ಅಸ್ಸಾಂ ರಾಜಕಾರಣದಲ್ಲಿ ಅಭಿವೃದ್ಧಿ ಮಾತ್ರವಲ್ಲ, ಅಸ್ಮಿತೆಯೂ ನಿರ್ಣಾಯಕ ಪಾತ್ರ ವಹಿಸುತ್ತೆ: ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ

Assam Assembly Elections 2021: ಅಸ್ಸಾಂನಲ್ಲಿ ಬರೀ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸಿ ಹೋರಾಟ ನಡೆಸಲು ಸಾಧ್ಯವಿಲ್ಲ. ಯಾಕೆಂದರೆ ಅಸ್ಮಿತೆಯ ಸಮಸ್ಯೆ ಜ್ವಲಂತವಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅಸ್ಮಿತೆ ತುಂಬಾ ನಿರ್ಣಾಯಕವಾದುದು ಅಂತಾರೆ ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ.

ಅಸ್ಸಾಂ ರಾಜಕಾರಣದಲ್ಲಿ ಅಭಿವೃದ್ಧಿ ಮಾತ್ರವಲ್ಲ, ಅಸ್ಮಿತೆಯೂ ನಿರ್ಣಾಯಕ ಪಾತ್ರ ವಹಿಸುತ್ತೆ: ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ
ಹಿಮಂತ ಬಿಸ್ವ ಶರ್ಮಾ
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 17, 2021 | 9:14 PM

ಅಸ್ಸಾಂ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ  ನಡೆಯುತ್ತಿದ್ದು ಮೊದಲ ಹಂತದ  ಚುನಾವಣೆ ಮಾರ್ಚ್ 27ರಂದು ನಡೆಯಲಿದೆ. ಏಪ್ರಿಲ್ 1 ಮತ್ತು ಏಪ್ರಿಲ್ 5ರಂದು ಎರಡು, ಮೂರನೇ  ಹಂತದ ಚುನಾವಣೆ ನಡೆಯಲಿದೆ.  ಎಲ್ಲ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿದ್ದು ಬಿಜೆಪಿ,  ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ಟೀಕಾಪ್ರಹಾರ ಮಾಡುತ್ತಲೇ ಇದೆ. ಕಾಂಗ್ರೆಸ್ ಪಕ್ಷವು ಎಐಯುಡಿಎಫ್ (AIDUF) ಜತೆ ಮೈತ್ರಿ ಮಾಡಿಕೊಂಡಿರುವುದನ್ನೇ ಪ್ರಧಾನ ವಿಷಯವಾಗಿರಿಸಿಕೊಂಡು ಎಐಯುಡಿಎಫ್  ನಾಯಕ  ಅಜ್ಮಲ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಅಸ್ಸಾಂ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಸಕ್ರಿಯರಾಗಿರುವ ಬಿಜೆಪಿಯ ಅಸ್ಸಾಂ ಘಟಕದ  ನಾಯಕ  ಹಿಮಾಂತ ಬಿಸ್ವ ಶರ್ಮಾ ಅವರ ಜತೆ ‘ಇಂಡಿಯನ್ ಎಕ್ಸ್​ಪ್ರೆಸ್’​ ಪತ್ರಿಕೆ ನಡೆಸಿದ ಸಂದರ್ಶನದ ಮುಖ್ಯ ಅಂಶಗಳು ಇಲ್ಲಿವೆ.

ಅಸ್ಸಾಂನ ಆರ್ಥಿಕ, ಶಿಕ್ಷಣ ಹಾಗೂ ಆರೋಗ್ಯ ಸಚಿವರಾಗಿದ್ದವರು ನೀವು. ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ ಮಹತ್ತರವಾದುದು ಎಂದು ನಿಮಗೆ ಅನಿಸಿದ್ದು ಯಾವುದು? ಒರುನೋದಯ್  22 ಲಕ್ಷ ಮಹಿಳೆಯರಿಗೆ ನೇರವಾಗಿ  ಪ್ರಯೋಜನ ನೀಡುತ್ತಿದೆ.  ಕಳೆದ 6 ತಿಂಗಳಿನಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 830 ರೂಪಾಯಿ ಜಮೆ ಆಗುತ್ತಿದೆ. ಇದರ ಜತೆ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ನೀಡುತ್ತಿರುವ ಬಗ್ಗೆ ನನಗೆ ಸಂತೃಪ್ತಿ ಇದೆ. ಪ್ರತಿ ವರ್ಷ ಪದವಿಪೂರ್ವ ಶಿಕ್ಷಣದವರೆಗೆ ನಾಲ್ಕು ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ, ಉಚಿತ ಪಠ್ಯ ಪುಸ್ತಕ ಸಿಗುತ್ತದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಖರೀದಿಸಲು ಹಣ ನೀಡಲಾಗುತ್ತದೆ. ಈ ಯೋಜನೆಯಿಂದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇದರ ಜತೆಗೆ ಆರೋಗ್ಯ ವಲಯದಲ್ಲಿರುವ ಆಯುಷ್ಮಾನ್ ಭಾರತ್, ಅಟಲ್ ಅಮೃತ್ ಅಭಿಜನ್ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಜಿನ ಸಹಾಯವನ್ನು ನೀಡಿದೆ.

ನಿರ್ದಿಷ್ಟ ವಲಸೆಗಾರ ಸಮುದಾಯದರಿಂದ ಅಸ್ಸಾಂಗೆ ಬೆದರಿಕೆ ಇದೆ ಎಂಬುದರ ಬಗ್ಗೆಯೇ ನೀವು ನಿಮ್ಮ ಪ್ರಚಾರ ಕಾರ್ಯಕ್ರಮದಲ್ಲಿ ಉಲ್ಲೇಖಿಸುತ್ತಿದ್ದೀರಿ. ಯಾಕೆ? ದೇಶ ವಿಭಜನೆಯಾದಂದಿನಿಂದ ಒಳನುಸುಳುಕೋರರ ವಿರುದ್ಧ ಹೋರಾಡುತ್ತಾ ಬಂದಿರುವ ರಾಜ್ಯವಾಗಿದೆ ಅಸ್ಸಾಂ. ಹಾಗಾಗಿ ಅಸ್ಸಾಂನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಜೀವನ ಎಲ್ಲವೂ ಇದೇ ವಿಷಯದ ಮೇಲೆ ಆಧಾರಿತವಾಗಿದೆ. ಲೋಕಪ್ರಿಯ ಗೋಪಿನಾಥ್ ಬರ್ದೊಲೊಯ ಮತ್ತು ಬಿಮಲಾ ಪ್ರಸಾದ್ ಚಲಿಹಾ ಅವರು ಕೂಡಾ ಇದೇ ಸಮಸ್ಯೆ ವಿರುದ್ಧ ಹೋರಾಡಿದ್ದರು. ಇಂದಿಗೂ ಈ ಸಮಸ್ಯೆ ಬಗೆಹರಿದಿಲ್ಲ. ಈಗಲೂ ನೀವು ಅಸ್ಸಾಂನ ಕೆಳಭಾಗದ ಜಿಲ್ಲೆಗಳಿಗೆ ಹೋದರೆ ನಿರ್ದಿಷ್ಟವಾಗಿ ಮುಸ್ಲಿಂ ಪ್ರಾತಿನಿಧ್ಯವಿರುವ ಚುನಾವಣಾ ಕ್ಷೇತ್ರಗಳಿಗೆ ಭೇಟಿ ನೀಡಿದರೆ ಅವರು ತಮಗೆ ಸರ್ಕಾರದ ಎಲ್ಲ ಯೋಜನೆಗಳು ಸಿಕ್ಕಿರುವುದನ್ನು ಗಮನಿಸಬಹುದು. ಆದರೆ ನಾವು ಬಿಜೆಪಿ ವಿರುದ್ಧ ಹೋರಾಡುತ್ತೇವೆ ಅಂತಾರೆ. ನಮಗೆ ಅವರ ಮೇಲೆ ಹಗೆತನವಿಲ್ಲ. ನಮಗೆ ಮತ ಸಿಗುವುದಿಲ್ಲ ಎಂದು ಗೊತ್ತಿದ್ದರೂ ನಾವು ತಾರತಮ್ಯ ಮಾಡುವುದಿಲ್ಲ. ವಲಸೆ ಬಂದಿರುವ ಮುಸ್ಲಿಂ ಸಮುದಾಯದವರನ್ನು ಸೇರಿ ನಾವು ಎಲ್ಲರನ್ನೂ (ಹಿಂದೂ- ಮುಸ್ಲಿಂ) ಸಮಾನರಾಗಿ ಕಾಣುತ್ತೇವೆ. ಈ ಎರಡೂ ಸಮುದಾಯಗಳು ರಾಜಕೀಯವಲಯದಲ್ಲಿ ಮೂರ್ಖತನ ತೋರಿಸುತ್ತವೆ. ಅಸ್ಸಾಂನಲ್ಲಿ ಬರೀ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸಿ ಹೋರಾಟ ನಡೆಸಲು ಸಾಧ್ಯವಿಲ್ಲ. ಯಾಕೆಂದರೆ ಅಸ್ಮಿತೆಯ (ನೆಲದ ಸಂಸ್ಕೃತಿ) ಸಮಸ್ಯೆ ಜ್ವಲಂತವಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅಸ್ಮಿತೆ ತುಂಬಾ ನಿರ್ಣಾಯಕವಾದುದು. ನಿಮಗೆ ಉಚಿತ ಪ್ರವೇಶ ಸಿಗಬಹುದಾದರೆ ನಿಮ್ಮ ಮೊಂಟೆಸರಿಗಳು ಒತ್ತುವರಿಯಾಗಬಹುದು. ನಿಮಗೆ ಒರುನೊದಯ್ ಸಿಗಬಹುದು ಆದರೆ ಪ್ರತಿ ದಿನ ನಿಮ್ಮ ಸುತ್ತುಮುತ್ತ ಹೊಸ ಜನರು ಬಂದು ಖಾಲಿ ಜಮೀನುಗಳನ್ನು ವಶಪಡಿಸಿಕೊಳ್ಳುತ್ತಾರೆ.

ನೀವು ಮತ್ತು ಬಿಜೆಪಿ ನಾಯಕರು ಪದೇಪದ ಬದ್ರುದ್ದೀನ್ ಅಜ್ಮಲ್ ಬಗ್ಗೆ ಮಾತನಾಡುತ್ತಿರುತ್ತೀರಲ್ಲಾ.. ಅಜ್ಮಲ್ ಒಬ್ಬ ವ್ಯಕ್ಕಿ ಬಿಟ್ಟರೆ ಬೇರೇನೂ ಅಲ್ಲ. ಆದರೆ ಈಗ ಅವರು ಅಸ್ಮಿತೆಗೆ ಬೆದರಿಕೆಯೊಡ್ಡುತ್ತಿದ್ದಾರೆ. ಆತ ನಿರ್ದಿಷ್ಟ ಸಂಸ್ಕೃತಿಯೊಂದರ ಸಂಕೇತ. ಆತನನ್ನ ನಾವು ದೊಡ್ಡ ಅಪಾಯ ಎಂದು ಪರಿಗಣಿಸಿದ್ದೇವೆ. ಹಾಗಾಗಿಯೇ ಅವರನ್ನು ಉಲ್ಲೇಖಿಸುತ್ತಲೇ ಇರುತ್ತೇವೆ. ನಾವು ಅಜ್ಮಲ್ ವಿರುದ್ಧ ವಾಗ್ದಾಳಿ ನಡೆಸುವಾಗ ನಾವು ನಿಜವಾಗಿಯೂ ಯಾರ ವಿರುದ್ಧ ಮಾತನಾಡುತ್ತಿದ್ದೇವೆ ಎಂಬುದು ಅಸ್ಸಾಂ ಜನರಿಗೆ ಮನವರಿಕೆಯಾಗುತ್ತದೆ. ನಾಳೆ ಅಜ್ಮಲ್ ಇಲ್ಲದೇ ಇದ್ದರೆ ನಾವು ಆ ಸಮುದಾಯದ ಹೆಸರನ್ನು ಉಲ್ಲೇಖಿಸಲೂಬಹುದು. ಇವತ್ತು ನಾವು ಚುನಾವಣಾ ಆಯೋಗದ ಪರಿಶೀಲನೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನಾವು ಅವರ ವಿರುದ್ಧ ವಾಗ್ದಾಳಿ ಮಾಡುತ್ತಿದ್ದೇವೆ. ಆದರೆ ವೈಯಕ್ತಿಕವಾಗಿ ನಮಗೆ ಅಜ್ಮಲ್ ಜತೆ ಉತ್ತಮ ಸಂಬಂಧ ಹೊಂದಿದ್ದೇವೆ.

ಹಿಮಂತ ಬಿಸ್ವ ಶರ್ಮಾ ಮುಸ್ಲಿಂ ವಿರೋಧಿಯಾ ಎಂದು ಜನರು ಕೇಳಿದರೆ? ನನ್ನ ಸಭೆಯಲ್ಲಿ ಭಾಗವಹಿಸುವವರಲ್ಲಿ ಹೆಚ್ಚಿನವರು ಮುಸ್ಲಿಮರು. ಹಾಗಾಗಿ ನಾನು ಕೋಮುವಾದಿ ರಾಜಕಾರಣಿ ಅಥವಾ ನಿರ್ದಿಷ್ಟ ಸಮುದಾಯದ ವಿರೋಧಿ ಎಂದು ನನಗೆ ಅನಿಸಿಲ್ಲ. ನೀವು ನಾನು ನಿಭಾಯಿಸಿದ ಇಲಾಖೆಯ ದಾಖಲೆ ಪರಿಶೀಲಿಸಿ ನೋಡಿದರೆ ಅದರಲ್ಲಿ ಅತಿಹೆಚ್ಚು ಲಾಭ ಪಡೆದ ಸಮುದಾಯ ಮುಸ್ಲಿಂ ಆಗಿದೆ. ಕೊವಿಡ್ ಸಂಕಷ್ಟದ ಸಮಯದಲ್ಲಿ ತಬ್ಲೀಗಿ ಜಮಾತ್ ನಲ್ಲಿ ಭಾಗವಹಿಸಿದರಿಂದ ಕೊರೊನಾ ಸೋಂಕು ತಗುಲಿದ ಜನರಿಗೆ ನಾವು ಉತ್ತಮ ಚಿಕಿತ್ಸೆ ನೀಡಿದ್ದೇವೆ. ಅವರು ಚೇತರಿಸಿಕೊಂಡ ನಂತರ ಅವರನ್ನು ಭೇಟಿ ಮಾಡಿ ಉಡುಗೊರೆ ನೀಡಿದ್ದೆ.  ನಾನು ಮುಕ್ತವಾಗಿ ಮಾತನಾಡುತ್ತಿರುವುದರಿಂದ ಅಸ್ಸಾಂನ ಹೊರಗಿರುವವರು ನಾನು ಮುಸ್ಲಿಂ ವಿರೋಧಿ ಎಂದು ಭಾವಿಸುವ ಸಾಧ್ಯತೆ ಇದೆ. ಆದರೆ ನೀವು ಬೇರೆ ಯಾವುದಾದರೂ ಮುಸ್ಲಿಂ ವ್ಯಕ್ತಿಯಲ್ಲಿ ಕೇಳಿ ನೋಡಿ… ಪ್ರತಿದಿನ ನನ್ನನ್ನು ಭೇಟಿ ಮಾಡಲು ಬರುವ 400 ಸಂದರ್ಶಕರ ಪೈಕಿ 150-200 ಮಂದಿ ಮುಸ್ಲಿಮರೇ ಆಗಿರುತ್ತಾರೆ.

ಈಗ ಬಿಜೆಪಿ ಅಧಿಕಾರದಲ್ಲಿರುವ ಕಾರಣ ಜನರು ಹಿಂದುತ್ವದ ದೃಷ್ಟಿಯಲ್ಲಿಯೇ ಎಲ್ಲವನ್ನೂ ನೋಡುತ್ತಿದ್ದರೆ. ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರುವುದಕ್ಕೆ ಇದು ಯಾವುದೂ ಕಾರಣವಾಗುವುದಿಲ್ಲ. 1935ರಲ್ಲಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಸರ್ಕಾರ ರಚನೆ ಮಾಡಲು ಜಗಳ ಆಡಿದ ಹೊತ್ತಿನಲ್ಲಿ ಇದೇ ಸಮಸ್ಯೆ ಬಗ್ಗೆ ಕಾಂಗ್ರೆಸ್ ದನಿಯೆತ್ತಿತ್ತು. ಜಾತ್ಯಾತೀತ ನಾಯಕರಾಗ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಮತ್ತು ಹಿತೇಶ್ವರ್ ಸೈಕಿಯಾ ಕೂಡಾ ಇದೇ ಸಮಸ್ಯೆಗಳನ್ನು ಉಲ್ಲೇಖಿಸಿದ್ದರು.

ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿಕೂಟವನ್ನು ನೀವು ಹೇಗೆ ನೋಡುತ್ತೀರಿ? ಹೆಸರಿನಲ್ಲಿಯೇ ಮಹಾ ಎಂದು ಇದೆ. ಕಾಂಗ್ರೆಸ್- ಎಐಯುಡಿಫ್ ಮೈತ್ರಿಕೂಟ ಮಹಾ ಮೈತ್ರಿಕೂಟ ಎಂದು ಕರೆಯಲ್ಪಡುತ್ತದೆ. ಬಿಜೆಪಿ ನಿಚ್ಚಳವಾಗಿ ಗೆಲುವು ಸಾಧಿಸುವ ಸೀಟುಗಳನ್ನು ಅದು ಎಡರಂಗಕ್ಕೆ ನೀಡಿದೆ. ಹೀಗಿದ್ದರೂ ಅದು ಮಹಾ ಮೈತ್ರಿಕೂಟ ಎಂದು ಅವರು ಹೇಳುತ್ತಾರೆ. ಅಲ್ಲಿರುವುದು ಕಾಂಗ್ರೆಸ್ -ಎಐಯುಡಿಎಫ್ ಮತ್ತು ಹಂಗ್ರಾಮಾ (ಬೊಡೊಲ್ಯಾಂಡ್ ಪೀಪಲ್ಸ್ ಫ್ರಂಟ್ ಹಂಗ್ರಾಮಾ ಮೊಹಿಲರಿ) ಜತೆಗಿರುವ ಮೈತ್ರಿಕೂಟ.

ಬಿಜೆಪಿ ನೇತೃತ್ವದ ಮೈತ್ರಿಕೂಟದಿಂದ ಬಿಪಿಎಫ್ ಹೊರನಡೆದಿದ್ದೇಕೆ? ಬಿಪಿಎಫ್ ಜತೆ ನಾವು ಮೈತ್ರಿ ಮಾಡಲು ಇಚ್ಛಿಸದೇ ಇರುವ ಕಾರಣ ಮೊಹಿಲರಿ ಹೊರ ನಡೆದರು. ಅದು ಸರಿಯಾದ ನಿರ್ಧಾರವಾಗಿತ್ತು. ನಮ್ಮ ಜತೆ ಯುಪಿಪಿಎಲ್ (United People’s Party Liberal) ಇದೆ. ವಿಷಯ ಇಷ್ಟೇ ಮೊಹಿಲರಿ ಬೊಡೊಲ್ಯಾಂಡ್ ಟೆರಿಟೊರಿಯಲ್ ಕೌನ್ಸಿಲ್ ಅನ್ನು 5 ವರ್ಷಗಳಿಂದ ನಡೆಸುತ್ತಾ ಬಂದಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಸಹಿ ಹಾಕಿದ ಬೊಡೊ ಒಪ್ಪಂದದ ಬಗ್ಗೆ ಅವರು ಟೀಕೆ ಮಾಡಿದ್ದನ್ನು ನೋಡಿ ನಮ್ಮ ಮೈತ್ರಿ ಮುರಿದು ಬಿತ್ತು. ಪ್ರಧಾನಿಯವರನ್ನು ಟೀಕಿಸುವವರ ಜತೆ ಏನು ಮೈತ್ರಿ ಮಾಡುವುದು

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಹುಟ್ಟಿಕೊಂಡ ಎರಡು ಪ್ರಾದೇಶಿಕ ಪಕ್ಷಗಳನ್ನು ನೀವು ಹೇಗೆ ನೋಡುತ್ತೀರಿ? ಅವರು ಹಲವಾರು ಭರವಸೆಗಳನ್ನು ನೀಡಿದ್ದರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಅವು ಪರಸ್ಪರ ವಿರುದ್ಧ ಬಣಗಳಾಗಿ ಇಲ್ಲವಾದುವು. ಸಿಎಎ ವಿಷಯ ಹಿಂದೆ ತಳ್ಳಲ್ಪಟ್ಟಿತ್ತು. ಕೊವಿಡೋತ್ತರ ಕಾಲದಲ್ಲಿ ಅಸ್ಸಾಂ ಜನರು ಸಿಎಎ ಬಗ್ಗೆ ಮಾತನಾಡುತ್ತಿಲ್ಲ. ಅದರ ಬಗ್ಗೆ ಮಾತನಾಡಿದರೆ ಚಳವಳಿ ಮತ್ತೆ ಶುರುವಾದರೆ ಎಂಬ ಭಯ ಅವರಿಗಿದೆ. ಸಿಎಎ ವಿರುದ್ಧ ಅಥನಾ ಪರ ಪ್ರತಿಭಟನೆಯನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಜನರಿಲ್ಲ. ಕೊವಿಡ್ ಸಾಂಕ್ರಾಮಿಕದಿಂದಾಗಿ ಜನರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ.

ಸಿಎಎಯನ್ನು ರದ್ದು ಮಾಡುತ್ತೇವೆ ಎಂದಿದ್ದರು ಪ್ರಿಯಾಂಕಾ ಗಾಂಧಿ.. ಅಸ್ಸಾಂನ ಜನರು ರಾಜಕೀಯವಾಗಿ ಪ್ರಬುದ್ಧರು. ಸಂಸತ್​ನಲ್ಲಿ ಅಂಗೀಕಾರವಾದ ಕಾನೂನನ್ನು ರದ್ದು ಮಾಡುತ್ತೇವೆ ಎಂದು ಹೇಳಿದಾಗ ಅದನ್ನು ಜನ ನಂಬುತ್ತಾರೆ ಎಂದು ಪ್ರಿಯಾಂಕಾ ಯೋಚಿಸಲೇಬಾರದು. ನಾವು ದೇಶದ ಮೂಲೆಯಲ್ಲಿರುವ ರಾಜ್ಯ ಆಗಿರುವುದರಿಂದ ನಮಗೇನೂ ಗೊತ್ತಿಲ್ಲ ಎಂದು ಅವರು ಭಾವಿಸುತ್ತಿದ್ದಾರೆಯೇ? ಸಿಎಎ ಮತ್ತು ಎನ್​ಆರ್​ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ವಿಷಯ ಜನರಲ್ಲಿ ಅನುರಣಿಸುತ್ತಿಲ್ಲ. ಎನ್​ಆರ್​ಸಿ ಮತ್ತು ಅಸ್ಸಾಂ ಒಪ್ಪಂದ 6ನೇ ಕಲಂ ನಮಗೆ ತುಂಬಾ ಮಹತ್ತರವಾಗಿದ್ದು, ಅದರ ಬಗ್ಗೆ ಚರ್ಚೆಯಾಗಬೇಕು ಎಂದು ನಾನು ಬಯಸುತ್ತೇನೆ. ಆದರೆ ಜನರು ಇದರ ಬಗ್ಗೆ ಕಿವಿಗೊಡುತ್ತಿಲ್ಲ.

ಅಜ್ಮಲ್ ಜತೆ ಕಾಂಗ್ರೆಸ್ ಮೈತ್ರಿಕೊಂಡಿರುವುದೇ ವಿಪರ್ಯಾಸ. ಸಿಎಎಯಿಂದ ತಮಗೆ ಪ್ರಯೋಜನವಾಗಲಿದೆ ಎಂದು ಕಾಂಗ್ರೆಸ್ ಬಯಸಿದರೂ ಅಜ್ಮಲ್ ಜತೆಗಿ ರುವ ಕಾರಣ ಅದನ್ನು ಕಡೆಗಣಿಸಲೇಬೇಕಾಗುತ್ತದೆ ಯಾಕೆಂದರೆ ಆ ಕಾಯ್ದೆ ಇರುವುದು ಹಿಂದೂ ಬಂಗಾಳಿಗಳಿಗೆ, ಪ್ರಾದೇಶಿಕ ಅಸ್ಸಾಂಮಿಗಳಿಗೆ, ಹಿಂದೂ ಬಂಗಾಳಿ ಸಮಸ್ಯೆ ಎಂದಾದರೆ ಬಂಗಾಳಿ ಮುಸ್ಲಿಂ ಕೂಡಾ ಸಮಸ್ಯೆಯೇ. ಹಾಗಾಗಿ ಬಂಗಾಳಿ ಮುಸ್ಲಿಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಸ್ಸಾಂ ಜನರ ಸಮಸ್ಯೆ ನಿವಾರಿಸುತ್ತೇವೆ ಎಂದು ಹೇಳಲಾಗುವುದಿಲ್ಲ. ಆದ್ದರಿಂದಲೇ ಕಾಂಗ್ರೆಸ್ ಎಐಯುಡಿಎಫ್ ಜತೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದರೆ ಸಿಎಎ ವಿರುದ್ಧ ದನಿಯೆತ್ತುವುದು ಸಮರ್ಥನೀಯ ಆಗುತ್ತಿತ್ತು.

ನೀವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ರಿ, ಈಗ ಸ್ಪರ್ಧಿಸುತ್ತಿದ್ದೀರಲ್ಲಾ.. ನಾನು ಚುನಾವಣೆ ಸ್ಪರ್ಧಿಸದೇ ಇದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗಿ , ಇದು ವಿಪಕ್ಷಗಳಿಗೆ ಸಹಾಯವಾಗುತ್ತಿತ್ತು. ಈಗ ಅಜ್ಮಲ್ ಸಿದ್ಧಾಂತ ವಿರುದ್ಧ ಹೋರಾಡಬೇಕಿದೆ. ಪಕ್ಷ ನಿರ್ಧರಿಸಿದಾಗ ನಾನು ಅದನ್ನು ಸ್ವೀಕರಿಸಿದೆ. ಇದು ರಾಜ್ಯದ ಬಗ್ಗೆ ಇರುವ ಜವಾಬ್ದಾರಿ. ಕಾಂಗ್ರೆಸ್-ಎಐಯುಡಿಎಫ್ ಮೈತ್ರಿ ಇಲ್ಲದೇ ಇದ್ದರೆ ಮಾತು ಬೇರೆ ಇರ್ತಿತ್ತು.

ಚುನಾವಣೆ ಮುಗಿದ ನಂತರ ನಾವು ಹೊಸ ಜವಾಬ್ದಾರಿಯಲ್ಲಿ ನಾವು ನಿಮ್ಮನ್ನು ಕಾಣಬಹುದೇ? ನಿಮಗೆ ನಮ್ಮ ಪಕ್ಷದ ರೀತಿ ಗೊತ್ತಿದೆ. ಈ ವಿಷಯದ ಬಗ್ಗ ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷರು ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಜ್ಯದ ಘಟಕಗಳು ಇಲ್ಲಿ ಮುಖ್ಯ ಸ್ಥಾನ ಅಲ್ಲ. ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ಎಲ್ಲರೂ ಅದನ್ನು ಪಾಲಿಸಬೇಕು. ಈ ಬಗ್ಗೆ ಯಾವುದೇ ಮಾಧ್ಯಮಗಳಲ್ಲಿ ಚರ್ಚೆ ಮಾಡಲಾಗುವುದಿಲ್ಲ. ಇದೆಲ್ಲಾ ಹಿನ್ನೆಲೆಯಲ್ಲಿಯೇ ನಡೆಯುತ್ತದೆ. ನಾವು ಐದು ವರ್ಷಗಳ ಕಾಲ ರಾಜ್ಯವನ್ನು ಮುನ್ನಡೆಸಲು ದುಡಿಯಬೇಕು, ಇದು ವೈಯಕ್ತಿಕ ಗುರಿಗಳಿಗಿಂತ ಮುಖ್ಯವಾದುದು.

ಇದನ್ನೂ ಓದಿ:  Assam Assembly Elections 2021: ರಾಜಕೀಯದಲ್ಲಿ ಬಿಜೆಪಿ ನನ್ನನ್ನು ಮುಗಿಸಲು ಯತ್ನಿಸುತ್ತಿದೆ: ಎಐಯುಡಿಎಫ್ ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್