Zomato Case: ಎಫ್ಐಆರ್ ದಾಖಲಾಗುತ್ತಿದ್ದಂತೆ ಬೆಂಗಳೂರನ್ನೇ ಬಿಟ್ಟರಾ ಹಿತೇಶಾ ಚಂದ್ರಾಣಿ? ಪೊಲೀಸರು ಫೋನ್ ಮಾಡಿದರೆ ಆಕೆ ಹೇಳಿದ್ದೇ ಬೇರೆ.. !
ಹಿತೇಶಾ ವಾಪಸ್ ಆದ ಬಳಿಕ ದೂರಿಗೆ ಪ್ರತಿಯಾಗಿ ಹೇಳಿಕೆ ನೀಡಲು ಸಮಯ ನೀಡಿದ್ದೇವೆ. ಅದಾದ ಬಳಿಕ ತನಿಖೆ ಮುಂದುವರಿಯುತ್ತದೆ. ಒಮ್ಮೆ ನೀಡಿದ ಸಮಯದೊಳಗೆ ಬಂದು ವಿಚಾರಣೆಗೆ ಹಾಜರಾಗದೆ ಇದ್ದರೆ ನಾವು ಆಕೆಯನ್ನು ಅರೆಸ್ಟ್ ಮಾಡುತ್ತೇವೆ ಎಂದೂ ಪೊಲೀಸ್ ಅಧಿಕಾರಿ ಹೇಳಿದ್ದಾರೆ ಎನ್ನಲಾಗಿದೆ
ಬೆಂಗಳೂರು: ಕಳೆದ ಒಂದು ವಾರದಿಂದಲೂ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜು ಮತ್ತು ಹಿತೇಶಾ ಚಂದ್ರಾಣಿ ಪ್ರಕರಣ ಸಾಮಾಜಿಕ ಜಾಲತಾಣದ ಮುಖ್ಯ ವಿಷಯವಾಗಿದೆ. ಊಟವನ್ನು ತಡವಾಗಿ ಕೊಟ್ಟಿದ್ದಲ್ಲದೆ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಕಾಮರಾಜು ವಿರುದ್ಧ ಹಿತೇಶಾ ಚಂದ್ರಾಣಿ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ನಂತರ ಅಳುತ್ತ ವಿಡಿಯೋ ಮಾಡಿದ್ದ ಕಾಮರಾಜು, ಪ್ರಕರಣದಲ್ಲಿ ನನ್ನ ತಪ್ಪೇನೂ ಇಲ್ಲ ಎಂದಿದ್ದರು. ಹಾಗೇ ನಿನ್ನೆಯಷ್ಟೇ ಹಿತೇಶಾ ವಿರುದ್ಧ ದೂರನ್ನೂ ನೀಡಿದ್ದಾರೆ.
ಈ ಮಧ್ಯೆ ಹಿತೇಶಾ ಚಂದ್ರಾಣಿ ತಮ್ಮ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಬೆಂಗಳೂರು ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜು ದೂರು ನೀಡಿದ ಹಿನ್ನೆಲೆಯಲ್ಲಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲು ಪೊಲೀಸರು ಹಿತೇಶಾರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಬೆಂಗಳೂರಿನಲ್ಲಿ ಇಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ. ನಾನು ಊಟ ಕೊಡಲು ತಡವಾಗಿದ್ದಕ್ಕೆ ನನ್ನೊಂದಿಗೆ ಜಗಳವಾಡಿದ ಹಿತೇಶಾ, ಚಪ್ಪಲಿಯಿಂದ ಹಲ್ಲೆ ನಡೆಸಿದರು ಎಂದು ಕಾಮರಾಜು ಪ್ರತಿದೂರು ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ತಿಳಿಸಲು ನಾವು ಹಿತೇಶಾರಿಗೆ ಕರೆ ಮಾಡಿದೆವು. ಆದರೆ ಹಿತೇಶಾ ತಾವು ಬೆಂಗಳೂರಿನಲ್ಲಿ ಇಲ್ಲ. ಮಹಾರಾಷ್ಟ್ರದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದೇನೆ ಎಂದು ನಮಗೆ ತಿಳಿಸಿದ್ದಾರೆ ಎಂದು ಬೆಂಗಳೂರು ಎಲಕ್ಟ್ರಾನಿಕ್ ಸಿಟಿ ಪೊಲೀಸರು ಮಾಹಿತಿ ನೀಡಿದ್ದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಹಿತೇಶಾ ವಾಪಸ್ ಆದ ಬಳಿಕ ದೂರಿಗೆ ಪ್ರತಿಯಾಗಿ ಹೇಳಿಕೆ ನೀಡಲು ಸಮಯ ನೀಡಿದ್ದೇವೆ. ಅದಾದ ಬಳಿಕ ತನಿಖೆ ಮುಂದುವರಿಯುತ್ತದೆ. ಒಮ್ಮೆ ನೀಡಿದ ಸಮಯದೊಳಗೆ ಬಂದು ವಿಚಾರಣೆಗೆ ಹಾಜರಾಗದೆ ಇದ್ದರೆ ನಾವು ಆಕೆಯನ್ನು ಅರೆಸ್ಟ್ ಮಾಡುತ್ತೇವೆ ಎಂದೂ ಪೊಲೀಸ್ ಅಧಿಕಾರಿ ಹೇಳಿದ್ದಾರೆ ಎನ್ನಲಾಗಿದೆ.
ಸಿಸಿಟಿವಿ ದೃಶ್ಯವೂ ಇಲ್ಲ ಈ ಜೊಮ್ಯಾಟೊ ಪ್ರಕರಣ ನಿಜಕ್ಕೂ ಕಗ್ಗಂಟಾಗಿದೆ. ಮೊದಲು ಹಿತೇಶಾ ಕಾಮರಾಜು ವಿರುದ್ಧ ಆರೋಪ ಮಾಡಿದ್ದಾರೆ. ಆದರೆ ನಂತರ ಕಾಮರಾಜು ತಮ್ಮ ತಪ್ಪಿಲ್ಲ ಎಂದಿದ್ದಾರೆ. ಘಟನೆಗೆ ನಡೆದಿದೆ ಎನ್ನಲಾದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮರಾವೂ ಇದ್ದಿರದ ಕಾರಣ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಯಾರು ಹೇಳುತ್ತಿರುವುದು ಸರಿ, ಸ್ಪಷ್ಟವಾಗಿ ನಡೆದಿದ್ದಾದರೂ ಏನು ಎಂದು ತಿಳಿಯುತ್ತಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಂತೂ ನೆಟ್ಟಿಗರು ಕಾಮರಾಜು ಅವರಿಗೆ ಸಿಕ್ಕಾಪಟೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜೊಮ್ಯಾಟೋ ಪ್ರಕರಣ: ಹಿತೇಶಾ ಚಂದ್ರಾಣಿ ವಿರುದ್ಧ ಡೆಲಿವರಿ ಬಾಯ್ ಕಾಮರಾಜ್ ದೂರು, ಎಫ್ಐಆರ್ ದಾಖಲು