‘ಶಿವಣ್ಣ-ದರ್ಶನ್ ಸರ್ಗೆ ಕ್ಷಮೆ ಕೇಳು’; ಸಾರಿ ಕೇಳಿದ ಮಡೆನೂರು ಮನುಗೆ ಧ್ರುವ ಸರ್ಜ ಕಿವಿಮಾತು
Madenuru Manu: ಮಡೆನೂರು ಮನು ಅವರನ್ನು ಅತ್ಯಾಚಾರದ ಆರೋಪದ ಅಡಿ ಬಂಧಿಸಲಾಯಿತು. ಸ್ಟಾರ್ ನಟರ ವಿರುದ್ಧ ಮಾಡಿದ ಅವರ ವಿವಾದಾತ್ಮಕ ಹೇಳಿಕೆಗಳ ಆಡಿಯೋ ವೈರಲ್ ಆಗಿತ್ತು. ಪರಿಣಾಮವಾಗಿ ಚಿತ್ರರಂಗದಿಂದ ಅವರನ್ನು ನಿಷೇಧಿಸಲಾಯಿತು. ಆದರೆ, ಧ್ರುವ ಸರ್ಜಾ ಅವರಿಗೆ ಕ್ಷಮೆಯಾಚಿಸಿ, ಅವಕಾಶ ಕೋರಿದ್ದಾರೆ.

ಮಡೆನೂರು ಮನು (Madenuru Manu) ಅವರು ಇತ್ತೀಚೆಗೆ ಬೇಡದ ಕಾರಣಗಳಿಂದ ಸುದ್ದಿ ಆಗುತ್ತಿದ್ದಾರೆ. ಅವರ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂತು. ಹೀಗಾಗಿ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ಈ ಮೊದಲು ಅವರು ಸ್ಟಾರ್ ಹೀರೋಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಆಡಿಯೋನ ಈ ಸಂದರ್ಭದಲ್ಲಿ ವೈರಲ್ ಮಾಡಲಾಯಿತು. ಈ ಬೆನ್ನಲ್ಲೇ ಸಾಕಷ್ಟು ವಿರೋಧ ಕೇಳಿ ಬಂದಿತ್ತು. ಅಲ್ಲದೆ ಅವರ ವಿರುದ್ಧ ಅಸಹಕಾರ ತೋರಿಸುವ ನಿರ್ಧಾರವನ್ನು ಫಿಲ್ಮ್ ಚೇಂಬರ್ನಲ್ಲಿ ತೆಗೆದುಕೊಳ್ಳಲಾಯಿತು. ಈಗ ಮನು ಅದು ತಮ್ಮದೇ ಆಡಿಯೋ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಧ್ರುವ ಸರ್ಜಾಗೆ ಕ್ಷಮೆ ಕೇಳಿದ್ದಾರೆ.
ಧ್ರುವ ಸರ್ಜಾ ಜೊತೆ ವಾಟ್ಸಾಪ್ನಲ್ಲಿ ಮಡೆನೂರು ಮನು ಚಾಟ್ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಧ್ರುವ ಅವರಿಗೆ ಆಡಿಯೋ ಸಂದೇಶ ಕಳುಹಿಸಿದ್ದಾರೆ. ‘ನನ್ನ ಕರಿಯರ್ ಮೇಲೆ ಆಣೆ ಮಾಡಿ ಹೇಳುತ್ತೇನೆ. ಉದ್ದೇಶ ಪೂರ್ವಕವಾಗಿ ನಾನು ಹಾಗೆ ಮಾತನಾಡಿಲ್ಲ. ನನ್ನಿಂದ ತಪ್ಪು ಮಾಡಿಸಿದ್ದಾರೆ. ಒಳ್ಳೆಯ ಸಿನಿಮಾನ ಕೊಂದುಬಿಟ್ಟರು. ಕಲೆ ನಂಬಿ ಬಂದಿದ್ದೇನೆ. ಇಂಡಸ್ಟ್ರಿಯಿಂದ ಬ್ಯಾನ್ ಎಂದು ಹೇಳುತ್ತಿದ್ದಾರೆ. ಒಂದು ಅವಕಾಶ ಕೊಡಿ ಧ್ರುವ ಅಣ್ಣ’ ಎಂದು ಮಡೆನೂರು ಮನು ಕೋರಿದ್ದಾರೆ.
‘ನಾನು ಬದಲಾಗ್ತೀನಿ. ಬದಲಾಗಲು ಅವಕಾಶ ಮಾಡಿಕೊಡಿ. ಜೈಲಿನಿಂದ ಹೊರ ಬಂದ ಬಳಿಕ ಖಿನ್ನೆತೆಗೆ ಒಳಗಾಗಿದ್ದೆ. ನೀವು ಎಲ್ಲಿ ಸಿಕ್ಕರೂ ಬಂದು ಕ್ಷಮೆ ಕೇಳುತ್ತೇನೆ. ಆಶೀರ್ವಾದ ಪಡೆದುಕೊಳ್ಳುತ್ತೇನೆ’ ಎಂದು ಕೂಡ ಮಡೆನೂರು ಮನು ಹೇಳಿದ್ದಾರೆ.
ಮನು ಕ್ಷಮೆಗೆ ಸ್ಪಂದಿಸಿದ ಧ್ರುವ ಸರ್ಜಾ
ಧ್ರುವ ಸರ್ಜಾ ಅವರು ಹೃದಯವಂತರು. ಯಾರಾದರೂ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೂ ಅವರಿಗೆ ಒಳ್ಳೆಯದನ್ನೇ ಬಯಸುತ್ತಾರೆ. ಇದಕ್ಕೆ ಮಡೆನೂರು ಮನು ಪ್ರಕರಣ ಹೊಸ ಸಾಕ್ಷಿ. ‘ನನ್ನ ಬಗ್ಗೆ ಯೋಚಿಸಬೇಡ. ಕುಟುಂಬ, ಮಕ್ಕಳ ಬಗ್ಗೆ ಕಾಳಜಿವಹಿಸು. ಶಿವಣ್ಣ ಹಾಗು ದರ್ಶನ್ ಸರ್ಗೆ ಕರೆ ಮಾಡಿ ಮಾತನಾಡು. ಅವರುಗಳು ನಮ್ಮ ಸೀನಿಯರ್ಸ್’ ಎಂದು ಕಿವಿಮಾತು ಹೇಳಿದ್ದಾರೆ. ಈ ಮೂಲಕ ಧ್ರುವ ಕೂಡ ಅವರನ್ನು ಕ್ಷಮಿಸಿದ್ದಾಗಿ ಪರೋಕ್ಷವಾಗಿ ಹೇಳಿದ್ದಾರೆ.
ಇದನ್ನೂ ಓದಿ: ‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮಡೆನೂರು ಮನು ಮೊದಲ ರಿಯಾಕ್ಷನ್
ಸದ್ಯ ಧ್ರುವ ಅವರ ನಡೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ತಮಗೆ ಕೆಟ್ಟದನ್ನು ಬಯಸಿದರೂ ಧ್ರುವ ಅವರು ಒಳ್ಳೆಯದನ್ನೇ ಮಾಡುತ್ತಾರಲ್ಲ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:16 pm, Sat, 14 June 25








