ಅಮೆರಿಕದ ಏರ್ ಫೋರ್ಸ್ ಬ್ಯಾಂಡ್ಗೆ ಗಿರಿಧರ ಉಡುಪರ ಘಟಂ ಸಹಯೋಗ
ಅದ್ಭುತ ಸಂಗೀತ ಕಲಾವಿದರ ಸಹಯೋಗದಲ್ಲಿ ರೂಪುಗೊಂಡಿರುವ ಹೊಸ ಮ್ಯೂಸಿಕ್ ಟ್ರ್ಯಾಕ್ ಬಗ್ಗೆ ಅಪಾರ ಸಂತೋಷವಿದೆ ಎಂದು ಫ್ಯೂಷನ್ನಲ್ಲಿ ಭಾಗವಹಿಸಿರುವ ಭಾರತೀಯ ಘಟಂ ಕಲಾವಿದ ಗಿರಿಧರ್ ಉಡುಪ ಹೇಳಿದ್ದಾರೆ.
ದೆಹಲಿ: ಭಾರತದ ಖ್ಯಾತ ತಾಳವಾದ್ಯ ಕಲಾವಿದ ಗಿರಿಧರ್ ಉಡುಪ, ಅಮೆರಿಕದ ಹವಾಯಿ ಮೂಲದ ಏರ್ ಫೋರ್ಸ್ ಬ್ಯಾಂಡ್ ಆಫ್ ದ ಫೆಸಿಫಿಕ್ ರೂಪಿಸಿರುವ ಮ್ಯೂಸಿಕ್ ವಿಡಿಯೋದಲ್ಲಿ ಘಟಂ ವಾದಕರಾಗಿ ಸಹಯೋಗ ನೀಡಿದ್ದಾರೆ. ಏರೋ ಇಂಡಿಯಾ 2021, ಅಮೆರಿಕ, ಭಾರತದ ಸೇನಾ ಸಹಯೋಗ ಹಾಗೂ ಎರಡೂ ದೇಶದ ಜನರ ನಡುವಿನ ಒಗ್ಗಟ್ಟನ್ನು ಪ್ರೋತ್ಸಾಹಿಸುವ ಬ್ಯಾಂಡ್ನ ಉದ್ದೇಶದಿಂದಾಗಿ ಈ ವಿಡಿಯೋ ರೂಪುಗೊಂಡಿದೆ. ಮಾರ್ಚ್ 12ರಂದು ತೆರೆಕಂಡಿದೆ.
ಮ್ಯೂಸಿಕ್ ವಿಡಿಯೋದ ಮೂಲ ಹಾಡು ‘ಓಪನ್ ಕ್ಲಸ್ಟರ್ಸ್’ನ್ನು ಯುಎಸ್ ಏರ್ ಫೋರ್ಸ್ ಬ್ಯಾಂಡ್ನ ಸ್ಟಾಫ್ ಸರ್ಜೆಂಟ್ ಹಾಗೂ ಸ್ಯಾಕ್ಸೊಫೋನ್ ಕಲಾವಿದ ಲೂಯಿಸ್ ರೊಸಾ ರಚಿಸಿದ್ದಾರೆ. ಇದು ಭಾರತ ಮತ್ತು ಪುಯೆಟ್ರೊ ರಿಕನ್ ಸಂಸ್ಕೃತಿಯ ಮ್ಯೂಸಿಕಲ್ ಫ್ಯೂಷನ್ ಆಗಿದೆ. ಅಮೆರಿಕಾ ಹಿರಿಯ ಏರ್ಮನ್ ಜೇಮ್ಸ್ ಗಿಟಾರ್ನಲ್ಲಿ, ಸ್ಟಾಫ್ ಸರ್ಜೆಂಟ್ ಆಂಡ್ರ್ಯೂ ದೇತ್ರಾ ಬಾಸ್ನಲ್ಲಿ ಹಾಗೂ ಟೆಕ್ನಿಕಲ್ ಸರ್ಜೆಂಟ್ ವಿಲ್ಫ್ರೆಡೋ ಕ್ರಜ್ ಪರ್ಕ್ಯುಷನ್ನಲ್ಲಿ ಸಹಕರಿಸಿದ್ದಾರೆ.
ಈ ಸಂಗೀತ ಸಹಯೋಗ ನಡೆಸಿರುವುದಕ್ಕಾಗಿ ನಾವು ಸಂತಸಪಡುತ್ತೇವೆ. ಕೊರೊನಾ ಕಾರಣದಿಂದ ಏರೋ ಇಂಡಿಯಾದಲ್ಲಿ ನಾವು ನೇರವಾಗಿ ಭಾಗವಹಿಸಲು ಆಗಿರಲಿಲ್ಲ. ಆದರೂ ವರ್ಚುವಲ್ ವಿಧಾನದ ಮೂಲಕ ಈ ಕೆಲಸ ಸಾಧ್ಯವಾಗಿದೆ. ಅಂತರ ಹಾಗೂ ಗಡಿಗಳ ಪರಿ ಇಲ್ಲದೆ ಸಂಗೀತ ಎಲ್ಲರನ್ನೂ ಸೇರಿಸುತ್ತದೆ ಎಂದು ಬ್ಯಾಂಡ್ನ ಪ್ರಚಾರ ವಿಭಾಗದ ಮುಖ್ಯಸ್ಥ ಟೆಕ್ನಿಕಲ್ ಸರ್ಜೆಂಟ್ ವಿಲ್ಫ್ರೆಡೋ ಕ್ರಜ್ ತಿಳಿಸಿದ್ದಾರೆ. ಇಂಡೊ-ಫೆಸಿಫಿಕ್ ಪ್ರದೇಶದ ಎಲ್ಲಾ ಗೆಳೆಯರ ಬಂಧವು ಸಂಗೀತದ ಮೂಲಕ ಇನ್ನಷ್ಟು ಬಲಗೊಳ್ಳುತ್ತದೆ. ಸಂಗೀತಕ್ಕೆ ಅಂಥಾ ಶಕ್ತಿ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅದ್ಭುತ ಸಂಗೀತ ಕಲಾವಿದರ ಸಹಯೋಗದಲ್ಲಿ ರೂಪುಗೊಂಡಿರುವ ಹೊಸ ಮ್ಯೂಸಿಕ್ ಟ್ರ್ಯಾಕ್ ಬಗ್ಗೆ ಅಪಾರ ಸಂತೋಷವಿದೆ ಎಂದು ಫ್ಯೂಷನ್ನಲ್ಲಿ ಭಾಗವಹಿಸಿರುವ ಭಾರತೀಯ ಘಟಂ ಕಲಾವಿದ ಗಿರಿಧರ್ ಉಡುಪ ಹೇಳಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಬ್ಯಾಂಡ್ ಆಫ್ ದ ಫೆಸಿಫಿಕ್ (USAF Band of the Pacific) ಎಂಬುದು ಯುಎಸ್ ವಾಯುಸೇನೆ ಸಂಗೀತಜ್ಞರ ವೃತ್ತಿಪರ ತಂಡವಾಗಿದೆ. ಪಾಶ್ಚಿಮಾತ್ಯ ಫೆಸಿಫಿಕ್ ಪ್ರದೇಶದ ಮಿಲಿಟರಿ ಮತ್ತಿತರ ಸಂಗೀತ ಕಾನ್ಫಿಗರೇಷನ್ಗಳಲ್ಲಿ ಈ ತಂಡ ಭಾಗವಹಿಸುತ್ತದೆ. ವಾರ್ಷಿಕವಾಗಿ ಸುಮಾರು 200ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ತಂಡವು ಪ್ರದರ್ಶಿಸುತ್ತದೆ.
ಗಿರಿಧರ್ ಉಡುಪ ಬೆಂಗಳೂರು ಮೂಲದ ಘಟಂ ಕಲಾವಿದರಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದಾರೆ. ವಿಶ್ವದ ಖ್ಯಾತ ಕಲಾವಿದರೊಂದಿಗೆ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಗಿರಿಧರ್ ಉಡುಪ, ಸುಮಾರು 50 ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಇದನ್ನೂ ಓದಿ: Aero India 2021 ಲಘು ಯುದ್ಧ ವಿಮಾನ ತೇಜಸ್ ಬೆನ್ನೇರಿದ ಸಂಸದ ತೇಜಸ್ವಿ ಸೂರ್ಯ.. Photos
Published On - 10:06 pm, Wed, 17 March 21