Quad Summit 2021: ಪ್ರಜಾಪ್ರಭುತ್ವದ ಮೌಲ್ಯಗಳಿಂದ ನಾವು ಒಂದಾಗಿದ್ದೇವೆ: ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
ಈ ದೂರದೃಷ್ಟಿಯನ್ನು ನಾನು ಭಾರತದ ತತ್ವಜ್ಞಾನದ ವಸುಧೈವ ಕುಟುಂಬಕಂ ಎಂಬ ನೆಲೆಯಲ್ಲಿ ನೋಡುತ್ತೇನೆ. ವಿಶ್ವವೇ ಒಂದು ಕುಟುಂಬ. ನಾವು ಜತೆಯಾಗಿ, ಮೊದಲಿಗಿಂತಲೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಮೋದಿ ಹೇಳಿದ್ದಾರೆ.
ದೆಹಲಿ: ನಾವು ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳು, ಪ್ರಜಾಸತ್ತಾತ್ಮಕ ಗುಣಗಳಿಂದ ಮತ್ತು ಇಂಡೊ-ಫೆಸಿಫಿಕ್ ಶಾಂತಿ ಹಾಗೂ ಭದ್ರತೆಯ ಕಾರಣದಿಂದ ಒಂದಾಗಿದ್ದೇವೆ. ಲಸಿಕೆ, ಹವಾಮಾನ, ಹೊಸ ತಂತ್ರಜ್ಞಾನದಂಥಾ ಕ್ಷೇತ್ರಗಳು ಕ್ವಾಡ್ ಒಕ್ಕೂಟವು ಜಾಗತಿಕ ಒಳಿತಿಗೆ ಇರುವಂತೆ ಮಾಡಿದೆ ಎಂದು ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಇಂದು (ಮಾರ್ಚ್ 12) ಸಂಜೆ 7 ಗಂಟೆಗೆ ನಡೆದ ಕ್ವಾಡ್ (QUAD) ರಾಷ್ಟ್ರಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸಹಿತ ಅಮೆರಿಕಾ ಅಧ್ಯಕ್ಷ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮ್ಯಾರಿಸನ್ ಹಾಗೂ ಜಪಾನ್ ಪ್ರಧಾನಿ ಸುಗಾ ಪಾಲ್ಗೊಂಡಿದ್ದಾರೆ. ಈ ದೂರದೃಷ್ಟಿಯನ್ನು ನಾನು ಭಾರತದ ತತ್ವಜ್ಞಾನದ ವಸುಧೈವ ಕುಟುಂಬಕಂ ಎಂಬ ನೆಲೆಯಲ್ಲಿ ನೋಡುತ್ತೇನೆ. ವಿಶ್ವವೇ ಒಂದು ಕುಟುಂಬ. ನಾವು ಜತೆಯಾಗಿ, ಮೊದಲಿಗಿಂತಲೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದು ಮೋದಿ ಹೇಳಿದರು.
ಭಾರತ ಉತ್ಪಾದಿಸುತ್ತಿರುವ ಕೊರೊನಾ ಲಸಿಕೆಯಲ್ಲಿ ಹಣ ಹೂಡಿಕೆಗೆ ಉಳಿದ 3 ರಾಷ್ಟ್ರಗಳ ಜತೆ ಚರ್ಚೆ ನಡೆದಿದೆ. ಜಾಗತಿಕ ಭದ್ರತೆ, ವ್ಯಾಪಾರ ವಾಣಿಜ್ಯ ವಿಚಾರಗಳ ಕುರಿತಾಗಿಯೂ ಸಭೆಯಲ್ಲಿ ಮಾತನಾಡಲಾಗಿದೆ. ಅಪರೂಪದ ಲೋಹಗಳನ್ನು ತಮ್ಮಲ್ಲಿಯೇ ಉತ್ಪಾದಿಸಿ ಪರಸ್ಪರ ವಿನಿಮಯ ಮಾಡಿಕೊಳ್ಳುವ ವಿಚಾರ ಪ್ರಸ್ತಾವನೆ ಮಾಡಲಾಗಿದ್ದು, ಇಂಡೋ- ಫೆಸಿಫಿಕ್ ವಲಯ ಹಾಗೂ ಪ್ರಾದೇಶಿಕ, ಜಾಗತಿಕ ವಲಯದ ಶಾಂತಿ ಮತ್ತು ಭದ್ರತೆ ವಿಚಾರವನ್ನೂ ಹಂಚಿಕೊಳ್ಳಲಾಗಿದೆ.
ಯುಎಸ್ ನಿಮ್ಮೊಂದಿಗೆ ಕೆಲಸ ಮಾಡಲು ಬದ್ಧವಾಗಿದೆ. ಸಮಸ್ಯೆಗಳ ಪ್ರಾಯೋಗಿಕ ಪರಿಹಾರ ಹಾಗೂ ಉತ್ತಮ ಫಲಿತಾಂಶ ಪಡೆಯಲು ಈ ಗುಂಪು ಬಹಳ ಮುಖ್ಯವಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ತಿಳಿಸಿದರು.
ಶೃಂಗಸಭೆಯ ಬಗ್ಗೆ ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗಾಲ ಮಾತನಾಡಿದರು ಕ್ವಾಡ್ ಜಾಗತಿಕ ಒಳಿತಿನ ಉದ್ದೇಶಕ್ಕೆ ಇರುವ ಒಕ್ಕೂಟ ಎಂದು ಮೋದಿ ತಿಳಿಸಿದ್ದಾರೆ. ಇಂದಿನ ಕ್ವಾಡ್ ಶೃಂಗಸಭೆ ಧನಾತ್ಮಕ ಕೆಲಸ ಹಾಗೂ ದೂರದೃಷ್ಟಿಯ ಅಭಿಪ್ರಾಯಗಳನ್ನು ಕಂಡಿದೆ. ಪ್ರಸ್ತುತ ಪ್ರಾಮುಖ್ಯತೆ ಪಡೆದಿರುವ ವಿಚಾರಗಳಾದ ಲಸಿಕೆ, ಹವಾಮಾನ ಮತ್ತು ತಂತ್ರಜ್ಞಾನದ ಕುರಿತಾಗಿಯೂ ಚರ್ಚೆಯಾಗಿದೆ ಎಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗಾಲ ತಿಳಿಸಿದರು.
ಕ್ವಾಡ್ ದೇಶಗಳು ಕೊರೊನಾ ಲಸಿಕೆ ವಿಚಾರವಾಗಿ ತೆಗೆದುಕೊಂಡಿರುವ ನಿರ್ಧಾರ ಬಹುಮುಖ್ಯವಾಗಿದೆ. ಕೊರೊನಾ ವಿರುದ್ಧದ ಲಸಿಕೆ ತಯಾರಿಗೆ ಸಂಪನ್ಮೂಲ ಕ್ರೋಢೀಕರಣ, ತಯಾರಿಕೆ, ಹಂಚಿಕೆಗೆ ನಾಲ್ಕೂ ದೇಶಗಳು ಒಗ್ಗಟ್ಟಾಗಿವೆ ಎಂದು ಶೃಂಗಾಲ ಹೇಳಿದರು. ಈ ಒಕ್ಕೂಟದಲ್ಲಿ ಭಾಗಿಯಾಗಿರುವುದಕ್ಕೆ ಸಂತಸವ್ಯಕ್ತಪಡಿಸಿದರು.
ಕ್ವಾಡ್ ಬಗ್ಗೆ ಚೀನಾ ಏನು ಹೇಳಿತ್ತು? ಕ್ವಾಡ್ ರಾಷ್ಟ್ರಗಳ ಮೊದಲ ಸಭೆ ಇದಾಗಿದ್ದು, ನಾಲ್ಕು ದೇಶಗಳ ನಾಯಕರು ವರ್ಚುವಲ್ ವಿಧಾನದ ಮೂಲಕ ಮಾತುಕತೆ ನಡೆಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಚೀನಾ ಪ್ರಾಬಲ್ಯ ಮಟ್ಟಹಾಕಲು 2004 ರಲ್ಲಿ ಆಸ್ತಿತ್ವಕ್ಕೆ ಬಂದಿರುವ ಕ್ವಾಡ್ ಒಕ್ಕೂಟ ಸಮಾನ ಮನಸ್ಕ ರಾಷ್ಟ್ರಗಳ ಗುಂಪಾಗಿದೆ.
ಸಭೆಗೆ ಮುನ್ನವೇ ಪ್ರಮುಖ ರಾಷ್ಟ್ರಗಳ ಮಾತುಕತೆ ಬಗ್ಗೆ ಚೀನಾಕ್ಕೆ ನಡುಕ ಹುಟ್ಟಿದಂತಿತ್ತು. ಕ್ವಾಡ್ ಬಗ್ಗೆ ಪ್ರತಿಕ್ರಿಯಿಸಿದ್ದ ಚೀನಾ, ಸಭೆಯಲ್ಲಿ ಭಾಗವಹಿಸಲಿರುವ ರಾಷ್ಟ್ರಗಳು ಯಾವುದಾದರೂ ಶಾಂತಿ ಹಾಗೂ ಒಳಿತಿನ ಬಗ್ಗೆ ಚರ್ಚಿಸಿದರೆ ಒಳ್ಳೆಯದು. ಅದರ ಹೊರತಾಗಿ ಯಾವುದೇ ರಾಷ್ಟ್ರಕ್ಕೆ ವಿರುದ್ಧವಾಗಿ ಯೋಚಿಸುವುದಾದರೆ ಅದು ಆತಂಕಕಾರಿ ಬೆಳವಣಿಗೆ ಎಂಬರ್ಥದಲ್ಲಿ ಧ್ವನಿ ಹೊರಡಿಸಿತ್ತು. ಈ ಬಗ್ಗೆ ಮಾತನಾಡಿದ್ದ ಚೀನಾ ವಿದೇಶಾಂಗ ಖಾತೆ ವಕ್ತಾರ ಜಾವೋ ಲಿಜಿಯಾನ್, ಕ್ವಾಡ್ನಲ್ಲಿ ಉತ್ತಮ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಚೀನಾ ನಂಬುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: Quad Summit 2021: ಕ್ವಾಡ್ ಸಭೆಗೂ ಮುನ್ನವೇ ಬೆಚ್ಚಿದ ಚೀನಾ; ನಾಲ್ಕು ಪ್ರಮುಖ ರಾಷ್ಟ್ರಗಳ ಮಾತುಕತೆ ಬಗ್ಗೆ ಹೆಚ್ಚಿದ ಕುತೂಹಲ
Published On - 9:09 pm, Fri, 12 March 21