ಥೆಯು ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಯನ್ನು ಈ ಮಿತಿಗಳಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿಸುವಂತಿಲ್ಲ. ಬೇರೆ ಕಂಪನಿಗಳಿಗೆ ಹೋಲಿಸಿದರೆ ಇಂಡಿಗೋ ಕಡಿಮೆ ವೆಚ್ಚದ ವಿಮಾನ ಸೇವೆಗಳನ್ನು ನೀಡುತ್ತಿದೆ. ರಾತ್ರಿ ಸಮಯದಲ್ಲೇ ಹೆಚ್ಚಿನ ವಿಮಾನಗಳನ್ನು ಹಾರಿಸುತ್ತದೆ. ಡಿಜಿಸಿಎ ರಾತ್ರಿ ವಿಮಾನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಠಿಣ ನಿಯಮ ಜಾರಿ ಮಾಡಿದ್ದು ಇಂಡಿಗೋಗೆ ಬಹಳ ಹೊಡೆತ ನೀಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




