AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಹಲ್ಗಾಮ್ ದಾಳಿ: ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ

ಪಹಲ್ಗಾಮ್ ದಾಳಿ: ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ

Ganapathi Sharma
|

Updated on: Apr 24, 2025 | 7:16 AM

ಉಗ್ರರ ಭೀಕರ ದಾಳಿಗೆ ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಬಲಿಯಾದ ಕನ್ನಡಿಗರಿಬ್ಬರ ಮೃತದೇಹ ಬೆಂಗಳೂರು ವಿಮಾನ ನಿಲ್ದಾಣ ತಲುಪಿದ್ದು, ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ, ಸಚಿವ ಸೋಮಣ್ಣ ಸೇರಿ ಗಣ್ಯರು ಪಾರ್ಥಿವ ಶರೀರಗಳಿಗೆ ಅಂತಿಮ ನಮನ ಸಲ್ಲಿಸಿದರು. ಇತ್ತ, ಮೃತರಿಬ್ಬರ ಕುಟುಂಬದವರಲ್ಲಿ, ಸಂಬಂಧಿಕರಲ್ಲಿ ಶೋಕ ಮಡುಗಟ್ಟಿದೆ.

ಬೆಂಗಳೂರು, ಏಪ್ರಿಲ್ 24: ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಇಬ್ಬರು ಕನ್ನಡಿಗರ ಮೃತದೇಹ ಬೆಂಗಳೂರು ತಲುಪಿದೆ. ಶಿವಮೊಗ್ಗ ಉದ್ಯಮಿ ಮಂಜುನಾಥ್ ರಾವ್ ಮತ್ತು ಹಾವೇರಿ ಮೂಲದ ಬೆಂಗಳೂರು ನಿವಾಸಿ ಭರತ್ ಭೂಷಣ್ ಪಾರ್ಥಿವ ಶರೀರ ಬೆಳಗಿನ ಜಾವ ಬೆಂಗಳೂರು ತಲುಪಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ದೆಹಲಿಯಿಂದ ಇಬ್ಬರು ಕನ್ನಡಿಗರ ಮೃತದೇಹಗಳು ಬೆಂಗಳೂರು ಏರ್​ಪೋರ್ಟ್ ತಲುಪಿದ್ವು. ಮಂಜುನಾಥ್ ಸಂಬಂಧಿಕರು ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಬಳಿಕ ಆ್ಯಂಬುಲೆನ್ಸ್ ಮೂಲಕ ಎಸ್ಕಾರ್ಟ್ ಭದ್ರತೆಯಲ್ಲಿ ಮಂಜುನಾಥ್ ಮೃತದೇಹ ಶಿವಮೊಗ್ಗದತ್ತ ಸಾಗಿದೆ. ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

ಬೆಂಗಳೂರು, ತುಮಕೂರು, ಚಿತ್ರದುರ್ಗ, ಚನ್ನಗಿರಿ ಮೂಲಕ ಶಿವಮೊಗ್ಗಕ್ಕೆ ಮಂಜುನಾಥ್ ಮೃತದೇಹ ತಲುಪಲಿದೆ. ವಿಜಯನಗರ ಗುತ್ಯಪ್ಪ ಕಾಲೋನಿಯಲ್ಲಿರುವ ಮಂಜುನಾಥ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಿಂದೂ ಕಾರ್ಯಕರ್ತರು ಬೈಕ್ ರ್ಯಾಲಿಗೆ ಮುಂದಾಗಿದ್ದಾರೆ. ತುಂಗಾ ನದಿ ತಟದಲ್ಲಿರುವ ರೋಟರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಮಂಜುನಾಥ್ ಅಂತ್ಯಕ್ರಿಯೆ ನೆರವೇರಲಿದೆ. ಇನ್ನು ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚುವ ನಿರ್ಧಾರ ಮಾಡಿದ್ದಾರೆ.

ಇತ್ತ ಹಾವೇರಿ ಮೂಲದ ಭರತ್ ಭೂಷಣ್ ಮೃತದೇಹ ಈಗಾಗಲೇ ಬೆಂಗಳೂರಿನಲ್ಲಿರುವ ಮತ್ತಿಕೆರೆ ನಿವಾಸ ತಲುಪಿದೆ. ಮನೆ ಬಳಿ ಬ್ಯಾರಿಕೇಡ್ ಹಾಕಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಚಿವರು, ಗಣ್ಯರು ಅಂತಿಮ ದರ್ಶನಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಭಯೋತ್ಪಾದಕರ ದಾಳಿಯಿಂದ ಜೀವ ಕಳೆದುಕೊಂಡವರ ಕನ್ನಡಿಗರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ