ಮೊಸಳೆಯ ದವಡೆಯಿಂದ ಸಹೋದರನನ್ನು ಬಿಡಿಸಿದ ಇಬ್ಬರು ಸಹೋದರರು: ಒಂದೂವರೆ ಗಂಟೆ ನೀರಿನಲ್ಲೇ ಹೋರಾಟ

ಒಡಿಶಾದ ಬೌಧ್ ಜಿಲ್ಲೆಯಲ್ಲಿ ಮೊಸಳೆ ದಾಳಿಗೆ ಒಳಗಾದ ತಮ್ಮ ಸಹೋದರನನ್ನು ರಕ್ಷಿಸಲು ಇಬ್ಬರು ಅಣ್ಣತಮ್ಮಂದಿರು ಒಂದೂವರೆ ಗಂಟೆಗಳ ಕಾಲ ಮಹಾನದಿ ನೀರಿನಲ್ಲಿ ವೀರಾವೇಶದಿಂದ ಹೋರಾಡಿದ್ದಾರೆ. ತಮ್ಮ ಜೀವವನ್ನೂ ಲೆಕ್ಕಿಸದೆ ಮೊಸಳೆಯ ದವಡೆಯಿಂದ ಸಹೋದರನನ್ನು ಬಿಡಿಸಿದ ಛಬೀಂದ್ರ ಮತ್ತು ಪ್ರಮೋದ್ ಅವರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮೊಸಳೆಯ ದವಡೆಯಿಂದ ಸಹೋದರನನ್ನು ಬಿಡಿಸಿದ ಇಬ್ಬರು ಸಹೋದರರು: ಒಂದೂವರೆ ಗಂಟೆ ನೀರಿನಲ್ಲೇ ಹೋರಾಟ
ಮೊಸಳೆ
Image Credit source: Britannica

Updated on: Oct 05, 2026 | 2:54 PM

ಒಡಿಶಾ, ಅಕ್ಟೋಬರ್ 05: ಮೊಸಳೆಯ ಬಾಯೊಳಗೆ ಸಿಲುಕಿದ್ದ ಸಹೋದರನನ್ನು ರಕ್ಷಿಸಲು ಇಬ್ಬರು ಸಹೋದರರು ಸುಮಾರು ಒಂದೂವರೆ ಗಂಟೆಗಳ ಕಾಲ ನೀರಿನಲ್ಲೇ ಹೋರಾಡಿದ ಘಟನೆ ಒಡಿಶಾದ ಬೌಧ್ ಜಿಲ್ಲೆಯಲ್ಲಿ ನಡೆದಿದೆ. ತಮ್ಮ ಜೀವದ ಹಂಗನ್ನೂ ತೊರೆದು ಸಹೋದರನನ್ನು ಮೊಸಳೆಯ ಹಿಡಿತದಿಂದ ಬಿಡಿಸಿದ ಛಬೀಂದ್ರ ಬೆಹೆರಾ ಮತ್ತು ಪ್ರಮೋದ್ ಪ್ರಧಾನ್ ಅವರ ಧೈರ್ಯಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾನುವಾರ ಸಂಜೆ ಬೌಧ್ ಜಿಲ್ಲೆಯ ಹರ್ಭಂಗಾ ಬ್ಲಾಕ್‌ನ ಮರಾಡ ಮಹಾನದಿ ಘಾಟ್‌ನಲ್ಲಿ ಈ ಘಟನೆ ನಡೆದಿದೆ. ಮರಾಡ ಗ್ರಾಮದ ಸುಧೀರ್ ಬೆಹೆರಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಏಕಾಏಕಿ ಮೊಸಳೆಯೊಂದು ಅವರ ಮೇಲೆ ದಾಳಿ ಮಾಡಿದೆ. ಮೊಸಳೆ ಸುಧೀರ್ ಅವರನ್ನು ನೀರಿನೊಳಗೆ ಎಳೆಯಲು ಆರಂಭಿಸಿದ್ದು, ಅವರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.

ಸುಧೀರ್ ಅವರ ಕಿರುಚಾಟ ಕೇಳಿದ ಛಬೀಂದ್ರ ಮತ್ತು ಪ್ರಮೋದ್ ತಕ್ಷಣ ನದಿಗೆ ಹಾರಿದ್ದಾರೆ. ಮೊಸಳೆಯ ಹಿಡಿತದಲ್ಲಿದ್ದ ಸುಧೀರ್ ಅವರನ್ನು ಬಿಡಿಸಲು ಇಬ್ಬರೂ ನಿರಂತರವಾಗಿ ಪ್ರಯತ್ನಿಸಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ಮೊಸಳೆಯೊಂದಿಗೆ ಹೋರಾಟ ನಡೆಸಿದ ಬಳಿಕ ಕೊನೆಗೂ ಸುಧೀರ್ ಅವರನ್ನು ಅದರ ಹಿಡಿತದಿಂದ ಹೊರತೆಗೆದಿದ್ದಾರೆ.

ಮತ್ತಷ್ಟು ಓದಿ:
ಈಜುತ್ತ ಎಂಜಾಯ್ ಮಾಡುತ್ತಿದ್ದ 12 ವರ್ಷದ ಬಾಲಕಿಯನ್ನು ಜೀವಂತವಾಗಿ ನುಂಗಿದ ಮೊಸಳೆ

ಘಟನೆಯ ವೇಳೆ ನದಿ ದಡದಲ್ಲಿ ಜನರು ಸೇರಿದ್ದರೂ, ಮೊಸಳೆಯ ಭಯದಿಂದ ಯಾರೂ ನೀರಿಗೆ ಇಳಿಯಲು ಧೈರ್ಯ ಮಾಡಲಿಲ್ಲ. ಆದರೆ ಛಬೀಂದ್ರ ಮತ್ತು ಪ್ರಮೋದ್ ಮಾತ್ರ ತಮ್ಮ ಜೀವದ ಅಪಾಯವನ್ನೂ ಲೆಕ್ಕಿಸದೆ ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ.

ಮೊಸಳೆಯ ದಾಳಿಯಿಂದ ಸುಧೀರ್ ಅವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಮೊದಲು ಪುರುನಕಟಕ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಬಳಿಕ ಅವರ ಸ್ಥಿತಿ ಗಂಭೀರವಾಗಿದ್ದರಿಂದ ರಾತ್ರಿ ಸುಮಾರು 8.30ಕ್ಕೆ ಬೌಧ್ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆ ಬಳಿಕ ಮಹಾನದಿ ನದಿ ಪ್ರದೇಶದಲ್ಲಿ ಮೊಸಳೆಗಳ ಚಲನವಲನದ ಬಗ್ಗೆ ಸ್ಥಳೀಯರಲ್ಲಿ ಆತಂಕವೂ ಮೂಡಿದೆ. ನದಿಗೆ ಇಳಿಯುವವರು ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಹಾಗೂ ಅಧಿಕಾರಿಗಳು ಸೂಚಿಸಿದ್ದಾರೆ. ಇದೇ ವೇಳೆ, ಸುಧೀರ್ ಅವರನ್ನು ರಕ್ಷಿಸಲು ಪ್ರಾಣದ ಹಂಗು ತೊರೆದು ಹೋರಾಡಿದ ಛಬೀಂದ್ರ ಮತ್ತು ಪ್ರಮೋದ್ ಅವರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us