ಕರ್ನಾಟಕದಲ್ಲಿ ಭ್ರಷ್ಟಾಚಾರ: ನಿಮಗೆ ಧೈರ್ಯ ಇದ್ರೆ ಸಿಬಿಐ ತನಿಖೆ ಮಾಡಿಸಿ; ಆರ್ ಅಶೋಕ್ ಸವಾಲು
ಕರ್ನಾಟಕದಲ್ಲಿ ಶೇ. 63ರಷ್ಟು ಭ್ರಷ್ಟಾಚಾರವಿದೆ ಎಂಬ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಹೇಳಿಕೆಯನ್ನೇ ಬಿಜೆಪಿ ಅಸ್ತ್ರಮಾಡಿಕೊಂಡಿದ್ದು, ಸರ್ಕಾರದ ಮೇಲೆ ಮುಗಿಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಅಶೋಕ್, ಪೇ ಸಿಎಂ ಅಂತಾ ರೋಡ್ನಲ್ಲಿ ಪೋಸ್ಟರ್ ಅಂಟಿಸಿದ್ರಲ್ಲಾ, ಅದನ್ನ ಈಗ ನಿಮ್ಮ ಮುಖದ ಮೇಲೆ ಅಂಟಿಸಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರು, ಡಿಸೆಂಬರ್ 04: ಕರ್ನಾಟಕದಲ್ಲಿ ಶೇ. 63ರಷ್ಟು ಭ್ರಷ್ಟಾಚಾರ ಇದೆ ಎಂಬ ಉಪಲೋಕಾಯುಕ್ತ (upalokayukta) ನ್ಯಾಯಮೂರ್ತಿ ಬಿ. ವೀರಪ್ಪ ಅವರ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷ ಪಕ್ಷ ಬಿಜೆಪಿ ಇದನ್ನೇ ಅಸ್ತ್ರವಾಗಿಸಿಕೊಂಡು ರಾಜ್ಯ ಸರ್ಕಾರದ ಮೇಲೆ ಮುಗಿಬಿದ್ದಿದೆ. 40% ಕಮಿಷನ್ ಎಂದು ನಗರದ ತುಂಬಾ ಪೇ ಸಿಎಂ ಪೋಸ್ಟರ್ ಅಂಟಿಸಿ ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ. ಮುಡಾ ಹಗರಣ ನಡೆದಾಗ ಪದೇಪದೆ ಸಿಎಂ ಸಾಕ್ಷಿ ಕೇಳುತ್ತಿದ್ದರು. ಕೋರ್ಟ್ ಮತ್ತು ಜಡ್ಜ್ಗಿಂತ ದೊಡ್ಡ ಸಾಕ್ಷಿ ಬೇರೆ ಯಾವುದೂ ಇಲ್ಲ ಎಂದು ಆರ್ ಅಶೋಕ್ (R Ashoka) ಟಾಂಗ್ ನೀಡಿದ್ದಾರೆ.
ನಿಮಗೆ ಧೈರ್ಯ ಇದ್ದರೆ ಸಿಬಿಐ ತನಿಖೆ ಮಾಡಿಸಿ: ಆರ್. ಅಶೋಕ್ ಕಿಡಿ
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ನಾವು 60 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಹೇಳಿದ್ದೆವು. ಆದರೆ ನ್ಯಾಯಾಧೀಶರು 63% ಭ್ರಷ್ಟಾಚಾರ ಇದೆ ಎಂದು ಹೇಳಿದ್ದಾರೆ. 63% ಕಮಿಷನ್ ಆರೋಪದ ತನಿಖೆಗೆ ಎಸ್ಐಟಿ ಯಾವಾಗ ಮಾಡುತ್ತೀರಿ? ನ್ಯಾಯಾಧೀಶರು ನಿಮ್ಮ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ. ನಿಮಗೆ ಧೈರ್ಯ ಇದ್ದರೆ ಸಿಬಿಐ ತನಿಖೆ ಮಾಡಿಸಿ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಶೇ. 63ರಷ್ಟು ಭ್ರಷ್ಟಾಚಾರ: ಉಪಲೋಕಾಯುಕ್ತರ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಮೇಲೆ ಮುಗಿಬಿದ್ದ ಬಿಜೆಪಿ
ಬಿಹಾರ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ್ದು, ಬಿಹಾರ ಚುನಾವಣೆಗೆ ಕರ್ನಾಟಕದಿಂದ 300 ಕೋಟಿ ರೂ. ಹೋಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಹಣ ಕೊಡುವವರೆಗೆ ಅಷ್ಟೇ ಇಲ್ಲಿ ಅಧಿಕಾರ. ಕಾಂಗ್ರೆಸ್ ಮನೆ ದೇವರೇ ಭ್ರಷ್ಟಾಚಾರ. ಪೇ ಸಿಎಂ ಅಂತಾ ರೋಡ್ ರೋಡ್ನಲ್ಲಿ ಪೋಸ್ಟರ್ ಅಂಟಿಸಿದ್ರಲ್ಲಾ, ಈಗ ನಿಮ್ಮ ಮುಖದ ಮೇಲೆ ಪೋಸ್ಟರ್ ಅಂಟಿಸಬೇಕು. ಉಪಲೋಕಾಯುಕ್ತರ ಹೇಳಿಕೆ ಮೇಲೆ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆರ್. ಅಶೋಕ್ ಕಿಡಿಕಾರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:45 pm, Thu, 4 December 25



