ಮಂಗಳೂರಿನಲ್ಲಿ ವೇಣುಗೋಪಾಲ್ ಎದುರು ಡಿಕೆ ಡಿಕೆ ಘೋಷಣೆ: ಡಿಕೆಶಿ ಆಪ್ತನಿಗೆ ಹೈಕಮಾಂಡ್ ಬಿಗ್ ಶಾಕ್
ಸಿದ್ದರಾಮಯ್ಯ ಸರ್ಕಾರ ಮೊನ್ನೆ ಎರಡುವರೆ ವರ್ಷ ಪೂರೈಸುತ್ತಿದ್ದಂತೆಯೇ ಅಧಿಕಾರ ಹಂಚಿಕೆ ಕದನ ಜೋರಾಗಿತ್ತು. ಡಿಕೆ ಶಿವಕುಮಾರ್ ಹಾಗೂ ಅವರ ಬಣ ಸಿಎಂ ಕುರ್ಚಿ ಬೇಕೇಬೇಕೆಂದು ಪಟ್ಟು ಹಿಡಿದು ನಾನಾ ಕಸರತ್ತು ನಡೆಸಿತ್ತು. ಕೊನೆಗೆ ಹೈಕಮಾಂಡ್ ಮಧ್ಯೆಪ್ರವೇಶಿಸಿ ಸಿಎಂ ಮತ್ತು ಡಿಸಿಎಂಗೆ ಕರೆ ಮಾಡಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿ ಗೊಂದಲ ಬಗೆಹರಿಸುವಂತೆ ಸೂಚಿಸಿತ್ತು. ಅದರಂತೆ ಎಲ್ಲಾ ಆಗಿ ಶಾಂತವಾಗಿತ್ತು. ಆದ್ರೆ, ಎಐಸಿಸಿ ಪ್ರಧಾನಿ ಕಾರ್ಯದರ್ಶಿ ವೇಣುಗೋಪಾಲ್ ಮಂಗಳೂರಿಗೆ ಆಗಮಿಸಿದ್ದ ವೇಳೆ ಡಿಕೆ ಡಿಕೆ ಘೋಷಣೆ ಮೊಳಗಿತ್ತು. ಈ ಸಂಬಂಧ ಇದೀಗ ಡಿಕೆಶಿ ಆಪ್ತನಿಗೆ ಹೈಕಮಾಂಡ್ ಶಾಕ್ ಕೊಟ್ಟಿದೆ.

ಬೆಂಗಳೂರು/ಮಂಗಳೂರು, (ಡಿಸೆಂಬರ್ 04): ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ನಡುವಿನ ಸಿಎಂ ಕುರ್ಚಿ ಕದನ ಶಾಂತವಾಗಿತ್ತು. ಆದರೆ, ಮಂಗಳೂರಿನಲ್ಲಿ (Mangaluru) ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ (KC Venugopal) ಮುಂದೆ ಡಿಕೆ ಡಿಕೆ ಎಂದು ಘೋಷಣೆ ಕೂಗಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಯತ್ನ ನಡೆದಿತ್ತು. ಆ ಪ್ರಸಂಗಕ್ಕೆ ಸಾಕ್ಷಿಯಾಗಿದ್ದ ಡಿಕೆ ಶಿವಕುಮಾರ್ ಆಪ್ತ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಿಥುನ್ ರೈಗೆ ಹೈಕಮಾಂಡ್ ನೋಟಿಸ್ ಜಾರಿ ಮಾಡಿದೆ. ಪಕ್ಷದ ಶಿಸ್ತು ಉಲ್ಲಂಘನೆ ಬಗ್ಗೆ ಕಾರಣ ಕೇಳಿ ಮಿಥುನ್ ರೈಗೆ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ಅವರು ಶೋಕಾಸ್ ನೋಟಿಸ್ ನೀಡಿದ್ದಾರೆ.
ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿ ನಡುವಿನ ಸಂವಾದದ ಶತಮಾನೋತ್ಸವವನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೆ.ಸಿ.ವೇಣುಗೋಪಾಲ್ ಕೇರಳದಿಂದ ಮಂಗಳೂರಿಗೆ ಆಗಮಿಸಿದ್ದರು. ವೇಣುಗೋಪಾಲ್ ಮಂಗಳೂರು ವಿಮಾನ ನಿಲ್ದಾಣದಿಂದ ಆಚೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ ಹಾಗೂ ಮತ್ತಿತರರು ಡಿಕೆಶಿ ಪರವಾಗಿ ಘೋಷಣೆ ಕೂಗಿದ್ದರು. ಡಿಕೆ ಡಿಕೆ ಎಂದು ಘೋಷಣೆ ಕೂಗಿದ್ದಲ್ಲದೇ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕೆಂದು ಆಗ್ರಹಿಸಿದ್ದರು. ಸಿಎಂ-ಡಿಕೆಶಿ ನಡುವಿನ ಕುರ್ಚಿ ಕದನ ಶಾಂತವಾಗಿರುವಾಗಲೇ ಈ ರೀತಿ ಘೋಷಣೆ ಕೂಗಿರುವುದು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಕಾರಣ ಕೇಳಿ ಮಿಥುನ್ ರೈಗೆ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ಅವರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ನೋಡಿ: ಬ್ರೇಕ್ಫಾಸ್ಟ್ ಮೀಟಿಂಗ್ ಬಳಿಕವೂ ಬಣ ಬಡಿದಾಟಕ್ಕಿಲ್ಲ ಬ್ರೇಕ್: ವೇಣುಗೋಪಾಲ್ ಎದುರೇ ಡಿ.ಕೆ. ಶಿವಕುಮಾರ್-ಸಿದ್ದರಾಮಯ್ಯ ಬೆಂಬಲಿಗರಿಂದ ಘೋಷಣೆ
ಸಮರ್ಥಿಸಿಕೊಂಡಿದ್ದ ಡಿಕೆಶಿ
ಇನ್ನು ಮಂಗಳೂರಿನಲ್ಲಿ ಸಿಎಂ ಹಾಗೂ ವೇಣುಗೋಪಾಲ್ ಎದುರು ಡಿಕೆ ಡಿಕೆ ಅಂತ ಘೋಷಣೆ ಕೂಗಿರೋ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಅಭಿಮಾನಿಗಳು ಘೋಷಣೆ ಕೂಗಿರಬಹುದು. ರಾಜಕೀಯದಲ್ಲಿ ಎಲ್ಲಾ ತರಹದ ಜೈಕಾರ, ಧಿಕ್ಕಾರ ಇರುತ್ತೆ. ಡಿಕೆ ಡಿಕೆ ಘೋಷಣೆಯನ್ನ ಕಳೆದ 10 ವರ್ಷದಿಂದ ಕೂಗ್ತಾರೆ. ಕೆಲವರು ಮೋದಿ ಅಂತಾರೆ, ಕೆಲವರು ಡಿಕೆ ಎನ್ನುತ್ತಾರೆ, ಕೆಲವರು ರಾಹುಲ್ ಅಂತಾರೆ, ಇನ್ನು ಕೆಲವರು ಸಿದ್ದು ಎನ್ನುತ್ತಾರೆ. ಅದರಲ್ಲಿ ತಪ್ಪೇನು ಎಂದು ಸಮರ್ಥಿಸಿಕೊಂಡಿದ್ದರು.
ಕರ್ನಾಟಕದಲ್ಲಿ ನವಂಬರ್ 20 ರಿಂದ ಸಿಎಂ ಕುರ್ಚಿಗಾಗಿ ಫೈಟ್ ಶುರುವಾಗಿತ್ತು. ಡಿಸಿಎಂ ಡಿಕೆಶಿ ಅವರಿಗೆ ಸಿಎಂ ಸ್ಥಾನ ನೀಡಬೇಕೆಂದು ಬೆಂಬಲಿಗ ಶಾಸಕರು, ಸಚಿವರು ದೆಹಲಿ ಯಾತ್ರೆ ನಡೆಸಿದ್ದರು. ಹೀಗೆ ಎರಡು ಮೂರು ತಂಡಗಳು ದೆಹಲಿಗೆ ಹೋಗಿ ಬಂದಿವೆ. ಮಾಧ್ಯಮಗಳಲ್ಲೂ ಸಿಎಂ ಸ್ಥಾನ ಯಾರ ಪಾಲಾಗುತ್ತೆ ಎಂಬ ಬಗ್ಗೆ ದೊಡ್ಡ ಚರ್ಚೆಯಾಯಿತು. ಇದಾದ ಬಳಿಕ ಕಾಂಗ್ರೆಸ್ ಹೈಕಮ್ಯಾಂಡ್ ಮಧ್ಯಪ್ರವೇಶಿಸಿ, ಬ್ರೇಕ್ ಫಾಸ್ಟ್ ಮೀಟಿಂಗ್ ಆರೇಂಜ್ ಮಾಡಿತ್ತು. ಹೀಗಾಗಿ ಈಗ ತಾತ್ಕಾಲಿಕವಾಗಿ ಸಿಎಂ ಕುರ್ಚಿ ಫೈಟ್‌ಗೆ ಬ್ರೇಕ್ ಬಿದ್ದಿತ್ತು.
ಸಿಎಂ ಕುರ್ಚಿ ಫೈಟ್ ಶುರುವಾದ ಬಳಿಕ ಇದೇ ಮೊದಲ ಭಾರಿಗೆ ಸಿಎಂ ಸಿದ್ದರಾಮಯ್ಯ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದರು.



