Disha Ravi: ಟೂಲ್ ಕಿಟ್ ಪ್ರಕರಣ; ಐದು ದಿನ ಪೊಲೀಸ್ ಕಸ್ಟಡಿಗೆ ದಿಶಾ ರವಿ
ಬೆಂಗಳೂರಿಗೆ ಬಂದಿದ್ದ ದೆಹಲಿ ಪೊಲೀಸರು ಸೋಲದೇವನಹಳ್ಳಿಯಲ್ಲಿರುವ ದಿಶಾ ರವಿ ಅವರ ಮನೆಗೆ ತೆರಳಿ ವಶಕ್ಕೆ ಪಡೆದಿದ್ದಾರು. ನಂತರ ಅವರನ್ನು ನೇರವಾಗಿ ದೆಹಲಿಗೆ ಕೊಂಡೊಯ್ಯಲಾಗಿತ್ತು.
ದೆಹಲಿ: ರೈತರ ಹೋರಾಟಕ್ಕೆ ಸಂಬಂಧಿಸಿ ಪರಿಸರವಾದಿ ಗ್ರೇಟ್ ಥನ್ಬರ್ಗ್ ಹಂಚಿಕೊಂಡಿದ್ದ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಮೂಲದ ಪರಿಸರವಾದಿ ದಿಶಾ ರವಿ ಅವರನ್ನು ಪೊಲೀಸರು ಬಂಧಿಸಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಎದುರು ಹಾಜರು ಪಡಿಸಿದ್ದಾರೆ. ಈ ವೇಳೆ ಕೋರ್ಟ್ ದಿಶಾ ಅವರನ್ನು ಐದು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ಕ್ರಿಯೇಟರ್ಸ್ ಆಫ್ ಟೂಲ್ ಕಿಟ್ ವಿರುದ್ಧ ದೆಹಲಿ ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರದ ತನಿಖೆ ವೇಳೆ ದಿಶಾ ಹೆಸರು ಬೆಳಕಿಗೆ ಬಂದಿತ್ತು. ಹೀಗಾಗಿ, ಬೆಂಗಳೂರಿಗೆ ಬಂದಿದ್ದ ದೆಹಲಿ ಪೊಲೀಸರು ಸೋಲದೇವನಹಳ್ಳಿಯಲ್ಲಿರುವ ದಿಶಾ ರವಿ ಅವರ ಮನೆಗೆ ತೆರಳಿ ವಶಕ್ಕೆ ಪಡೆದಿದ್ದರು. ನಂತರ ಅವರನ್ನು ನೇರವಾಗಿ ದೆಹಲಿಗೆ ಕೊಂಡೊಯ್ದು ಪಟಿಯಾಲ ಹೌಸ್ ಕೋರ್ಟ್ ಎದುರು ಹಾಜರುಪಡಿಸಿದ್ದರು.
ದಿಶಾ ರವಿ, ಬೆಂಗಳೂರಿನ ಪ್ರತಿಷ್ಠಿತ ಮಹಿಳಾ ಕಾಲೇಜುಗಳಲ್ಲಿ ಒಂದಾಗಿರುವ ಮೌಂಟ್ ಕಾರ್ಮಲ್ ವಿದ್ಯಾರ್ಥಿನಿ ಆಗಿದ್ದರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ದಿಶಾ ರವಿ ವಿರುದ್ಧ ದೇಶದ್ರೋಹ, ಅಪರಾಧ ಒಳಸಂಚು ಸೇರಿದಂತೆ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿವೆ. ಖಲಿಸ್ತಾನಿ ಗುಂಪಿನ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಎಂದು ಕರೆದುಕೊಳ್ಳುವ ಸಂಘಟನೆ ಈ ಟೂಲ್ಕಿಟ್ ಸೃಷ್ಟಿಸಿದೆ ಎಂದು ಈ ಹಿಂದೆ ದೆಹಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಇದನ್ನು ಪ್ರಸಾರ ಮಾಡಿರುವ ಆರೋಪ ದಿಶಾ ಮೇಲಿದೆ.
ಇದನ್ನೂ ಓದಿ: ಬೆಂಗಳೂರಿನ ಯುವ ಹವಾಮಾನ ಹೋರಾಟಗಾರ್ತಿ ಬಂಧನ