ದೆಹಲಿ: ಕೇಂದ್ರ ಸರ್ಕಾರ ಓಟಿಟಿ ನಿಯಂತ್ರಣಕ್ಕೆ ಸಂಬಂಧಿಸಿ ರೂಪಿಸಿರುವ ಮಾರ್ಗದರ್ಶಿ ಪಟ್ಟಿ ದುರ್ಬಲವಾಗಿದ್ದು, ‘ಹಲ್ಲೇ ಇಲ್ಲ’ ಎಂದು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದೆ. ಅಲ್ಲದೇ, ಓಟಿಟಿ ವೇದಿಕೆಗಳನ್ನು ಹದ್ದುಬಸ್ತಿನಲ್ಲಿ ಇಡಬಲ್ಲ ಪರಿಣಾಮಕಾರಿ ಕಾನೂನನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರವಾದ ವೆಬ್ ಸರಣಿ ‘ತಾಂಡವ್’ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಮೆಜಾನ್ ಪ್ರೈಮ್ನ ಭಾರತದ ಮುಖ್ಯಸ್ಥ ಅಪರ್ಣಾ ಪುರೋಹಿತ್ರನ್ನು ಬಂಧಿಸದಂತೆ ಆದೇಶ ನೀಡಿತು. ಆದರೆ ಪೊಲೀಸರ ತನಿಖೆಗೆ ಅಪರ್ಣಾ ಪುರೋಹಿತ್ ಸಂಪೂರ್ಣ ಸಹಕಾರ ನೀಡಬೇಕು ಎಂದು ಸ್ಪಷ್ಟಪಡಿಸಿತು.
ವಕೀಲ ಶಶಾಂಕ್ ಶೇಖರ್ ಮತ್ತು ಅಪೂರ್ವಾ ಅರ್ಹಿತಾ ಅವರುಗಳು ಓಟಿಟಿ ವೇದಿಕೆಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಬೇಕೆಂದು ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷ ಅಕ್ಟೋಬರ್ 15ಕ್ಕೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಇಂಟರ್ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾಗೆ ನೋಟಿಸ್ ನೀಡಿತ್ತು.
ನಂತರ ನಡೆದ ವಿಚಾರಣೆಯಲ್ಲಿ ‘ಓಟಿಟಿ ವೇದಿಕೆಗಳ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಲು ಯೋಚಿಸುತ್ತಿದ್ದೇವೆ’ ಎಂದು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೋರ್ಟ್ನಲ್ಲಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಟಟರ್ ಜನರಲ್ ಸಂಜಯ್ ಜೈನ್ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದರು. ಓಟಿಟಿ ವೇದಿಕೆಗಳ ಕುರಿತು ಕೇಂದ್ರ ಸರ್ಕಾರದ ನಿಲುವು ತಿಳಿಸಲು ಸೂಚಿಸಿದ್ದ ಸುಪ್ರೀಂ ಕೋರ್ಟ್ನ ಮುಖ್ಯ ನಾಯಮೂರ್ತಿ ಎಸ್.ಎ.ಬೋಬ್ಡೆ, ನ್ಯಾಯಮೂರ್ತಿಗಳಾದ ಎ. ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಹ್ಮಣ್ಯನ್ ಅವರಿದ್ದ ತ್ರಿಸದಸ್ಯ ಪೀಠಕ್ಕೆ ಕೇಂದ್ರ ಸರ್ಕಾರ ತನ್ನ ನಿಲುವು ತಿಳಿಸಿತ್ತು.
ಅರ್ಜಿಯಲ್ಲಿ ಏನಿತ್ತು?
ದೇಶದಲ್ಲಿ ಸಿನಿಮಾ ಥಿಯೇಟರ್ ಶೀಘ್ರವೇ ತೆರೆಯುವ ಸಾಧ್ಯತೆ ಇಲ್ಲ, ಓಟಿಟಿ ಅಥವಾ ಇತರ ಡಿಜಿಟಲ್ ಮೀಡಿಯಾ ವೇದಿಕೆಗಳಲ್ಲಿ ಸಿನಿಮಾ ನಿರ್ಮಾಪಕರು ಮತ್ತು ಕಲಾವಿದರು ತಮ್ಮ ಕಲೆಯನ್ನು ಬಿಡುಗಡೆ ಮಾಡುತ್ತಾರೆ. ಸೆನ್ಸಾರ್ ಮಂಡಳಿಯಿಂದ ಸಿನಿಮಾ ಅಥವಾ ಸರಣಿಗಾಗಿ ಪ್ರಮಾಣಪತ್ರವನ್ನು ಪಡೆಯಬೇಕು ಎಂಬುದರ ಬಗ್ಗೆ ಅವರು ಯೋಚಿಸುವುದಿಲ್ಲ. ಆದಾಗ್ಯೂ, ಡಿಜಿಟಲ್ ವಿಷಯದ ಮೇಲೆ ನಿಗಾ ಇರಿಸುವ ಮತ್ತು ನಿರ್ವಹಿಸುವ ಸಂಸ್ಥೆ ಅಥವಾ ಯಾವುದೇ ಕಾನೂನು ದೇಶದಲ್ಲಿ ಇಲ್ಲ. ಯಾವುದೇ ರೀತಿಯ ಫಿಲ್ಟರ್ ಅಥವಾ ಸ್ಕ್ರೀನಿಂಗ್ ಇಲ್ಲದೆಯೇ ಈ ಮಾಧ್ಯಮಗಳು ಜನರಲ್ಲಿಗೆ ತಲುಪುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ನೂತನ ಮಾರ್ಗದರ್ಶಿ ನಿಯಮ ಸಲ್ಲಿಸಲು ಸೂಚನೆ ನೀಡಿದ್ದ ಕೋರ್ಟ್
ಕೆಲ ದಿನಗಳ ನಂತರ ನಡೆದ ವಿಚಾರಣೆಯಲ್ಲಿ ‘ಓಟಿಟಿ ವೇದಿಕೆಗಳು ಕಂಟೆಂಟ್ ಪ್ರಸಾರ ಮಾಡುವ ಮುನ್ನ ಕಂಟೆಂಟ್ ಪರಿಶೀಲನೆ ನಡೆಸಬೇಕು . ಪರಿಶೀಲನೆ ನಡೆಸದೇ ಓಟಿಟಿ ವೇದಿಕೆಗಳು ಕಂಟೆಂಟ್ ಪ್ರಸಾರ ಮಾಡುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಅಲ್ಲದೇ, ‘ಓಟಿಟಿ ಕಂಟೆಂಟ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿ ನೂತನ ಮಾರ್ಗದರ್ಶಿ ನಿಯಮಾವಳಿಗಳನ್ನು (OTT Regulation) ಸಲ್ಲಿಸಲು’ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ನಿಯಮಗಳೇನು?
ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ 2021, ಫೆಬ್ರವರಿ 25ರಂದು ಹೊಸ ನಿಯಮಗಳನ್ನು ಘೋಷಿಸಿತು. ಈ ಕ್ರಮವನ್ನು ‘ಎಲ್ಲರಿಗೂ ದನಿ ನೀಡುವ ಮೃದು ಧೋರಣೆಯ ಸಾಂಸ್ಥಿಕ ನಿಯಂತ್ರಣ ಕ್ರಮ’ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಸಮರ್ಥಿಸಿಕೊಂಡರು. ಇಬ್ಬರು ಸಚಿವರು ಒಂದೇ ವೇದಿಕೆಯಲ್ಲಿ ಡಿಜಿಟಲ್ ವೇದಿಕೆಗೆ ಸಂಬಂಧಿಸಿದ ಮೂರು ಮಾಧ್ಯಮಗಳ ನಿಯಂತ್ರಣ ವ್ಯವಸ್ಥೆಯನ್ನು ಘೋಷಿಸಿದ್ದರು.
ಎಲ್ಲಾ ಪ್ರಮುಖ ಸೋಷಿಯಲ್ ಮೀಡಿಯಾ, ಓಟಿಟಿ ಸಂಸ್ಥೆಗಳು ದೂರು ವಿಲೇವಾರಿ ಅಧಿಕಾರಿಯನ್ನು ನೇಮಿಸಬೇಕು. ಈ ವ್ಯಕ್ತಿ ಭಾರತದಲ್ಲಿಯೇ ಇರಬೇಕು. ಪ್ರತಿ ಆರು ತಿಂಗಳಿಗೆ ಒಮ್ಮೆ ದೂರು ವಿಲೇವಾರಿ ಮಾಹಿತಿಯನ್ನು ಪ್ರಕಟಿಸಬೇಕು. ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕಾಗಿ ಸರ್ಕಾರ ಯಾವುದೇ ಕಾಯ್ದೆಯನ್ನು ಹೊಸದಾಗಿ ಹೇರುತ್ತಿಲ್ಲ. ಹಾಲಿ ಚಾಲ್ತಿಯಲ್ಲಿರುವ ಐಟಿ ಕಾಯ್ದೆಯ ಅನ್ವಯವೇ ಹೊಸ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ, ಜಾರಿಗೊಳಿಸುತ್ತಿದೆ.
ಇದನ್ನೂ ಓದಿ: ಸೋಷಿಯಲ್ ಮೀಡಿಯಾ, ಒಟಿಟಿ, ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ನಿಯಮ: ನೀವು ತಿಳಿಯಬೇಕಾದ 10 ಅಂಶಗಳು
Published On - 4:13 pm, Fri, 5 March 21