R Ashoka
ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಆರ್. ಅಶೋಕ್ ಕರ್ನಾಟಕ ಬಿಜೆಪಿಯ ಹಿರಿಯ ನಾಯಕರು. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಪ್ರಸ್ತುತ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಇವರು 1957ರ ಜುಲೈ 1 ರಂದು ಜನಿಸಿದರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಆರ್. ಅಶೋಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತರು. ನಂತರದ ದಿನಗಳಲ್ಲಿ ಬಿಜೆಪಿಯೊಂದಿಗೆ ಗುರುತಿಸಿಕೊಂಡು ರಾಜಕೀಯಕ್ಕೆ ಬಂದರು. ಹಂತ ಹಂತವಾಗಿ ಪಕ್ಷ ಹಾಗೂ ರಾಜಕೀಯದಲ್ಲಿ ಮುನ್ನೆಲೆಗೆ ಬಂದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ (1975 ರಿಂದ 77) ಅಶೋಕ್ ಜೈಲುವಾಸ ಅನುಭವಿಸಿದ್ದರು. ಬಿಜೆಪಿ ಹಿರಿಯ ನಾಯಕ, ಭಾರತ ರತ್ನ ಎಲ್.ಕೆ. ಅಡ್ವಾಣಿ ಮುಂತಾದವರೊಂದಿಗೆ ಜೈಲಿನಲ್ಲಿದ್ದರು. 1997 ರಲ್ಲಿ ಬೆಂಗಳೂರಿನ ಉತ್ತರಹಳ್ಳಿ ಕ್ಷೇತ್ರಕ್ಕೆ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಥಮ ಬಾರಿಗೆ ಶಾಸಕರಾದರು. 2021ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ ಆರ್. ಅಶೋಕ ಸೇರ್ಪಡೆಯಾಗಿ ಕಂದಾಯ ಸಚಿವ ಖಾತೆ ನಿಭಾಯಿಸಿದರು. 1999 ಹಾಗೂ 2004 ರಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ಮತ್ತೆ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು. ಬಿಎಸ್ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಾರಿಗೆ ಖಾತೆಯ ಸಚಿವರಾದರು. 2012ರಲ್ಲಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾದಾಗ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಉಪ ಮುಖ್ಯಮಂತ್ರಿ ಜೊತೆಗೆ ಸಾರಿಗೆ ಹಾಗೂ ಗೃಹ ಇಲಾಖೆಗಳ ಜವಾಬ್ದಾರಿ ನಿಭಾಯಿಸಿದರು. 2018ರಲ್ಲಿ ಆರ್. ಅಶೋಕ್ ಪದ್ಮನಾಭನಗರದಿಂದ ಶಾಸಕರಾಗಿ ಮತ್ತೆ ಆಯ್ಕೆಯಾದರು. 2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕಂದಾಯ, ಮುಜರಾಯಿ ಖಾತೆ ಹೊಣೆ ಹೊತ್ತಿದ್ದರು. ಪ್ರಸ್ತುತ ಆರ್. ಅಶೋಕ ವಿರೋಧ ಪಕ್ಷದ ನಾಯಕರಾಗಿದ್ದಾರೆ