ಗಂಧದ ಎಣ್ಣೆ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ: ಅಂಕಿ-ಅಂಶ ಸಮೇತ ಬಯಲಿಗೆಳೆದ ಜೆಡಿಎಸ್ ಶಾಸಕ
ವಿಧಾನಸೌಧದಲ್ಲಿ ಜೆಡಿಎಸ್ ಶಾಸಕ ಹೆಚ್.ಟಿ ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ ಗಂಧದ ಎಣ್ಣೆ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಕಂಪನಿಗೆ ಪತ್ರ ಬರೆದಿದ್ದು, ಯಾವುದೇ ಮಾಹಿತಿ ನೀಡಿಲ್ಲ ಎಂದಿದ್ದಾರೆ.

ಬೆಂಗಳೂರು, ಡಿಸೆಂಬರ್ 05: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ ಗಂಧದ ಎಣ್ಣೆ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಜೆಡಿಎಸ್ ಶಾಸಕ ಹೆಚ್.ಟಿ ಮಂಜು (JDS MLA HT Manju) ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೆಎಸ್ಡಿಎಲ್ನಲ್ಲಿ (KSDL) ಸಾಬೂನು ತೈಲ ಕಚ್ಚಾ ಸಾಮಾಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಕಂಪನಿಗೆ ಮಾಹಿತಿ ಕೇಳಿ ಪತ್ರ ಬರೆದಿದ್ದು, ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ.
ಗಂಧದ ಎಣ್ಣೆ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದೆ
ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಹೆಚ್.ಟಿ ಮಂಜು, ಗಂಧದ ಎಣ್ಣೆ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದೆ. 800 ಪುಟಗಳ ವರದಿಯನ್ನ ಪಡೆದಿದ್ದೇವೆ. 9 ಟೆಂಡರ್ದಾಖಲೆಗಳು ಮಾತ್ರ ಸಿಕ್ಕಿವೆ. ಸರ್ಕಾರದ ಮುಖ್ಯಕಾರ್ಯದರ್ಶಿ, ಇಲಾಖೆಯ ಸಚಿವರು, ಸಿಎಂಗೆ ಪತ್ರ ಬರೆದಿದ್ದು, ಯಾರೋಬ್ಬರೂ ಈವರೆಗೆ ಉತ್ತರ ನೀಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಶೇ 63ರಷ್ಟು ಭ್ರಷ್ಟಾಚಾರ: ಬಿಜೆಪಿ ಕಡೆಗೇ ಬಾಣ ತಿರುಗಿಸಿದ ಸಿಎಂ ಸಿದ್ದರಾಮಯ್ಯ!
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ 1918ರಲ್ಲಿ ಆರಂಭವಾದ ಸಂಸ್ಥೆ. 1500 ಕೋಟಿ ರೂ ಠೇವಣಿಯ ಹಣ ಕೊಟ್ಟಿದ್ದಾರೆ. ನಕಲಿ ದಾಖಲೆ ಮಾಡಿ ಕೊಟ್ಟಿದ್ದಾರೆ. ಮಾರಾಟವಾಗಿಲ್ಲ ಅಂತ 40% ರಿಯಾಯಿತಿಗೆ ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬ್ಲಾಕ್ ಲಿಸ್ಟ್ಗೆ ಸೇರಿದ ಕಂಪನಿಗೆ ಟೆಂಡರ್
ಬ್ಲಾಕ್ ಲಿಸ್ಟ್ಗೆ ಸೇರಿಸಿರುವ ಕರ್ನಾಟಕ ಅರೋಮಾಸ್ ಎಂಬ ಕಂಪನಿಗೆ ಟೆಂಡರ್ ಕೊಡುತ್ತಾರೆ. ಟೆಂಡರ್ನಲ್ಲಿ ಪಾಲಿಸಬೇಕಾದ ನಿಯಮ ಪಾಲಿಸಿಲ್ಲ. ಹೊರಗಡೆಯಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ ಅಂತಾರೆ ಆದರೆ ದಾಖಲೆ ನೀಡುತ್ತಿಲ್ಲ. ಇಲ್ಲಿನ ಎಣ್ಣೆಯನ್ನೇ ಖರೀದಿ ಮಾಡಿದ್ದಾರೆ. ಯಾವುದೇ GST ಕಟ್ಟಿಲ್ಲ. 2025ರ ಮೇ ತಿಂಗಳಿನಲ್ಲಿ ನಾನು ಪತ್ರ ಬರೆದಿದ್ದೆ. ಆಗ 1ಕೆ.ಜಿ ಗಂಧದ ಎಣ್ಣೆಗೆ 2 ಲಕ್ಷ 24 ಸಾವಿರ ರೂ. ಇತ್ತು. 7500 ಮೆಟ್ರಕ್ ಟನ್ಗೆ 93,116 ರೂ. ಟೆಂಡರ್ ಕೊಡುತ್ತಾರೆ. 17 ಸಾವಿರ ಕೋಟಿ ರೂ. ವ್ಯತ್ಯಾಸ ಬರುತ್ತಿದೆ. ಈ ವರ್ಷ ಗಂಧದ ಎಣ್ಣೆಯ ದರ ಕೆ.ಜಿಗೆ 93 ಸಾವಿರ ರೂ ಮಾತ್ರ. ಅಷ್ಟು ವ್ಯತ್ಯಾಸ ಏಕೆ ಬರುತ್ತೆ ಎಂದು ಶಾಸಕ ಹೆಚ್.ಟಿ ಮಂಜು ಪ್ರಶ್ನಿಸಿದ್ದಾರೆ.
ಟೆಂಡರ್ ಪೂರ್ವ ಪರಿಶೀಲನಾ ಸಮಿತಿ ಮಾರುಕಟ್ಟೆ ಮೌಲ್ಯ ಪರಿಶೀಲನೆ ಮಾಡಬೇಕು. ಅವರ ಅನುಮೋದನೆ ಪಡೆದು ಟೆಂಡರ್ ಕರೆಯಬೇಕು. 570 ಕೋಟಿ ರೂ ಟೆಂಡರ್ ಆಗುತ್ತೆ. ದೂರವಾಣಿ ಮುಖಾಂತರ ಸಂಧಾನ ಮಾಡುವ ಪ್ರಯತ್ನ ವ್ಯವಸ್ಥಾಪಕ ನಿರ್ದೇಶಕ ಮಾಡುತ್ತಾರೆ. ದರ ಸಂಧಾನ ಮಾಡಿಲ್ಲ. ಒಂದೇ ವರ್ಷದಲ್ಲಿ ಮೂರು ರೀತಿಯ ಆಡಿಟ್ ವರದಿಯನ್ನ ತರಿಸಿಕೊಳ್ಳುತ್ತಾರೆ. ಅದೇ ವ್ಯಕ್ತಿ ಬೇರೆ ಕಂಪನಿಯ ಹೆಸರಿಗೆ ಟೆಂಡರ್ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಒದ್ದು ಒಳಗೆ ಹಾಕುತ್ತೇನೆ ಎಂದ ಸಚಿವ ಎಂಬಿ ಪಾಟೀಲ್
ಈ ಕುರಿತಾಗಿ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದ್ದು, ನಾನು ನೋಡಿಲ್ಲ, ತಿಳಿದುಕೊಳ್ಳುತ್ತೇನೆ. ಅದಕ್ಕೆ ಸ್ಪಷ್ಟೀಕರಣ ಕೊಡುತ್ತೇವೆ. ಅವ್ಯವಹಾರ ಆಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತೇವೆ. ತಿಮಿಂಗಲು ಇದ್ದಾವೆ, ಅವೆಲ್ಲಾ ಈ ರೀತಿ ಆರೋಪ ಮಾಡುತ್ತಿದ್ದಾರೆ. ಯಾರು ಆರೋಪ ಮಾಡಿದ್ದಾರೆ ಅನ್ನೋದನ್ನ ಹೇಳಿದರೆ ಒದ್ದು ಒಳಗೆ ಹಾಕುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಭ್ರಷ್ಟಾಚಾರ: ನಿಮಗೆ ಧೈರ್ಯ ಇದ್ರೆ ಸಿಬಿಐ ತನಿಖೆ ಮಾಡಿಸಿ; ಆರ್ ಅಶೋಕ್ ಸವಾಲು
ಸಂಪೂರ್ಣ ಮಾಹಿತಿ ಕೊಡುತ್ತೇವೆ. ಬೇಜವಾಬ್ದಾರಿಯಂತೆ ಆರೋಪ ಮಾಡಿದರೆ ಮಾನನಷ್ಟ ಕ್ರಮ ತೆಗೆದುಕೊಳ್ಳುತ್ತೇವೆ. ಯಾವ ರೀತಿ ಕೆಎಸ್ಡಿಎಲ್ ಬೆಳೆಯುತ್ತಿದೆ ಎನ್ನುವುದು ನಿಮಗೆ ಗೊತ್ತು. ಟೆಂಡರ್ನಲ್ಲಿ ಅವ್ಯವಹಾರ ಆಗಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಅವರ ಆರೋಪಕ್ಕೆ ನಾನು ಉತ್ತರ ಕೊಡುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:33 pm, Fri, 5 December 25



