ಸಿಎಂ ಸಿದ್ದರಾಮಯ್ಯ Vs ವಿಪಕ್ಷ ನಾಯಕ ಅಶೋಕ್: ಸಾಮಾಜಿಕ ಜಾಲತಾಣದಲ್ಲಿ ‘ಭ್ರಷ್ಟಾಚಾರ’ ವಾರ್
ಕರ್ನಾಟಕದಲ್ಲಿ ಭ್ರಷ್ಟಾಚಾರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ನಡುವೆ ಮಾತಿನ ಸಮರ ತೀವ್ರಗೊಂಡಿದೆ. ಉಪ ಲೋಕಾಯುಕ್ತರ ಹೇಳಿಕೆ ಆಧರಿಸಿ ಪರಸ್ಪರ ಆರೋಪ-ಪ್ರತ್ಯಾರೋಪ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಉಭಯ ನಾಯಕರು ಏಟು-ಎದಿರೇಟು ನೀಡಿದ್ದು, ಈ ಎಲ್ಲ ಬೆಳವಣಿಗೆಗಳ ನಡುವೆ ಉಪಲೋಕಾಯುಕ್ತರು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಬೆಂಗಳೂರು, ಡಿಸೆಂಬರ್ 05: ಕರ್ನಾಟಕದಲ್ಲಿ ಭ್ರಷ್ಟಾಚಾರ ವಿಚಾರವಾಗಿ ಉಪ ಲೋಕಾಯುಕ್ತರ ಹೇಳಿಕೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಮೇಲೆ ವಿಪಕ್ಷ ಬಿಜೆಪಿ ಮುಗಿಬಿದ್ದಿತ್ತು. ಶೇ. 40 ಕಮಿಷನ್ ಎಂದು ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ, ಅಪಪ್ರಚಾರ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ ಎಂದು ಆರೋಪಿಸಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಕೌಂಟರ್ ಕೊಟ್ಟಿದ್ದರೆ, ಆರ್. ಅಶೋಕ್ ಅವರಿಂದಲೂ ಮಾತಿನ ಪ್ರತಿದಾಳಿ ನಡೆದಿದೆ.
ಸಿದ್ದರಾಮಯ್ಯ ಹೇಳಿದ್ದೇನು?
ಟ್ರಾನ್ಸ್‌ಪರೆನ್ಸಿ ಇಂಡಿಯಾ ಇಂಟರ್ ನ್ಯಾಶನಲ್ನವರು 2019ರ ನವೆಂಬರ್‌ನಲ್ಲಿ ನೀಡಿರುವ ವರದಿಯಲ್ಲಿ ರಾಜ್ಯದಲ್ಲಿ ಶೇ.63 ಭ್ರಷ್ಟಾಚಾರ ಇದೆ ಎನ್ನಲಾಗಿತ್ತು. ಅದೇ ವರದಿ ಆಧರಿಸಿ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಮಾತನಾಡಿದ್ದಾರೆ. ಈ ವರದಿ ಹೊರಬರುವ ವೇಳೆಯಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಆರ್.ಅಶೋಕ್ ಅವರು ಉಪಲೋಕಾಯುಕ್ತರ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬಿಜೆಪಿಯ ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೋಗಿ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಶೇ. 63ರಷ್ಟು ಭ್ರಷ್ಟಾಚಾರ; ಉಪಲೋಕಾಯುಕ್ತರ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಮೇಲೆ ಮುಗಿಬಿದ್ದ ಬಿಜೆಪಿ
ಸಿಎಂಗೆ ಆರ್. ಅಶೋಕ್ ತಿರುಗೇಟು
ಸಿಎಂ @siddaramaiah ಅವರೇ,
ನಿನ್ನೆ ತಡರಾತ್ರಿ ನೀವು ಅದನ್ನು ಲೋಕಾಯುಕ್ತ ವರದಿ ಎಂದು ಸುಳ್ಳು ಹೇಳಿದ ನಂತರ, ಈಗ ಅದನ್ನು ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ವರದಿ’ ಎಂದು ಸದ್ದಿಲ್ಲದೆ ತಿದ್ದುಕೊಂಡಿರುವುದು ಸಂತೋಷದ ಸಂಗತಿ.
ಆದರೆ ಈಗ, ಕೆಲವು ಸತ್ಯಾಂಶಗಳನ್ನು ಸ್ಪಷ್ಟಪಡಿಸೋಣ.
ನ್ಯಾಯಮೂರ್ತಿ ಬಿ. ವೀರಪ್ಪ ಅವರು ಉಲ್ಲೇಖಿಸಿರುವ… https://t.co/iGdIRVxl0o pic.twitter.com/4wN0MJaX7G
— R. Ashoka (@RAshokaBJP) December 5, 2025
ಸಿಎಂ ಹೇಳಿಕೆಗೆ ಇತ್ತ ವಿಪಕ್ಷ ನಾಯಕ ಆರ್. ಅಶೋಕ್ ಕೂಡ ತಿರುಗೇಟು ನೀಡಿದ್ದಾರೆ. ಮೊದಲು ಲೋಕಾಯುಕ್ತ ವರದಿ ಎಂದು ಸುಳ್ಳು ಹೇಳಿದ ಬಳಿಕ ಈಗ ಅದನ್ನು ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ವರದಿ’ ಎಂದು ಸದ್ದಿಲ್ಲದೆ ತಿದ್ದುಕೊಂಡಿರುವುದು ಸಂತೋಷದ ಸಂಗತಿ. ನ್ಯಾಯಮೂರ್ತಿ ಬಿ. ವೀರಪ್ಪ ಅವರು ಉಲ್ಲೇಖಿಸಿರುವ ವರದಿಯು ನವೆಂಬರ್ 2019ರಲ್ಲಿ ಬಿಡುಗಡೆಯಾಗಿತ್ತು. ಅಂದರೆ ಅದು ಹಿಂದಿನ ವರ್ಷ 2018ರ ಭ್ರಷ್ಟಾಚಾರದ ಕುರಿತು ನಡೆಸಿದ ಸಮೀಕ್ಷೆ. ಆ ವೇಳೆ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು ನೀವೆ. ಹೀಗಾಗಿ ಈ ವರದಿಯನ್ನು ಬಿಜೆಪಿ ಕಡೆಗೆ ತಿರುಚುವ ಬದಲು, ನಿಮ್ಮ ಆಡಳಿತಾವಧಿಯಲ್ಲಿ ಕರ್ನಾಟಕದ ಶೇ.63 ನಾಗರಿಕರು ಏಕೆ ಲಂಚ ನೀಡಬೇಕಾಯಿತು ಎಂಬುದನ್ನು ಮೊದಲು ವಿವರಿಸಿ ಎಂದಿದ್ದಾರೆ.
ನಿಮ್ಮ ಸರ್ವೋಚ್ಚ ನಾಯಕ ರಾಹುಲ್ ಗಾಂಧಿ ಅವರ ಮೂರ್ಖತನವನ್ನು ದೇಶ ಕ್ಷಮಿಸಬಹುದು. ಆದರೆ ಕರ್ನಾಟಕದ ಜನತೆ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರಗಳನ್ನು ಮುನ್ನಡೆಸಿದ ನಿಮ್ಮನ್ನ, ನಿಮ್ಮ ಕಾಂಗ್ರೆಸ್ ಪಕ್ಷದ ನಿರ್ಲಜ್ಜತೆಯನ್ನು ಎಂದಿಗೂ ಕ್ಷಮಿಸುವುದಿಲ್ಲ.ಇತರರತ್ತ ಬೆರಳು ತೋರಿಸುವ ಮೊದಲು ನಿಮ್ಮದೇ ಘನ ಸರ್ಕಾರ ವರ್ಷದಿಂದ ವರ್ಷಕ್ಕೆ ಕರ್ನಾಟಕವನ್ನು ಭ್ರಷ್ಟಾಚಾರದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಏರಿಸಲು ಕಾರಣವೇನು ಎಂಬುದಕ್ಕೆ ಮೊದಲು ಉತ್ತರಿಸಿ ಎಂದು ಅಶೋಕ್ ಹೇಳಿದ್ದಾರೆ.
‘ನನ್ನ ಹೇಳಿಕೆ ತಿರುಚಲಾಗಿದೆ’
ಈ ಎಲ್ಲ ಬೆಳವಣಿಗೆಗಳ ನಡುವೆ ಭ್ರಷ್ಟಾಚಾರ ವಿಚಾರವಾಗಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಬೆಂಗಳೂರಿನಲ್ಲಿ ಟಿವಿ9ಗೆ ತಿಳಿಸಿದ್ದಾರೆ. ಹೈಕೋರ್ಟ್ ಸಭಾ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದ ವೇಳೆ ವೇಳೆ ದೇಶಾದ್ಯಂತ ಇರುವ ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದೇನೆ. ಸಂಪೂರ್ಣವಾಗಿ ನನ್ನ ಭಾಷಣ ಆಲಿಸದೆ ತಪ್ಪಾಗಿ ತಿರುಚಲಾಗಿದೆ. ಭಾರತದಲ್ಲಿ ಹಿಂದಿನಿಂದಲೂ ಇರುವ ಭ್ರಷ್ಟಾಚಾರ ಬಗ್ಗೆ ತಾನು ಹೇಳಿದ್ದು, ಕೇವಲ ಯಾವುದೇ ಸರ್ಕಾರ ಮತ್ತು ಪಕ್ಷ ಉದ್ದೇಶವಾಗಿರಿಸಿ ಹೇಳಿದ್ದಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಎಲ್ಲಾ ಸರ್ಕಾರಗಳು ಭ್ರಷ್ಟಾಚಾರಕ್ಕೆ ಕಾರಣವಾಗಿವೆ. ಸ್ವಾರ್ಥಕ್ಕಾಗಿ ನನ್ನ ಹೇಳಿಕೆ ಬಳಕೆ ಮಾಡಿಕೊಳ್ಳೋದು ಸರಿಯಲ್ಲ ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:31 pm, Fri, 5 December 25




