ಮೈಸೂರಿನಲ್ಲೇ ಚಿತ್ರನಗರಿ ನಿರ್ಮಾಣ ಮಾಡಲು ನಿರ್ಧಾರ: ಸಚಿವ ಸಿ.ಸಿ. ಪಾಟೀಲ್
ಬೆಂಗಳೂರಿನಲ್ಲಿ ಸೂಕ್ತ ಜಾಗ ಸಿಗದ ಹಿನ್ನೆಲೆ ಮೈಸೂರಿನಲ್ಲೇ ಚಿತ್ರನಗರಿ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ವಿಧಾನ ಪರಿಷತ್‌ನಲ್ಲಿ ಸಚಿವ ಸಿ.ಸಿ. ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಫಿಲ್ಮ್ ಸಿಟಿ ನಿರ್ಮಾಣ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ಪರಿಷತ್ ಸದಸ್ಯ ಸಂದೇಶ್ ನಾಗರಾಜ ಪ್ರಶ್ನೆಗೆ ಉತ್ತರಿಸಿದ ಸಚಿವ ಸಿ.ಸಿ.ಪಾಟೀಲ್ ಮೈಸೂರು ಜಿಲ್ಲೆಯ ಹಿಮ್ಮಾವಿನಲ್ಲೇ ಫಿಲ್ಮ್ ಸಿಟಿ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ ಎಂದು ವಿಧಾನ ಪರಿಷತ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಘೋಷಣೆ ಮಾಡಿ, ಹಿಮ್ಮಾವಿನ 110 ಎಕರೆ ಜಮೀನಿನಲ್ಲಿ ಶಂಕು ಸ್ಥಾಪನೆ ಮಾಡಲಾಗಿತ್ತು. ಬಳಿಕ ಕುಮಾರ ಸ್ವಾಮಿ ಸರ್ಕಾರದಲ್ಲಿ ರಾಮನಗರದಲ್ಲಿ ಫಿಲ್ಮ್ ಸಿಟಿ ಮಾಡಲು ತೀರ್ಮಾನ ಮಾಡಲಾಗಿತ್ತು. ಬಳಿಕ ಯಡಿಯೂರಪ್ಪ ಸರ್ಕಾರದಲ್ಲಿ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಮಾಡಲು ತೀರ್ಮಾನ ಮಾಡಲಾಗಿತ್ತು. ಈಗ ಬೆಂಗಳೂರಿನಲ್ಲಿ ಸೂಕ್ತ ಜಾಗ ಸಿಗದ ಹಿನ್ನೆಲೆ ಮೈಸೂರಿನಲ್ಲೇ ಚಿತ್ರನಗರಿ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ವಿಧಾನಪರಿಷತ್‌ನಲ್ಲಿ ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಸಂತಸ: ಮೈಸೂರಿನಲ್ಲೇ ಚಿತ್ರನಗರಿ ನಿರ್ಮಾಣ ಮಾಡಲು ನಿರ್ಧಾರಮಾಡುವುದಕ್ಕೆ ಸದ್ಯ ಮೈಸೂರು ಜಿಲ್ಲೆ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಸಂತಸ ವ್ಯಕ್ತಪಡಿಸಿದ್ದು, ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪನೆ ಮಾಡುವ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಯಡಿಯೂರಪ್ಪ ಹಾಗೂ ಸಿಸಿ ಪಾಟೀಲ್ ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ. ಕರ್ನಾಟಕದಲ್ಲಿ ಸಿನಿಮಾ ಉದ್ಯಮ ವ್ಯಾಪಕವಾಗಿ ಬೆಳೆದಿದ್ದರೂ ಸಹ ರಾಜ್ಯದಲ್ಲಿ ಈ ವರೆಗೆ ಯಾವುದೇ ಫಿಲ್ಮ್ಸಿಟಿ ನಿರ್ಮಾಣವಾಗಿಲ್ಲ.
ಈ ಕೊರತೆಯನ್ನು ಮನಗಂಡು ಮೈಸೂರಿನಿಂದ ಸುಮಾರು 20 ಕಿ.ಮೀ. ದೂರದ ಹಿಮ್ಮಾವು ಸಮೀಪ 110 ಎಕರೆ ಜಾಗದಲ್ಲಿ ಚಿತ್ರನಗರಿ ನಿರ್ಮಾಣ ಮಾಡುವ ಯೋಜನೆಯನ್ನು ಕಾರ್ಯಗತಗೊಳಿಸಲು ಕೆ.ಐ.ಎ.ಡಿ.ಬಿ. ವತಿಯಿಂದ ಜಮೀನುಗಳನ್ನು ಸಹ ಗುರುತಿಸಲಾಗಿದೆ. ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಮಾಡುವುದರಿಂದ ಸಿನಿಮಾ ರಂಗಕ್ಕೆ ಹಾಗೂ ಸ್ಥಳೀಯವಾಗಿ ಹಲವಾರು ಅನುಕೂಲಗಳಿವೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯಲು, ಕನ್ನಡ ಚಿತ್ರೋದ್ಯಮ ಅಭಿವೃದ್ಧಿಗೆ ಹಾಗೂ ಉದ್ಯೋಗ ಸೃಷ್ಟಿಸಲು ಚಿತ್ರನಗರಿ ನೆರವಾಗಲಿದೆ ಎಂದು ಎಸ್. ಟಿ. ಸೋಮಶೇಖರ್ ಹೇಳಿದ್ದಾರೆ.
ಇದನ್ನೂ ಓದಿ:
Published On - 6:16 pm, Wed, 17 March 21