ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಉದ್ಘಾಟನೆ ಮಾಡಲಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಯಾರೆಲ್ಲ ಭಾರತದ ಪ್ರಧಾನಿಗಳಾಗಿದ್ದಾರೋ ಅವರೆಲ್ಲರ ಸ್ಮರಣಾರ್ಥ ನಿರ್ಮಾಣವಾಗಿರುವ ಮ್ಯೂಸಿಯಂ ಇದಾಗಿದ್ದು, ಏಪ್ರಿಲ್ 14ರಂದು ಲೋಕಾರ್ಪಣೆಗೊಳ್ಳಲಿದೆ. ಸ್ವಾತಂತ್ರ್ಯಾನಂತರದ ಪ್ರಧಾನಿಗಳಿಗೆ ಗೌರವ ಸಲ್ಲಿಸಲು ತೆಗೆದುಕೊಂಡ ನಿರ್ಧಾರ ಇದು. ಅವರು ಯಾವುದೇ ಪಕ್ಷದವರಾಗಿರಲಿ, ಪ್ರಧಾನಿ ಹುದ್ದೆಯಲ್ಲಿ ಕಡಿಮೆ ಅವಧಿಯೇ ಸೇವೆ ಸಲ್ಲಿಸಿರಲಿ, ಅವರೆಲ್ಲ ಯಾವುದೇ ಸಿದ್ಧಾಂತಗಳನ್ನು ಪಾಲಿಸಿರಲಿ, ಅಭಿಪ್ರಾಯ ಬೇಧಗಳು ಏನೇ ಇರಲಿ ಎಲ್ಲವನ್ನೂ ಬದಿಗಿಟ್ಟು, ಪ್ರತಿಯೊಬ್ಬ ಪ್ರಧಾನಿಗೂ ಗೌರವ ಸಲ್ಲಿಸಬೇಕು ಎಂಬುದು ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹದಾಶಯ. ಹೀಗಾಗಿ ಪ್ರಧಾನಮಂತ್ರಿಗಳ ಸಂಗ್ರಹಾಲಯ ಸ್ಥಾಪಿಸಲಾಗಿದೆ ಎಂದು ಪಿಎಂಒ ತಿಳಿಸಿದೆ.
ಏಪ್ರಿಲ್14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದೇ ಈ ಮ್ಯೂಸಿಯಂ ಉದ್ಘಾಟನೆಯಾಗಲಿದೆ. ಅಂದಹಾಗೇ, ಪ್ರಧಾನಿಗಳ ಮ್ಯೂಸಿಯಂ ದೆಹಲಿಯ ತೀನ್ ಮೂರ್ತಿ ಭವನದಲ್ಲಿದೆ. ಸ್ವಾತಂತ್ರಾನಂತರ ಇಲ್ಲಿಯವರೆಗೆ ಒಟ್ಟು 14 ಪ್ರಧಾನಮಂತ್ರಿಗಳು ದೇಶವನ್ನಾಳಿದ್ದಾರೆ. ಅವರೆಲ್ಲರಿಗೆ ಸಂಬಂಧಪಟ್ಟ ನೆನಪುಗಳನ್ನು ಈ ಮ್ಯೂಸಿಯಂನಲ್ಲಿ ಸಂಗ್ರಹಿಸಿಡಲಾಗಿದೆ. ಒಟ್ಟು 270 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಧಾನಮಂತ್ರಿ ಸಂಗ್ರಹಾಲಯ ನಿರ್ಮಾಣಗೊಂಡಿದೆ. ಈ ಸಂಗ್ರಹಾಲಯದಲ್ಲಿ ಒಟ್ಟು 43 ಗ್ಯಾಲರಿಗಳು ಇರಲಿವೆ. ಎರಡು ಬ್ಲಾಕ್ಗಳು ಇರಲಿದ್ದು ಒಟ್ಟಾರೆ 15,600ಚದರ ಮೀಟರ್ಗೂ ಹೆಚ್ಚಿನ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ.
ಈ ಸಂಗ್ರಹಾಲಯದ ವಿನ್ಯಾಸ ತುಂಬ ಸುಸ್ಥಿರವಾಗಿದೆ. ನಿರ್ಮಾಣ ಹಂತದಲ್ಲಿ ಶಕ್ತಿ ವ್ಯಯವನ್ನು ತಪ್ಪಿಸಲಾಗಿದೆ. ಹಾಗೇ. ಇದನ್ನು ಕಟ್ಟುವ ಸಲುವಾಗಿ ಯಾವುದೇ ಒಂದು ಮರವನ್ನೂ ಕಡಿದಿಲ್ಲ, ಅಥವಾ ಸಸಿಗಳನ್ನು ಸ್ಥಳಾಂತರ ಮಾಡಿಲ್ಲ. ಈ ಪ್ರಧಾನಮಂತ್ರಿಗಳ ಮ್ಯೂಸಿಯಂನ ಲೋಗೋ ಧರ್ಮ ಚಕ್ರವಾಗಿದೆ. ದೇಶದ ಜನರು ಧರ್ಮ ಚಕ್ರವನ್ನು ಎತ್ತಿ ಹಿಡಿದಂತೆ ವಿನ್ಯಾಸಗೊಳಿಸಲಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಈ ರಾಷ್ಟ್ರದ ಸಂಕೇತ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ: ಫಿಲಿಪಿನ್ಸ್ನಲ್ಲಿ ಭೀಕರ ಚಂಡಮಾರುತದಿಂದ ಭೂಕುಸಿತ, ಪ್ರವಾಹ; 58 ಮಂದಿ ಸಾವು, ಬಿಡುವಿಲ್ಲದೆ ನಡೆಯುತ್ತಿದೆ ರಕ್ಷಣಾ ಕಾರ್ಯಾಚರಣೆ
Published On - 9:45 am, Wed, 13 April 22