ಬೆಣ್ಣೆನಗರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ: ಹೋರಿ ತಿವಿದು ಯುವಕ ಸಾವು

ಹೋರಿ ಬೆದರಿಸುವ ಸ್ಪರ್ಧೆ ವೇಳೆ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆಯಲ್ಲಿ ನಿನ್ನೆ ಸಂಜೆ ನಡೆದಿದೆ. ಸ್ಪರ್ಧೆ ವೇಳೆ ಕಡದಕಟ್ಟೆ ಗ್ರಾಮದಲ್ಲಿ ಭರತ್(19) ಎಂಬ ಯುವಕ ಮೃತಪಟ್ಟಿದ್ದಾನೆ.

ಬೆಣ್ಣೆನಗರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ: ಹೋರಿ ತಿವಿದು ಯುವಕ ಸಾವು
ಪ್ರಾತಿನಿಧಿಕ ಚಿತ್ರ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Mar 08, 2021 | 5:21 PM

ದಾವಣಗೆರೆ: ಹೋರಿ ಬೆದರಿಸುವ ಸ್ಪರ್ಧೆ ವೇಳೆ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆಯಲ್ಲಿ ನಿನ್ನೆ ಸಂಜೆ ನಡೆದಿದೆ. ಸ್ಪರ್ಧೆ ವೇಳೆ ಕಡದಕಟ್ಟೆ ಗ್ರಾಮದಲ್ಲಿ ಭರತ್(19) ಎಂಬ ಯುವಕ ಮೃತಪಟ್ಟಿದ್ದಾನೆ. ಭರತ್​ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕುಟ್ಟದಹಳ್ಳಿ ನಿವಾಸಿ.

ಸ್ಪರ್ಧೆ ನೋಡಲು ಆಗಮಿಸಿದ್ದ ಭರತ್​ ರಸ್ತೆ ಬದಿ ನಿಂತು ಹೋರಿಯ ಓಟವನ್ನು ವೀಕ್ಷಿಸುತ್ತಿದ್ದನು. ಇದೇ ವೇಳೆ, ಏಕಾಏಕಿ ನುಗ್ಗಿ ಬಂದ ಹೋರಿಯೊಂದು ಯುವಕನ ಮರ್ಮಾಂಗಕ್ಕೆ ತಿವಿದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ಭರತ್​ ಕೊನೆಯುಸಿರೆಳೆದಿದ್ದಾನೆ.

ಅಂದ ಹಾಗೆ, ನಿನ್ನೆ ನಡೆದ ಸ್ಪರ್ಧೆಯಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಪಾಲ್ಗೊಂಡಿದ್ದರು. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನೆಲ ಒರೆಸುತ್ತಿದ್ದಾಗ ವಿದ್ಯುತ್​ ತಂತಿ ಸ್ಪರ್ಶಿಸಿ ಸಿಬ್ಬಂದಿ ಸಾವು ಇತ್ತ, ನೆಲ ಒರೆಸುತ್ತಿದ್ದಾಗ ವಿದ್ಯುತ್​ ತಂತಿ ಸ್ಪರ್ಶಿಸಿ ಸಿಬ್ಬಂದಿಯೋರ್ವ ಸಾವನ್ನಪ್ಪಿರುವ ಘಟನೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಕ್ಯಾಂಟೀನ್​ನಲ್ಲಿ ಸಂಭವಿಸಿದೆ. ವಿದ್ಯುತ್​ ತಂತಿ ಸ್ಪರ್ಶಿಸಿ ಮೃತಪಟ್ಟ ಸಿಬ್ಬಂದಿ ಅನೀಸ್(20) ಕೋಟೆಕಾರು ಬೀರಿ ನಿವಾಸಿ. ಘಟನೆಯ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಂದ ಹಾಗೆ, ಅನೀಸ್ ಮಂಗಳೂರಿನ ಕೆಪಿಟಿಯಲ್ಲಿ ಡಿಪ್ಲೊಮಾ ಓದುತ್ತಿದ್ದ. ಕಾಲೇಜು ಬಿಡುವಿನ ವೇಳೆ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ.

ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಮೃತ ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಹೀಗಾಗಿ, ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದರು. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಟಿ.ಶೆಟ್ಟಿಗೇರಿ ಗ್ರಾಮದ ಬಳಿ ವ್ಯಕ್ತಿ ಮೇಲೆ ಕಾಡುಕೋಣ ದಾಳಿ ಇತ್ತ, ವ್ಯಕ್ತಿ ಮೇಲೆ ಕಾಡುಕೋಣ ದಾಳಿಮಾಡಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ತೋಟಕ್ಕೆ ತೆರಳುತ್ತಿದ್ದ 60 ವರ್ಷದ ಚೋಕಿರ ಪೂವಯ್ಯ ಎಂಬುವವರ ಮೇಲೆ ಕಾಡುಕೋಣ ದಾಳಿಮಾಡಿದೆ. ಗಾಯಾಳು ಪೂವಯ್ಯ ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೂವಯ್ಯ ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿದೆ.

ಜೀವನದಲ್ಲಿ ಜಿಗುಪ್ಸೆ: ನೇಣುಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ ನೇಣುಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಂಬ್ಲಿಕಲ್​ನಲ್ಲಿ ನಡೆದಿದೆ. ಮರಕ್ಕೆ ನೇಣುಹಾಕಿಕೊಂಡು ರಿಜ್ವಾನ್ ಪಾಷಾ(45) ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಜೀವನದಲ್ಲಿ ಜಿಗುಪ್ಸೆಗೊಂಡು ರಿಜ್ವಾನ್​ ಸ್ಮಶಾನದಲ್ಲಿ ನೇಣಿಗೆ ಶರಣಾಗಿದ್ದಾನೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ವಿಧಾನಪರಿಷತ್ ಸದಸ್ಯರಾಗಿ ತುಳಸಿ ಮುನಿರಾಜುಗೌಡ ಅವಿರೋಧ ಆಯ್ಕೆ