ಸಿಕ್ಕಳೆನ್ನುವಷ್ಟರಲ್ಲಿ ಮತ್ತೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಕುಖ್ಯಾತ ಕಳ್ಳಿ ಮಾಲಾ
ರಾಮನಗರದ ಜಿಲ್ಲಾಸ್ಪತ್ರೆಯ ಸಖಿ ಕೇಂದ್ರದಿಂದ ಕುಖ್ಯಾತ ಕಳ್ಳಿ ಪೊಲೀಸ್ ಕಸ್ಟಡಿಯಿಂದ ಪರಾರಿ ಆಗಿರುವಂತಹ ಘಟನೆ ನಡೆದಿದೆ. ಹಲವು ವರ್ಷಗಳಿಂದ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಇದೀಗ ಮತ್ತೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದಾಳೆ. ಸದ್ಯ ಪೊಲೀಸರು ಕಳ್ಳಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.

ರಾಮನಗರ, ಮಾರ್ಚ್ 13: ಪೊಲೀಸ್ ಕಸ್ಟಡಿಯಲ್ಲಿದ್ದ ಕುಖ್ಯಾತ ಕಳ್ಳಿ (Thief) ಜಿಲ್ಲಾಸ್ಪತ್ರೆಯ ಸಖಿ ಕೇಂದ್ರದಿಂದ ಪರಾರಿ ಆಗಿರುವಂತಹ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿರುವ ಜಿಲ್ಲಾಸ್ಪತ್ರೆಯ ಸಖಿ ಕೇಂದ್ರದಲ್ಲಿ ನಡೆದಿದೆ. ಆಂಧ್ರಪ್ರದೇಶದ ಕುಪ್ಪಂ ಮೂಲದ ಮಾಲಾ ಪರಾರಿಯಾದ ಕಳ್ಳಿ. ಮಾಲಾ ಪರಾರಿ ಸಂಬಂಧ ರಾಮನಗರ ಟೌನ್ ಠಾಣೆಯಲ್ಲಿ ಕೇಸ್ ದಾಲಾಗಿದ್ದು, ಕುಖ್ಯಾತ ಕಳ್ಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಹದಿನಾರು ವರ್ಷದಿಂದ ಪೊಲೀಸರ ಕೈಗೆ ಸಿಗದ ಕಳ್ಳಿ
ಮೂಲತಃ ಆಂಧ್ರಪ್ರದೇಶದ ಕುಪ್ಪಂ ಮೂಲದ ಮಾಲಾ ಹಲವು ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡು ತಿರುಗಾಡುತ್ತಿದ್ದಳು. ಕಳೆದ ಹದಿನಾರು ವರ್ಷಗಳಿಂದ ವಿವಿಧ ಕಡೆಗಳಲ್ಲಿ ಕಳ್ಳತನ ಎಸಗಿ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.
350 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ ಮಾಲಾ
ಇತ್ತೀಚೆಗೆ ಮಾಗಡಿ ಪಟ್ಟಣದಲ್ಲಿ ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಸುಮಾರು 350 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಸಂಬಂಧ ಮಾಗಡಿ ಠಾಣೆ ಪೊಲೀಸರು ಮಾಲಾಳನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ನಂತರ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಹಬ್ಬ ಮುಗಿದ ಮೂರೇ ದಿನಕ್ಕೆ ದೇಗುಲಕ್ಕೆ ಕನ್ನ: 4 ಕೆಜಿ ಬೆಳ್ಳಿ, 30 ಗ್ರಾಂ ಚಿನ್ನಾಭರಣ ದೋಚಿ ಪರಾರಿ
ಬಳಿಕ ಆರೋಪಿಯನ್ನು ರಾಮನಗರದ ಜಿಲ್ಲಾಸ್ಪತ್ರೆಯಲ್ಲಿರುವ ಸಖಿ ಕೇಂದ್ರದಲ್ಲಿ ತಡರಾತ್ರಿ ಇರಿಸಲಾಗಿತ್ತು. ಆದರೆ ಇದೇ ವೇಳೆ ಪೊಲೀಸರ ಗಮನವನ್ನು ಬೇರೆಡೆ ಸೆಳೆದು, ಅವರಿಗೆ ಚೆಳ್ಳೆಹಣ್ಣು ತಿನ್ನಿಸಿ ಮಾಲಾ ಅಲ್ಲಿಂದ ಪರಾರಿಯಾಗಿದ್ದಾಳೆ. ಇನ್ನು ಆರೋಪಿ ಮಾಲಾಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
97 ಲಕ್ಷಕ್ಕೂ ಅಧಿಕ ಮೌಲ್ಯದ ಡೈಮಾಂಡ್ ಮಿಶ್ರಿತ ಚಿನ್ನ ಕಳವು
ಕೊಪ್ಪಳ ನಗರದಲ್ಲಿ ಭಾರೀ ಮೌಲ್ಯದ ಚಿನ್ನ ಕಳುವಾಗಿರುವ ಪ್ರಕರಣ ಸಂಬಂಧ ಕೊನೆಗೂ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರಿನ ಮೂಲದ ಮೊಹಮ್ಮದ್ ಅಸ್ಗರ್ ಎಂಬುವವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಸುಮಾರು 97,17,700 ರೂ. ಮೌಲ್ಯದ ವಜ್ರ ಮಿಶ್ರಿತ ಚಿನ್ನಾಭರಣ ಜೊತೆಗೆ 26,000 ರೂ. ನಗದು ಮತ್ತು ಲ್ಯಾಪ್‌ಟಾಟ್ ಕಳ್ಳತನವಾಗಿದೆ.
ಇದನ್ನೂ ಓದಿ: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ಡಿಜಿಟಲ್ ಅರೆಸ್ಟ್ಗೆ ಯತ್ನ: ಸೈಬರ್ ಕ್ರೈಂ ಪೊಲೀಸರಿಗೆ ದೂರು
ಮೊಹಮ್ಮದ್ ಅಸ್ಗರ್ ಯುನಿಷೆಫ್ ಡೈಮಂಡ್ ಲಿ. ಕಂಪನಿಯ ಫೀಲ್ಡ್ ಆಪರೇಷನ್ ಮ್ಯಾನೇಜರ್ ಆಗಿದ್ದು, ಈ ಚಿನ್ನಾಭರಣ ಮಂಗಳೂರಿನ ಮೊಹಮ್ಮದ್ ಇರ್ಷಾದ್ ಅವರಿಗೆ ಸೇರಿದೆ. ಘಟನೆ ನಿನ್ನೆ ರಾತ್ರಿ ಕೊಪ್ಪಳ ನಗರದ ತವಾ ಪಂಜಾಬ್ ಹೋಟೆಲ್ ಬಳಿ ನಡೆದಿದೆ. ಸಿಂಧನೂರಿನಿಂದ ಮಂಗಳೂರಿಗೆ ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಅಸ್ಗರ್, ಊಟಕ್ಕಾಗಿ ಬಸ್ ನಿಲ್ಲಿಸಿದ್ದ ವೇಳೆ ಬಸ್‌ನಲ್ಲಿದ್ದ ಚಿನ್ನದ ಬ್ಯಾಗ್‌ನ್ನು ಯಾರೋ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.