ಭೀಕರ ಪ್ರವಾಹ, ಮಳೆಗೆ ತತ್ತರಿಸಿದ ನೇಪಾಳ; 112 ಸಾವು, 79 ಜನ ನಾಪತ್ತೆ

|

Updated on: Sep 29, 2024 | 7:58 AM

ನೇಪಾಳದ ಹಲವೆಡೆ ಭೂಕುಸಿತದಿಂದ 112 ಜನ ಮೃತಪಟ್ಟಿದ್ದಾರೆ. ಭೂಕುಸಿತದಿಂದ ನಾಪತ್ತೆಯಾದ 79 ಜನರಿಗಾಗಿ ಹುಡುಕಾಟ ನಡೆಯುತ್ತಿದೆ. ಕಠ್ಮಂಡು ಸೇರಿದಂತೆ ನೇಪಾಳದ ಹಲವೆಡೆ ಭಾರಿ ಮಳೆ, ಪ್ರವಾಹದಿಂದ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ.

ಭೀಕರ ಪ್ರವಾಹ, ಮಳೆಗೆ ತತ್ತರಿಸಿದ ನೇಪಾಳ; 112 ಸಾವು, 79 ಜನ ನಾಪತ್ತೆ
ನೇಪಾಳದಲ್ಲಿ ಪ್ರವಾಹ
Follow us on

ಕಠ್ಮಂಡು, ಸೆ.29: ನೇಪಾಳದಲ್ಲಿ ನಿರಂತರ ಮಳೆಯಿಂದ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ (Nepal Floods and Landslides). ಈ ಪರಿಣಾಮ ನೇಪಾಳದಲ್ಲಿ ಕನಿಷ್ಠ 112 ಜನರು ಮೃತಪಟ್ಟಿದ್ದಾರೆ (Death). ಹಾಗೂ 79 ಮಂದಿ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಭೀಕರ ಪ್ರವಾಹ, ಮಳೆಗೆ ನೇಪಾಳ ಜನತೆ ತತ್ತರಿಸಿದ್ದಾರೆ.

ಭೂಕುಸಿತದಿಂದ ನಾಪತ್ತೆಯಾದ ಜನರಿಗಾಗಿ ಹುಡುಕಾಟ ನಡೆಯುತ್ತಿದೆ. ರಾಜಧಾನಿ ಕಠ್ಮಂಡು ಸೇರಿದಂತೆ ನೇಪಾಳದ ಹಲವೆಡೆ ಭಾರಿ ಮಳೆ, ಪ್ರವಾಹದಿಂದ ಇಡೀ ಊರುಗಳು ಜಲಾವೃತಗೊಂಡಿವೆ. ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಮನೆ ಕಳೆದುಕೊಂಡು ನಿರಾಶ್ರಿತರಾದ ಜನರನ್ನು ರಕ್ಷಣಾಪಡೆಗಳು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನೇಪಾಳ ಸರ್ಕಾರ ಸೂಚನೆ ನೀಡಿದೆ.

ಶನಿವಾರ ಹೆಲಿಕಾಪ್ಟರ್‌ಗಳು ಮತ್ತು ಮೋಟಾರ್‌ಬೋಟ್‌ಗಳೊಂದಿಗೆ 3,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಗಳನ್ನು ಮಾಡಿ ಅನೇಕರನ್ನು ರಕ್ಷಿಸಿದ್ದಾರೆ.

‘ನಿರಂತರ ಮಳೆಯಿಂದಾಗಿ 112 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ 34 ಮಂದಿ ಕಠ್ಮಂಡು ಕಣಿವೆಯಲ್ಲಿಯೇ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ’ ಎಂದು ತಿಳಿದುಬಂದಿದೆ. ಪ್ರವಾಹದಲ್ಲಿ ಒಟ್ಟು 79 ಮಂದಿ ನಾಪತ್ತೆಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ದೇಶದಾದ್ಯಂತ 44 ಸ್ಥಳಗಳಲ್ಲಿ ಪ್ರಮುಖ ಹೆದ್ದಾರಿಗಳನ್ನು ಬಂದ್‌ ಮಾಡಲಾಗಿದೆ.

ಇದನ್ನೂ ಓದಿ: ಪ್ರವಾಹದಿಂದ ಪಾರಾಗಲು ಮಕ್ಕಳನ್ನು ಜೆಸಿಬಿ ಹತ್ತಿಸಿದ ವ್ಯಕ್ತಿ

ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮಾನ್ಸೂನ್ ಮಳೆಯು ಹಿಮಾಲಯ ರಾಷ್ಟ್ರದಲ್ಲಿ ಮತ್ತು ದಕ್ಷಿಣ ಏಷ್ಯಾದಾದ್ಯಂತ ಪ್ರತಿ ವರ್ಷವೂ ವ್ಯಾಪಕ ಸಾವು ಮತ್ತು ವಿನಾಶವನ್ನು ತರುತ್ತದೆ, ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರವಾಹಗಳು ಮತ್ತು ಭೂಕುಸಿತಗಳ ಸಂಖ್ಯೆ ಹೆಚ್ಚಾಗಿದೆ.

“ಕಾಣೆಯಾದ ಜನರನ್ನು ರಕ್ಷಿಸಲು ಮತ್ತು ಹುಡುಕಲು ಪೊಲೀಸರು ಇತರ ಏಜೆನ್ಸಿಗಳು ಮತ್ತು ಸ್ಥಳೀಯರೊಂದಿಗೆ ಕಾರ್ಯಾಚರಣೆ ನಡೆಸುತ್ತಿವೆ.” ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಬಸಂತ ಅವರು ತಿಳಿಸಿದರು.

ಕಠ್ಮಂಡುವಿನಲ್ಲಿ ಸುಮಾರು 226 ಮನೆಗಳು ಮುಳುಗಡೆಯಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುಮಾರು 3,000 ಭದ್ರತಾ ಸಿಬ್ಬಂದಿಯ ರಕ್ಷಣಾ ತಂಡವನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ