ಮಹಿಳಾ ದಿನಾಚರಣೆ 2021: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ ಕ್ರಿಕೆಟರ್ ‘ರಾಜೇಶ್ವರಿ ಗಾಯಕ್ವಾಡ್’
Rajeshwari Gayakwad Womens Day 2021 International Womens Day 2021 Womens cricketer bowler
ಕಂಡ ಕನಸು ನನಸಾಗಿಸಬೇಕು ಎಂದರೆ ಆಸಕ್ತಿ ಅನಿವಾರ್ಯ ಜತೆಗೆ ಶ್ರಮವೂ ಕೂಡಾ. ನನ್ನ ಕೈಯಲ್ಲಿ ಅದು ಸಾಧ್ಯವಿಲ್ಲ ಎಂದು ನಿರ್ಧರಿಸಿದರೆ ಸಾಧನೆಯ ಪಥ ತಪ್ಪಿ ಹೋಗುತ್ತದೆ. ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ… ಎಂತಹಾ ಪರಿಸ್ಥಿಯಲ್ಲೂ ಕುಗ್ಗದೇ ದಿಟ್ಟ ಹೆಜ್ಜೆಯಿಟ್ಟು ಮುಂದೆ ನಡೆದಾಗ ಕಂಡ ಕನಸು ನನಸಾಗುತ್ತದೆ. ಆದರೆ ಹಲವರು ಮೊದಲ ಹೆಜ್ಜೆಯನ್ನು ಇಡುವಲ್ಲಿ ಹಿಂದೆ ಸರಿಯುತ್ತಾರೆ. ಜೀವನದಲ್ಲಿ ಏನಾದರೂ ಸಾಧಿಸಬೇಕು.. ಎಲ್ಲರ ಗಮನವನ್ನು ತನ್ನತ್ತ ಸೆಳೆಯಬೇಕು… ಹುಟ್ಟಿಗೆ ಸಾರ್ಥಕತೆ ನೀಡಬೇಕು ಎಂದಾಗ ಅದಕ್ಕೆ ಬೇಕಾಗುವ ತಯಾರಿಗಳು ಅಷ್ಟೇ ಮುಖ್ಯವಾಗುತ್ತದೆ. ಸಾಧನೆಯ ಆರಂಭದ ಹಂತದಲ್ಲಿ ಎಡುವುವುದು ಸಹಜ. ಎಡುವುವುದನ್ನು ಅವಮಾನ ಎಂದು ಭಾವಿಸಿದಾಗ ಮುಂದಿನ ಹೆಜ್ಜೆ ಇಡುವುದು ಕೂಡಾ ಕಷ್ಟವೇ. ಆದರೆ ಇವರು ಎಂತಹಾ ಸವಾಲುಗಳು ಎದುರಾದರೂ ಯಾವ ಕ್ಷಣಕ್ಕೂ ಕುಗ್ಗಲಿಲ್ಲ. ಯಾವುದು ಅಸಾಧ್ಯವೋ ಅದನ್ನ ಸಾಧ್ಯವೆಂದು ತೋರಿಸಿದ ಈ ಹುಡುಗಿ ವಿಜಪುರದ ಹೆಮ್ಮೆಯ ಪುತ್ರಿ. ಕರುನಾಡಿನ ಕೀರ್ತಿ. ಅವರೇ ರಾಜೇಶ್ವರಿ ಶಿವಾನಂದ್ ಗಾಯಕ್ವಾಡ್.
ರಾಜೇಶ್ವರಿ ಶಿವಾನಂದ್ ಗಾಯಕ್ವಾಡ್ ಮಹಿಳಾ ಕ್ರಿಕೆಟ್ ಲೋಕಕ್ಕೆ ಚಿರಪರಿಚಿತವಾಗಿರುವ ಹೆಸರು. ಎಡಗೈ ಸ್ಪಿನ್ನರ್ ಹಾಗೂ ಬಲಗೈ ಬ್ಯಾಟ್ಸ್ವುಮನ್ ಆಗಿರುವ ರಾಜೇಶ್ವರಿ ಸದ್ಯ ಭಾರತೀಯ ಮಹಿಳಾ ತಂಡದ ಪರ ರಾರಾಜಿಸುತ್ತಿದ್ದಾರೆ. 2017ರ ಮಹಿಳಾ ವಿಶ್ವಕಪ್ನಲ್ಲಿ ಭಾರತ ತಂಡ ಫೈನಲ್ಗೆ ಏರಲು ಗಾಯಕ್ವಾಡ್ ಸಾಧನೆ ಕೂಡ ಕಾರಣ. ಈ ಪಂದ್ಯ ರಾಜೇಶ್ವರಿ ಗಾಯಕ್ವಾಡ್ ಅವರ ಕ್ರಿಕೆಟ್ ದಿಕ್ಕನ್ನೇ ಬದಯಲಾಯಿಸಿದ ಕ್ಷಣ ಅಂದರೂ ತಪ್ಪಿಲ್ಲ.
1991ರಲ್ಲಿ ವಿಜಪುರದಲ್ಲಿ ರಾಜೇಶ್ವರಿ ಗಾಯಕ್ವಾಡ್ ಶಿವಾನಂದ ಗಾಯಕ್ವಾಡ್ ಮತ್ತು ಸವಿತಾ ಗಾಯಕ್ವಾಡ್ ದಂಪತಿಗೆ ಜನಿಸಿದ ಪುತ್ರಿ. ಬಿಎ ಮುಗಿಸಿರುವ ಇವರಿಗೆ ಇಬ್ಬರು ಸಹೋದರ ಮತ್ತು ಇಬ್ಬರು ಸಹೋದರಿಯರು ಇದ್ದಾರೆ.
ಮೊದಲ ಆಯ್ಕೆ ಕ್ರಿಕೆಟ್ ಅಲ್ಲ ಅಂದಹಾಗೆ ರಾಜೇಶ್ವರಿ ಅವರ ಮೊದಲ ಆಯ್ಕೆ ಕ್ರಿಕೆಟ್ ಆಗಿರಲಿಲ್ಲ. ಕ್ರಿಕೆಟ್ಗೆ ಪ್ರವೇಶ ಪಡೆಯುವ ಮುನ್ನ ಜಾವೆಲಿನ್, ಡಿಸ್ಕಸ್ ಎಸೆತ ಮತ್ತು ವಾಲಿಬಾಲ್ನಲ್ಲಿ ಆಸಕ್ತಿ ಹೊಂದಿದ್ದರು. ಆದರೆ ತಂದೆ ಶಿವಾನಂದ್ ಸ್ವತಃ ವೃತ್ತಿಪರ ಕ್ರಿಕೆಟ್ ಆಡಲು ಬಯಸಿದ್ದರೂ ಸೂಕ್ತ ಅವಕಾಶಗಳು ಸಿಗದ ಕಾರಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ತನ್ನ ಕನಸನ್ನು ಮಗಳಲ್ಲಿ ಕಂಡ ತಂದೆ ಶಿವಾನಂದ್ 2007 ರಲ್ಲಿ ವಿಜಯಪುರದಲ್ಲಿ ಮಹಿಳಾ ಕ್ರಿಕೆಟ್ ಅಕಾಡೆಮಿ ಶುರುವಾದಾಗ ಅಲ್ಲಿಗೆ ತನ್ನ ಮಗಳನ್ನು ತರಬೇತಿ ಪಡೆಯಲು ಕಳುಹಿಸಿದರು. ತಂದೆಯ ಆಸೆಯಂತೆ ಪುತ್ರಿ ರಾಜೇಶ್ವರಿ ಕ್ರಿಕೆಟ್ಗೆ ಪ್ರವೇಶ ಪಡೆದರು. ಆದರೆ ಇಲ್ಲೂ ಆಕೆಗೆ ಹೆಜ್ಜೆ ಹೆಜ್ಜೆಗೂ ಸವಾಲುಗಳೇ ಎದುರಾದವು. 2007ರಲ್ಲಿ ವಿಜಯಪುರ ಕ್ರಿಕೆಟ್ ಕ್ಲಬ್ನಲ್ಲಿ ತರಬೇತಿ ಆರಂಭಿಸಿದ ರಾಜೇಶ್ವರಿ, 2014ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯವಾಡುವ ಮೂಲಕ ಕ್ರಿಕೆಟ್ ಬದುಕಿಗೆ ಪದಾರ್ಪಣೆ ಮಾಡಿದರು.
ರಾಜೇಶ್ವರಿಗೆ ಟೀಂ ಇಂಡಿಯಾ ಸೇರುವ ಕನಸು ನನಸಾದ ಆರಂಭದಲ್ಲೇ ತಂದೆ ಶಿವಾನಂದ್ ಹೃದಯಾಘಾತದಿಂದ ಮೃತಪಟ್ಟರು. 2014ರ ಮೇ 24ರಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಪಂದ್ಯ ವೀಕ್ಷಣೆಗೆ ತಂದೆ ಶಿವಾನಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಪಂದ್ಯವನ್ನು ವೀಕ್ಷಿಸುತ್ತಿದ್ದಂತೆ ಹೃದಯಾಘಾತದಿಂದ ಅಸುನೀಗಿದರು.
ಸಂತಸದ ಕ್ಷಣ ಅನುಭವಿಸದ ತಂದೆ ಶಿವಾನಂದ ಗಾಯಕ್ವಾಡ್ ಮಗಳನ್ನ ಕ್ರಿಕೆಟರ್ ಆಗಿ ಮಾಡಿದ್ದ ತಂದೆ ಪುತ್ರಿಯ ಸಂತಸದ ಕ್ಷಣಗಳನ್ನ ಕಣ್ತುಂಬಿಕೊಳ್ಳುವ ಮುನ್ನವೇ ಇಹಲೋಕ ತ್ಯಜಿಸಿದರು. ಅಂದಿನಿಂದ ಮನೆಯ ಸಂಪೂರ್ಣ ಜವಾಬ್ದಾರಿ ರಾಜೇಶ್ವರಿಯವರ ಹೆಗಲೇರಿತು. ತಂದೆಯನ್ನು ಕಳೆದುಕೊಂಡ ರಾಜೇಶ್ವರಿ ಕುಗ್ಗಲಿಲ್ಲ. ಮೊದಲಿಗಿಂತಲೂ ಹೆಚ್ಚಿನ ಪ್ರದರ್ಶನ ನೀಡಿ ಟೀಂ ಇಂಡಿಯಾದಲ್ಲಿ ಕಾಯಂ ಸ್ಥಾನ ಗಿಟ್ಟಿಸಿಕೊಂಡರು. 40 ಏಕದಿನ, 28 ಟಿ-ಟ್ವೆಂಟಿ ಹಾಗೂ ಒಂದು ಟೆಸ್ಟ್ನಲ್ಲೂ ಆಡಿದ್ದಾರೆ ರಾಜೇಶ್ವರಿ. ಮೂರು ಮಾದರಿಯಲ್ಲೂ ಗಾಯಕ್ವಾಡ್ ಒಟ್ಟು 107 ವಿಕೆಟ್ ಕಬಳಿಸಿದ್ದಾರೆ. ಹೀಗೆ ಗುಂಬಜ್ ನಗರಿ ವಿಜಯಪುರದ ಹುಡುಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನ ಹೆಚ್ಚಿಸುತ್ತಿದ್ದಾರೆ.
ರಾಜೇಶ್ವರಿ ಮಹಿಳಾ ಕ್ರಿಕೆಟ್ ಅಕಾಡೆಮಿಯಲ್ಲಿ ಅಶೋಕ್ ಜಾಧವ್, ಬಸವರಾಜ್ ಇಜೇರಿ, ಸಲೀಂ, ದಲೀಪ್ ಕಲಾಲ್, ಎ ಜಿ ಪಟೇಲ್ ಸೇರಿದಂತೆ ಇನ್ನು ಹಲವರಿಂದ ತರಬೇತಿ ಪಡೆದರು. ಪಿಯು ಶಿಕ್ಷಣ ಮುಗಿದ ಬಳಿಕ ಬೆಂಗಳೂರಿಗೆ ಡಿಗ್ರಿ ಓದಲು ತೆರಳಿದರು. ಓದುತ್ತಲೇ ಕ್ರಿಕೆಟ್ ತರಬೇತಿಯನ್ನು ಪಡೆದುಕೊಂಡರು. ರಾಜೇಶ್ವರಿಗೆ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಎಲ್ಲ ರೀತಿಯ ಸೌಲಭ್ಯದ ಜೊತೆಗೆ ಬೆಂಬಲವನ್ನು ನೀಡಿತು.
Published On - 5:50 pm, Mon, 8 March 21