ಗುರುಗ್ರಾಮ: ಕೊವಿಡ್ 2ನೇ ಅಲೆ ಉಲ್ಬಣ ಆಗುತ್ತಿರುವ ಬೆನ್ನಲ್ಲೇ ದೇಶದ ಅನೇಕ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಕ್ಸಿಜನ್, ಬೆಡ್ಗಳ ಅಭಾವ ಉಂಟಾಗಿದೆ. ತಮ್ಮ ಜಿಲ್ಲೆಗಳಲ್ಲಿ ಎಲ್ಲ ವೈದ್ಯಕೀಯ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿಡಲು ಆಯಾ ಜಿಲ್ಲಾಡಳಿತಗಳು, ಆಯಾ ರಾಜ್ಯ ಸರ್ಕಾರಗಳೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಿವೆ. ಅದರಲ್ಲಿ ಒಂದಷ್ಟು ಜಿಲ್ಲಾಡಳಿತಗಳು ತಮ್ಮದೇ ಆದ ಸ್ವಂತ ನಿರ್ಧಾರ ಕೈಗೊಂಡು ಜನರಿಗೆ ಅನುಕೂಲ ಮಾಡಿಕೊಡುತ್ತಿವೆ. ಇದೀಗ ದೆಹಲಿಯ ಗುರುಗ್ರಾಮ ಜಿಲ್ಲಾಡಳಿತ ಒಂದೊಳ್ಳೆ ಕೆಲಸ ಪ್ರಾರಂಭಿಸುವ ಮೂಲಕ ಸುದ್ದಿಯಾಗಿದೆ.
ಇಲ್ಲಿ ಅಪಾರ ಸಂಖ್ಯೆಯ ಕೊರೊನಾ ರೋಗಿಗಳು ಮನೆಯಲ್ಲೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅನುಕೂಲ ಆಗುವಂತೆ ಗುರುಗ್ರಾಮ ಜಿಲ್ಲಾಡಳಿತ ಮನೆ ಬಾಗಿಲಿಗೆ ವೈದ್ಯಕೀಯ ಆಕ್ಸಿಜನ್ ಡೆಲಿವರಿ ಕೊಡುತ್ತಿದೆ. ಈ ಹೊಸ ಯೋಜನೆ ಇಂದಿನಿಂದ ಪ್ರಾರಂಭವಾಗಿದ್ದು, ಅಡುಗೆ ಅನಿಲದ ಮಾದರಿಯಲ್ಲೇ ವೈದ್ಯಕೀಯ ಆಮ್ಲಜನಕದ ಸಿಲೆಂಡರ್ ಕೂಡ ಮನೆಮನೆಯ ಬಾಗಿಲಿಗೆ ಪೂರೈಕೆ ಆಗುತ್ತದೆ.
ಇದಕ್ಕೊಂದು ಆನ್ಲೈನ್ ಪೋರ್ಟಲ್ ರಚಿಸಲಾಗಿದೆ. ಕೊವಿಡ್ 19 ಸೋಂಕಿತ ಅಥವಾ ಅವರನ್ನು ನೋಡಿಕೊಳ್ಳುತ್ತಿರುವವರು ಆಕ್ಸಿಜನ್ ಸಿಲಿಂಡರ್ ಅಗತ್ಯವಿದ್ದರೆ ಆನ್ಲೈನ್ ಮೂಲಕ ನೋಂದಣಿ ಮಾಡಬೇಕು. ಹೀಗೆ ಆನ್ಲೈನ್ನಲ್ಲಿ ಬುಕ್ ಮಾಡುವಾಗ ಅಲ್ಲಿ ನಿಮ್ಮ ಆಧಾರ್ ನಂಬರ್, ರೋಗಿಯ ವಯಸ್ಸು, ವಿಳಾಸ, ಎಷ್ಟು ಗಾತ್ರವಿರುವ ಸಿಲಿಂಡರ್ ಬೇಕು ಎಂಬುದನ್ನು ಸರಿಯಾಗಿ ನಮೂದಿಸಬೇಕು. ನಂತರ ಮನೆ ಬಾಗಿಲಿಗೆ ಸಿಲಿಂಡರ್ ತಂದು ಕೊಡುತ್ತಾರೆ. ಆದರೆ ಹೀಗೆ ಆರ್ಡರ್ ಮಾಡುವವರು ಆಕ್ಸಿಮೀಟರ್ನಲ್ಲಿ ಆಮ್ಲಜನಕ ಮಟ್ಟ ಕಡಿಮೆ ತೋರಿಸುತ್ತಿರುವ ಫೋಟೋವೊಂದನ್ನು ಹಾಕುವುದು ಕಡ್ಡಾಯ. ಫೋಟೋ ಹಾಕದೆ ಇದ್ದರೆ ಅದು ಆರ್ಡರ್ ಆಗುವುದಿಲ್ಲ. ಅದಿಲ್ಲದಿದ್ದರೆ ವೈದ್ಯರ ಸಹಿ ಇರುವ ಔಷಧ ಚೀಟಿಯ ಫೋಟೋವನ್ನಾದರೂ ಹಾಕಬೇಕು. ಈ ಕೆಲಸದಲ್ಲಿ ಜಿಲ್ಲಾಡಳಿತದೊಂದಿಗೆ ಎನ್ಜಿಒವೊಂದು ಕೈಜೋಡಿಸಿದೆ.
ಇನ್ನು ಖಾಲಿ ಸಿಲಿಂಡರ್ಗಳನ್ನು ಮರುಪೂರಣ ಮಾಡಿಕೊಡಲು ಕೂಡ ವ್ಯವಸ್ಥೆ ಮಾಡಲಾಗುವುದು. ಒಂದು ಮನೆಯಲ್ಲಿ ಖಾಲಿಯಾದ ಸಿಲಿಂಡರ್ನ್ನು ತುಂಬಿ ಮತ್ತೆ ಅವರಿಗೆ ನೀಡಲು ಸ್ವಯಂ ಸೇವಕರನ್ನು ನೇಮಕ ಮಾಡಲಾಗುವುದು ಎಂದೂ ಜಿಲ್ಲಾಡಳಿತ ಮಾಹಿತಿ ನೀಡಿದೆ. ಗುರುಗ್ರಾಮ ಜಿಲ್ಲಾಡಳಿತದ ಈ ಕ್ರಮದಿಂದ ಅಲ್ಲಿನ ಅನೇಕ ರೋಗಿಗಳು ಉಪಯೋಗಪಡೆಯುವಂತಾಗಿದೆ.
Published On - 3:12 pm, Sun, 9 May 21