AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್​ಪಿಜಿ ಬುಕಿಂಗ್ ಬಗ್ಗೆ ನಿಮಗೂ ಈ ರೀತಿ ಮೆಸೇಜ್ ಬರುತ್ತಾ? ತಪ್ಪಿಯೂ ಯಾಮಾರಬೇಡಿ

ಭಾರತದ ಬಹುತೇಕ ಎಲ್ಲ ನಗರಗಳಲ್ಲಿ ಎಲ್​ಪಿಜಿ ಸಿಲಿಂಡರ್ ಕೊರತೆಯಿಂದ ಹೋಟೆಲ್, ರೆಸ್ಟೋರೆಂಟ್, ಹಾಸ್ಟೆಲ್, ಪಿಜಿಗಳು ಬಾಗಿಲು ಮುಚ್ಚುತ್ತಿವೆ. ಕೊವಿಡ್-19 ವೇಳೆ ಉಂಟಾಗಿದ್ದ ಪರಿಸ್ಥಿತಿಯೇ ನಗರಗಳಲ್ಲಿ ಮತ್ತೆ ಮರುಕಳಿಸುತ್ತಿದೆ. ಹೋಟೆಲ್​ಗಳಲ್ಲಿ ಊಟ ಸಿಗದೆ ಅನೇಕ ಜನರು ಪರದಾಡುತ್ತಿದ್ದಾರೆ. ಹಾಸ್ಟೆಲ್​ಗಳ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತಿದೆ. ನಿಮಗೇನಾದರೂ 'ನಾಳೆ ಎಲ್​ಪಿಜಿ ಡೆಲಿವರಿಗೆ ಈಗಲೇ ಹಣ ಪಾವತಿಸಿ' ಎಂಬ ಜಾಹೀರಾತು ಅಥವಾ ಮೆಸೇಜ್ ಬರುತ್ತಿದ್ದರೆ ಯಾಮಾರಬೇಡಿ ಎಚ್ಚರ!

ಎಲ್​ಪಿಜಿ ಬುಕಿಂಗ್ ಬಗ್ಗೆ ನಿಮಗೂ ಈ ರೀತಿ ಮೆಸೇಜ್ ಬರುತ್ತಾ? ತಪ್ಪಿಯೂ ಯಾಮಾರಬೇಡಿ
Lpg Cylinder
ಸುಷ್ಮಾ ಚಕ್ರೆ
|

Updated on: Mar 12, 2026 | 1:17 PM

Share

ಬೆಂಗಳೂರು, ಮಾರ್ಚ್ 12: ಇರಾನ್- ಇಸ್ರೇಲ್, ಅಮೆರಿಕದ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಈ ಮೂರು ದೇಶಗಳ ನಡುವಿನ ಸಂಘರ್ಷದಿಂದ ಗಲ್ಫ್ ರಾಷ್ಟ್ರಗಳ ಮೇಲೆ ಕೂಡ ದಾಳಿ ಮುಂದುವರೆದಿದ್ದು, ಇದರ ಪರಿಣಾಮವಾಗಿ ಹಲವು ದೇಶಗಳಲ್ಲಿ ತೈಲ, ಗ್ಯಾಸ್ ಮುಂತಾದ ಸೌಕರ್ಯಗಳ ಬಿಕ್ಕಟ್ಟು ಎದುರಾಗಿದೆ. ಬೆಂಗಳೂರು ಸೇರಿದಂತೆ ಭಾರತದ ಅನೇಕ ಪ್ರಮುಖ ನಗರಗಳ ಹೋಟೆಲ್​, ರೆಸ್ಟೋರೆಂಟ್, ಹಾಸ್ಟೆಲ್​ಗಳಲ್ಲಿ ಎಲ್​ಪಿಜಿ ಕೊರತೆ (LPG Crisis) ಎದುರಾಗಿದ್ದು, ಅವುಗಳ ಬಾಗಿಲು ಮುಚ್ಚಲಾಗುತ್ತಿದೆ. ಇಂಧನ ಪೂರೈಕೆಯಲ್ಲಿನ ಕೊರತೆಯ ಭಯದ ನಡುವೆ ಭಾರತದ ಹಲವಾರು ಭಾಗಗಳಲ್ಲಿ LPG ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಪರದೆ ಮೇಲೆ ‘ತಕ್ಷಣದ ಎಲ್​ಪಿಜಿ ಡೆಲಿವರಿಗೆ ಈಗಲೇ ಹಣ ಪಾವತಿಸಿ’ ಎಂಬ ಜಾಹೀರಾತು ಬಂದರೆ ಅದನ್ನು ನಂಬಬೇಡಿ.

ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಲು ಜನರು ಪರದಾಡುತ್ತಿರುವಾಗ ಸೈಬರ್ ಅಪರಾಧಿಗಳು ಇದನ್ನೇ ಬಂಡವಾಳ ಮಾಡಿಕೊಂಡು ತಾವು ಲಾಭ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸೈಬರ್ ಅಪರಾಧಿಗಳು LPG ಸಿಲಿಂಡರ್ ರೀಫಿಲ್ಲಿಂಗ್​ಗೆ ಹುಡುಕುತ್ತಿರುವ ಜನರನ್ನು ಗುರಿಯಾಗಿಸಿಕೊಂಡು ಹೊಸ ರೀತಿಯ ವಂಚನೆಗಳನ್ನು ಪ್ರಾರಂಭಿಸಲು ಪ್ರಾರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್​ಪಿಜಿ ಸಿಲಿಂಡರ್​​ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಮತ್ತು ಪೂರೈಕೆ ಕಡಿಮೆಯಾಗುತ್ತಿದೆ. ಈ ಬಗ್ಗೆ ವದಂತಿಗಳು ಆನ್‌ಲೈನ್‌ನಲ್ಲಿ ಹರಡುತ್ತಿರುವುದರಿಂದ, ಸೈಬರ್ ಅಪರಾಧಿಗಳು ಜನರ ಭಯದ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ಸೈಬರ್ ಅಪರಾಧಿಗಳು ಗ್ಯಾಸ್ ಬುಕಿಂಗ್ ಸೇವೆಗಳಿಗಾಗಿ ಆನ್‌ಲೈನ್‌ನಲ್ಲಿ ಹುಡುಕುವ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡರ್​ ಸಿಗದೆ ಪರದಾಟ: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕೆ

ದಾರಿತಪ್ಪಿಸುವ ಜಾಹೀರಾತುಗಳು ಸೋಷಿಯಲ್ ಮೀಡಿಯಾ ಮತ್ತು ಮೆಸೇಜ್ ಅಪ್ಲಿಕೇಶನ್‌ಗಳಲ್ಲಿ ಪ್ರಸಾರವಾಗಲು ಪ್ರಾರಂಭಿಸಿವೆ. ಈ ನಕಲಿ ಪ್ರಚಾರಗಳು ವೇಗವಾಗಿ LPG ಸಿಲಿಂಡರ್ ವಿತರಣೆಯನ್ನು ನೀಡುವುದಾಗಿ ನಂಬಿಸುತ್ತಿವೆ. ತಕ್ಷಣ ಗ್ಯಾಸ್ ಸಿಲಿಂಡರ್ ಕೊಡುತ್ತೇವೆ, ಹೆಚ್ಚಿನ ಸಿಲಿಂಡರ್​ ಕೊಡುತ್ತೇವೆ ಎಂಬ ಆಮಿಷವೊಡ್ಡಿ ಗ್ರಾಹಕರನ್ನು ಸುಲಿಗೆ ಮಾಡುವ ಜಾಲ ಸೃಷ್ಟಿಯಾಗಿದೆ. ಇಂತಹ ಮೋಸಗೊಳಿಸುವ ಪ್ರಚಾರಗಳನ್ನು ಸಾಮಾನ್ಯವಾಗಿ WhatsApp ಫಾರ್ವರ್ಡ್‌ಗಳು, SMS ಸಂದೇಶಗಳು ಮತ್ತು ಇತರ ಮೆಸೇಜಿಂಗ್ ವೇದಿಕೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ.

ಈ ಸಂದೇಶಗಳು ಸಾಮಾನ್ಯವಾಗಿ ಕಾನೂನುಬದ್ಧ ಗ್ಯಾಸ್ ಬುಕಿಂಗ್ ಪೋರ್ಟಲ್‌ಗಳನ್ನೇ ಹೋಲುವ ನಕಲಿ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ಹೊಂದಿರುತ್ತವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಇವರು ಸಾಮಾನ್ಯವಾಗಿ ತಕ್ಷಣದ ಸಿಲಿಂಡರ್ ವಿತರಣೆಗೆ ಆನ್‌ಲೈನ್‌ನಲ್ಲಿ ಮುಂಗಡ ಪಾವತಿ ಮಾಡಲು ಕೇಳುತ್ತಾರೆ. ನೀವೇನಾದರೂ ಪ್ರಿ ಬುಕಿಂಗ್​ಗೆ ಹಣ ಪಾವತಿ ಮಾಡಿದರೆ ನೀವು ಮೋಸ ಹೋಗುವುದು ಗ್ಯಾರಂಟಿ. ಹೀಗಾಗಿ, ಅಧಿಕೃತ ವೆಬ್​​ಸೈಟ್ ಅನ್ನು ಹೊರತುಪಡಿಸಿ ಬೇರಾವುದೇ ಸೈಟ್​​ಗಳಲ್ಲೂ ಮುಂಗಡ ಹಣ ಪಾವತಿ ಮಾಡಿ ಸಿಲಿಂಡರ್ ಬುಕ್ ಮಾಡುವುದು ಸುರಕ್ಷಿತವಲ್ಲ.

ಇದನ್ನೂ ಓದಿ: 25 ದಿನದೊಳಗೆ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡುವಂತಿಲ್ಲ; ಸರ್ಕಾರದಿಂದ ಹೊಸ ನಿಯಮ ಜಾರಿ

ಯಾವುದೇ ಕಾರಣಕ್ಕೂ ಬ್ಯಾಂಕ್ ಅಕೌಂಟ್, OTP, UPI ಪಿನ್‌ಗಳು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಅಥವಾ ಬೇರೆ ಯಾವುದೇ ಇತರ ಗೌಪ್ಯ ಡೇಟಾದಂತಹ ವಿವರಗಳನ್ನು ಹಂಚಿಕೊಳ್ಳಬಾರದು ಎಂದು ಎಚ್ಚರಿಸಲಾಗಿದೆ. ಇಂತಹ ವಂಚನೆಗಳು ನಿಮಗೂ ಉಂಟಾದರೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಂತಹ ವಂಚನೆಗಳಿಗೆ ಬಲಿಯಾದವರು ತಕ್ಷಣ ರಿಪೋರ್ಟ್ ಮಾಡುವುದರಿಂದ ಕೆಲವೊಮ್ಮೆ ಹೆಚ್ಚಿನ ಆರ್ಥಿಕ ನಷ್ಟವನ್ನು ತಡೆಗಟ್ಟಲು ಮತ್ತು ಭಾಗಿಯಾಗಿರುವ ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ತನಿಖಾಧಿಕಾರಿಗಳಿಗೆ ಸಹಾಯವಾಗುತ್ತದೆ.

ಸೈಬರ್ ವಂಚನೆ ದೂರುಗಳಿಗೆ ಪ್ರತಿಕ್ರಿಯಿಸಲು ಮತ್ತು ತಕ್ಷಣದ ಸಹಾಯವನ್ನು ಒದಗಿಸಲು ಸ್ಥಾಪಿಸಲಾದ 1930ಗೆ ಕರೆ ಮಾಡುವ ಮೂಲಕ ವಂಚನೆಗೆ ಒಳಗಾದವರು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಭಾರತ ಸರ್ಕಾರದ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಮೂಲಕವೂ ದೂರುಗಳನ್ನು ನೋಂದಾಯಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us