AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಪಾಲರನ್ನೇ ತಡೆದು ಗೂಂಡಾಗಿರಿ, ಇದೊಂದು ಕರಾಳ ದಿನ: ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ

ವಿಧಾನಸಭೆಯಲ್ಲಿ ರಾಜ್ಯಪಾಲರಿಗೆ ಕಾಂಗ್ರೆಸ್ ಶಾಸಕರು ಅಡ್ಡಿಪಡಿಸಿದ್ದಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೊಂದು ‘ಕರಾಳ ದಿನ’ ಎಂದು ಬಣ್ಣಿಸಿದ ಅವರು, ರಾಜ್ಯಪಾಲರಿಗೆ ಅಗೌರವ ತೋರಿದ್ದು ‘ಗೂಂಡಾಗಿರಿ’ ಎಂದು ಅವರು ಕಿಡಿಕಾರಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಇದು ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಟೀಕಿಸಿದ್ದಾರೆ.

ರಾಜ್ಯಪಾಲರನ್ನೇ ತಡೆದು ಗೂಂಡಾಗಿರಿ, ಇದೊಂದು ಕರಾಳ ದಿನ: ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ
ಆರ್ ಅಶೋಕ್, ವಿಜಯೇಂದ್ರ
Ganapathi Sharma
|

Updated on:Jan 22, 2026 | 12:29 PM

Share

ಬೆಂಗಳೂರು, ಜನವರಿ 22: ವಿಧಾನಸಭೆಯ ವಿಶೇಷ ಅಧಿವೇಶನದ (Karnataka Assembly Session) ವೇಳೆ ಭಾಷಣ ಮುಗಿಸಿ ಹೊರಟ ರಾಜ್ಯಪಾಲ (Karnataka Governor) ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಶಾಸಕರು ಅಡ್ಡಿಗಟ್ಟಿರುವುದನ್ನು ಖಂಡಿಸಿದ ವಿಪಕ್ಷ ನಾಯಕ ಆರ್ ಅಶೋಕ್ (R Ashoka), ಇದೊಂದು ‘ಕರಾಳ ದಿನ’ ಎಂದು ಕರೆದಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ ಪ್ರಕಾರ ರಾಜ್ಯಪಾಲರು ತಮ್ಮ ಕರ್ತವ್ಯ ನಿರ್ವಹಿಸಿ ಧನ್ಯವಾದ ಹೇಳಿ ಹೊರಟಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ರಾಜ್ಯಪಾಲರು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಿದ್ದು, ಅವರ ಭಾಷಣವನ್ನು ಓದದೇ ಹೊರಡುವುದಕ್ಕೂ ಅವರಿಗೆ ಅಧಿಕಾರವಿದೆ ಎಂದು ಅಶೋಕ್ ಹೇಳಿದರು. ಆದರೆ ಕಾಂಗ್ರೆಸ್ ಪಕ್ಷದವರು ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವ ತೋರಿಸಿದ್ದು ಗೂಂಡಾಗಿರಿ ಎಂದು ಕಿಡಿಕಾರಿದರು. ಅಧಿವೇಶನವನ್ನು ಕಾಂಗ್ರೆಸ್ ಕರಾಳ ರೀತಿಯಲ್ಲಿ ನಡೆಸಿದೆ ಎಂದು ಆರೋಪಿಸಿದರು.

ಸದನದಲ್ಲಿ ಅಗೌರವ ತೋರಿದವರ ಹೊರಹಾಕಿ: ಸ್ಪೀಕರ್​ಗೆ ಅಶೋಕ್ ಆಗ್ರಹ

ರಾಜ್ಯಪಾಲರಿಗೆ ಅಡ್ಡಿಪಡಿಸಿದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅಶೋಕ್, ಈ ಕುರಿತು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಪತ್ರ ನೀಡುವುದಾಗಿ ತಿಳಿಸಿದರು. ಸದನದಲ್ಲಿ ಅಗೌರವ ತೋರಿದವರನ್ನು ಹೊರಹಾಕಬೇಕು ಎಂದೂ ಒತ್ತಾಯಿಸಿದರು. ಇದೇ ರಾಜ್ಯಪಾಲರು ಸರ್ಕಾರದ ಅನೇಕ ಬಿಲ್‌ಗಳಿಗೆ ಸಹಿ ಹಾಕಿದ್ದಾರೆ. ಆಗ ರಾಜ್ಯಪಾಲರು ಸರಿಯಾಗಿದ್ದರಾ ಎಂದು ಕಾಂಗ್ರೆಸ್‌ ಅನ್ನು ಪ್ರಶ್ನಿಸಿದರು.

ಲೋಕಭವನವನ್ನು ಕಾಂಗ್ರೆಸ್ ಭವನವನ್ನಾಗಿಸಲು ‘ಕೈ’ ಸರ್ಕಾರ ಹೊರಟಿದೆ. ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸುವ ಕುತಂತ್ರ ಇದಾಗಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ದ್ವೇಷ ರಾಜಕಾರಣ ಮಾಡಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.

ಇದನ್ನೂ ಓದಿ: ಒಂದೇ ವಾಕ್ಯದಲ್ಲಿ ಮಾತು ಮುಗಿಸಿದ ರಾಜ್ಯಪಾಲರು, ಸರ್ಕಾರದ ಭಾಷಣ ಓದಲು ನಕಾರ: ವಿಧಾನಸಭೆಯಲ್ಲಿ ಹೈಡ್ರಾಮಾ

ನರೇಗಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಕೆಲ ಸುಧಾರಣೆಗಳನ್ನು ತಂದಿದ್ದು, ಅದನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. 140 ಶಾಸಕರ ಬೆಂಬಲವಿದೆ ಎಂಬ ದರ್ಪದಲ್ಲಿ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ಅವರು ಕಿಡಿಕಾರಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:26 pm, Thu, 22 January 26