ಉತ್ತರ ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ: 4,651 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ RRC ಉತ್ತರ ರೈಲ್ವೆಯು ದೇಶಾದ್ಯಂತ 4,651 ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿ ಹಾಗೂ ITI ಪೂರ್ಣಗೊಳಿಸಿದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 11 ಕೊನೆಯ ದಿನಾಂಕ. ಲಿಖಿತ ಪರೀಕ್ಷೆ ಇಲ್ಲದೆ, ಮೆರಿಟ್ ಆಧಾರದ ಮೇಲೆ ನೇರ ಆಯ್ಕೆ ಪ್ರಕ್ರಿಯೆ ಇರುವುದರಿಂದ ಅರ್ಹರು ತಕ್ಷಣ ಅರ್ಜಿ ಸಲ್ಲಿಸಿ.

ಉತ್ತರ ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ: 4,651 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಉತ್ತರ ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ
Image Credit source: Getty Images

Updated on: Nov 15, 2026 | 2:56 PM

ನವದೆಹಲಿಯಲ್ಲಿರುವ ರೈಲ್ವೆ ನೇಮಕಾತಿ ಕೋಶ (RRC) – ಉತ್ತರ ರೈಲ್ವೆಯು ದೇಶದ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು, ವಿವಿಧ ವಿಭಾಗಗಳು, ಕಾರ್ಯಾಗಾರಗಳು ಮತ್ತು ಘಟಕಗಳಲ್ಲಿ ಖಾಲಿ ಇರುವ ಒಟ್ಟು 4,651 ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್ 11 ಕೊನೆಯ ದಿನಾಂಕವಾಗಿದೆ.

ಕ್ಲಸ್ಟರ್‌ವಾರು ಖಾಲಿ ಹುದ್ದೆಗಳ ವಿವರ:

ಈ ನೇಮಕಾತಿಯಲ್ಲಿ ಒಟ್ಟು 4,651 ಹುದ್ದೆಗಳಿದ್ದು, ಉತ್ತರ ರೈಲ್ವೆಯ ವಿವಿಧ ಕ್ಲಸ್ಟರ್‌ಗಳಲ್ಲಿ ಇವುಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಲಕ್ನೋ ಕ್ಲಸ್ಟರ್‌ಗೆ ಅತಿ ಹೆಚ್ಚು ಅಂದರೆ 1,525 ಹುದ್ದೆಗಳು ಮೀಸಲಿದ್ದು, ದೆಹಲಿ ಕ್ಲಸ್ಟರ್‌ನಲ್ಲಿ 1,312 ಹುದ್ದೆಗಳಿವೆ. ಉಳಿದಂತೆ ಅಂಬಾಲ ಕ್ಲಸ್ಟರ್‌ನಲ್ಲಿ 979, ಫಿರೋಜ್‌ಪುರ ಕ್ಲಸ್ಟರ್‌ನಲ್ಲಿ 740, ಮೊರಾದಾಬಾದ್ ಕ್ಲಸ್ಟರ್‌ನಲ್ಲಿ 63 ಹಾಗೂ ಜಮ್ಮು ಕ್ಲಸ್ಟರ್‌ನಲ್ಲಿ 32 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

Loading...

ವಿದ್ಯಾರ್ಹತೆ ಮತ್ತು ಟ್ರೇಡ್‌ಗಳ ವಿವರ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಶೇ. 50 ಅಂಕಗಳೊಂದಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ (ITI) ಅರ್ಹತೆಯನ್ನು ಹೊಂದಿರಬೇಕು. ಮೆಕ್ಯಾನಿಕಲ್, ಎಲೆಕ್ಟ್ರಿಷಿಯನ್, ಫಿಟ್ಟರ್, ಕಾರ್ಪೆಂಟರ್, ಎಂಎಂವಿ, ವೆಲ್ಡರ್, ಪೇಂಟರ್, ಮೆಷಿನಿಸ್ಟ್, ಟರ್ನರ್, ರೆಫ್ರಿಜರೇಟರ್ ಮತ್ತು ಎಸಿ ಮೆಕ್ಯಾನಿಕ್, ಡೇಟಾ ಎಂಟ್ರಿ ಆಪರೇಟರ್, ಸ್ಟೆನೋಗ್ರಾಫರ್ ಮುಂತಾದ ವಿವಿಧ ಟ್ರೇಡ್‌ಗಳಲ್ಲಿ ಐಟಿಐ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: 68ರ ವಯಸ್ಸಿನಲ್ಲೂ ಕಲಿಕೆಯ ಉತ್ಸಾಹ; ನಿವೃತ್ತ ಅಧಿಕಾರಿ ಈಗ ಸೈಕಾಲಜಿ ಸ್ಟೂಡೆಂಟ್!

ವಯೋಮಿತಿ ಮತ್ತು ಅರ್ಜಿ ಶುಲ್ಕ:

ಡಿಸೆಂಬರ್ 11 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯೋಮಿತಿಯನ್ನು 15 ರಿಂದ 24 ವರ್ಷಗಳ ಒಳಗೆ ನಿಗದಿಪಡಿಸಲಾಗಿದ್ದು, ಸರ್ಕಾರಿ ನಿಯಮಗಳ ಪ್ರಕಾರ ಅರ್ಹ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ. ಅರ್ಜಿ ಸಲ್ಲಿಸುವ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ತಲಾ 100 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಎಸ್‌ಸಿ, ಎಸ್‌ಟಿ, ದಿವ್ಯಾಂಗ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ಪರೀಕ್ಷೆ ಇಲ್ಲದೆ ನೇರ ಆಯ್ಕೆ ಪ್ರಕ್ರಿಯೆ:

ಈ ಅಪ್ರೆಂಟಿಸ್ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ ಎಂಬುದು ವಿಶೇಷ. ಬದಲಿಗೆ, ಅಭ್ಯರ್ಥಿಗಳು 10ನೇ ತರಗತಿ ಮತ್ತು ಐಟಿಐನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ. ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಹಂತವಾಗಿ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದು. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 11, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us