
ನವದೆಹಲಿ, ನವೆಂಬರ್ 16: ಸಿಂಧೂ ನದಿ ನೀರಿನ ವಿಚಾರಕ್ಕೆ ಬಂದರೆ ಕೈ ಕತ್ತರಿಸುತ್ತೇವೆ ಎಂದು ಭಾರತಕ್ಕೆ ಬೆದರಿಕೆ ಹಾಕಿದ್ದ ಪಾಕಿಸ್ತಾನ ಸಚಿವ ದೆಹಲಿಗೆ ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಂದು ಕಡೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಿಂಧೂ ನದಿ ನೀರಿನ ವಿಚಾರವಾಗಿ ಸಂಘರ್ಷ ಮುಂದುವರೆದಿದೆ. ಮತ್ತೊಂದೆಡೆ ಇದೇ ವಿವಾದದಲ್ಲಿ ಭಾರತಕ್ಕೆ ಬಹಿರಮಗವಾಗಿ ಬೆದರಿಕೆ ಹಾಕಿದ್ದ ಪಾಕಿಸ್ತಾನದ ಸಚಿವರೇ ಇದೀಗ ದೆಹಲಿಗೆ ಬರಲು ಸಿದ್ಧರಾಗಿದ್ದಾರೆ.
ನವೆಂಬರ್ 20ರಿಂದ ದೆಹಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ (SCO) ನಾಗರಿಕತೆ ಮತ್ತು ಸಾಂಸ್ಕೃತಿಕ ಸಂವಾದದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಲು ಮುಸಾದಿಕ್ ಮಲಿಕ್ ಅವರನ್ನು ಆಯ್ಕೆ ಮಾಡಲಾಗಿದೆ. ಮೂರು ವರ್ಷಗಳ ಬಳಿಕ ಪಾಕಿಸ್ತಾನದ ಫೆಡರಲ್ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಹಾಗಾದರೆ, ಭಾರತದ ವಿರುದ್ಧ ಕಠಿಣ ಹೇಳಿಕೆ ನೀಡಿದ್ದ ಸಚಿವರನ್ನೇ ಪಾಕಿಸ್ತಾನ ದೆಹಲಿಗೆ ಕಳುಹಿಸುತ್ತಿರುವುದೇಕೆ? ಈ ಭೇಟಿಯ ಹಿಂದೆ ಸಿಂಧೂ ನದಿ ನೀರಿನ ವಿವಾದವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸುವ ತಂತ್ರ ಇದೆಯೇ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿವೆಯೇ? ಅಥವಾ ಸಿಂಧೂ ನದಿ ನೀರಿನ ವಿಚಾರದಲ್ಲಿ ಮತ್ತೊಂದು ರಾಜತಾಂತ್ರಿಕ ಸಮರಕ್ಕೆ ವೇದಿಕೆ ಸಿದ್ಧವಾಗುತ್ತಿದೆಯೇ? ಇಂತಹ ಕುತೂಹಲಕ್ಕೆ ಕಾರಣವಾಗಿದ್ದು ಪಾಕಿಸ್ತಾನದ ಒಂದು ಮಹತ್ವದ ನಿರ್ಧಾರ. ಭಾರತದ ವಿರುದ್ಧ ಕಠಿಣ ಹೇಳಿಕೆಗಳನ್ನು ನೀಡಿದ್ದ ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಸೂದ್ ಮಲಿಕ್ ಇದೀಗ ದೆಹಲಿಗೆ ಭೇಟಿ ನೀಡಲಿದ್ದಾರೆ. ನವೆಂಬರ್ 20ರಿಂದ 22ರವರೆಗೆ ನಡೆಯಲಿರುವ ಶೃಂಗಸಭೆಯಲ್ಲಿ ಅವರು ಪಾಕಿಸ್ತಾನವನ್ನು ಪ್ರತಿನಿಧಿಸಲಿದ್ದಾರೆ. ಈ ಭೇಟಿಯು 2023ರ ಬಳಿಕ ಪಾಕಿಸ್ತಾನದ ಫೆಡರಲ್ ಸಚಿವರೊಬ್ಬರ ಮೊದಲ ಭಾರತ ಭೇಟಿಯಾಗಲಿದೆ.
ಇದನ್ನೂ ಓದಿ: ‘ಕಾಶ್ಮೀರಿಗಳಿಗೆ ಪಾಕಿಸ್ತಾನದ ರಕ್ಷಣೆ, ಕೇಂದ್ರ ಸರ್ಕಾರ ಮೌನ’: ತೀವ್ರ ವಿವಾದಕ್ಕೆ ಗುರಿಯಾದ ಫಾರೂಕ್ ಅಬ್ದುಲ್ಲಾ ಹೇಳಿಕೆ
ಮುಸಾದಿಕ್ ಮಸೂದ್ ಮಲಿಕ್ ಪಾಕಿಸ್ತಾನದ ಹವಾಮಾನ ಬದಲಾವಣೆ ಮತ್ತು ಪರಿಸರ ಸಮನ್ವಯ ಸಚಿವರಾಗಿದ್ದಾರೆ. ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಭಾರತ ವಿರೋಧಿ ಹೇಳಿಕೆಗಳಿಂದಲೂ ಅವರು ಸುದ್ದಿಯಲ್ಲಿದ್ದಾರೆ. ವಿಶೇಷವಾಗಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಭಾರತದ ವಿರುದ್ಧ ಹಲವು ಬಾರಿ ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನೀರಿನ ವಿಚಾರವಾಗಿ ಮಾತನಾಡುವಾಗ, ನಮ್ಮ ನೀರಿನ ಮೇಲೆ ಯಾರಾದರೂ ಕೈ ಹಾಕಿದರೆ ಆ ಕೈಯನ್ನೇ ಕತ್ತರಿಸುತ್ತೇವೆ ಎಂಬ ಅರ್ಥದ ಬೆದರಿಕೆಯ ಹೇಳಿಕೆ ನೀಡಿದ್ದರು ಎಂದು ವರದಿಯಾಗಿದೆ. ಇದೀಗ ಇದೇ ಸಚಿವರನ್ನು ಪಾಕಿಸ್ತಾನ ದೆಹಲಿಗೆ ಕಳುಹಿಸುತ್ತಿರುವುದು ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ 1960ರಲ್ಲಿ ಒಪ್ಪಂದವಾಗಿತ್ತು. ಅಂದಿನ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದದ ಪ್ರಕಾರ, ಸಿಂಧೂ ನದಿ ವ್ಯವಸ್ಥೆಯ ಪೂರ್ವದ ಮೂರು ನದಿಗಳಾದ ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳ ನೀರಿನ ಬಳಕೆಯ ಹಕ್ಕು ಭಾರತಕ್ಕೆ ನೀಡಲಾಗಿದೆ.
ಪಶ್ಚಿಮದ ಮೂರು ನದಿಗಳಾದ ಸಿಂಧೂ, ಝೀಲಂ ಮತ್ತು ಚೆನಾಬ್ ನದಿಗಳ ನೀರಿನ ಬಳಕೆಯ ಹೆಚ್ಚಿನ ಹಕ್ಕು ಪಾಕಿಸ್ತಾನಕ್ಕೆ ನೀಡಲಾಗಿದೆ. ಭಾರತಕ್ಕೂ ಈ ಪಶ್ಚಿಮದ ನದಿಗಳ ನೀರನ್ನು ನಿರ್ದಿಷ್ಟ ಉದ್ದೇಶಗಳಿಗೆ ಬಳಸಲು ಅವಕಾಶವಿದೆ.
ಆದರೆ 2025ರ ಏಪ್ರಿಲ್ನಲ್ಲಿ ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿಯ ಬಳಿಕ ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿತು. ಭಾರತದ ಪ್ರಕಾರ, ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲುವವರೆಗೆ ಈ ಒಪ್ಪಂದ ಸ್ಥಗಿತದಲ್ಲಿರಲಿದೆ. ಈ ನಿರ್ಧಾರವನ್ನು ಪಾಕಿಸ್ತಾನ ವಿರೋಧಿಸಿದ್ದು, ಅಂತರರಾಷ್ಟ್ರೀಯ ವೇದಿಕೆಗಳಲ್ಲಿಯೂ ಈ ವಿಚಾರವನ್ನು ಪ್ರಸ್ತಾಪಿಸುತ್ತಿದೆ.
2026ರ ಜೂನ್ 29ರಂದು ಸಿಂಧೂ ನದಿ ನೀರಿನ ವಿವಾದದ ಕುರಿತು ಮಾತನಾಡಿದ್ದ ಮುಸಾದಿಕ್ ಮಲಿಕ್, ಪಾಕಿಸ್ತಾನದ ನೀರಿನ ಪಾಲಿಗೆ ಯಾರಾದರೂ ಅಡ್ಡಿಪಡಿಸಿದರೆ ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. “ನಮ್ಮ ನೀರಿನ ಮೇಲೆ ಯಾರಾದರೂ ಕೈ ಹಾಕಿದರೆ ಆ ಕೈಯನ್ನು ಕತ್ತರಿಸುತ್ತೇವೆ” ಎಂಬ ಅರ್ಥದ ಹೇಳಿಕೆ ನೀಡಿದ್ದರು. ಪಾಕಿಸ್ತಾನದ ಕೃಷಿ, ಆಹಾರ ಭದ್ರತೆ ಮತ್ತು ಆರ್ಥಿಕತೆಗೆ ನೀರು ಅತ್ಯಂತ ಮುಖ್ಯ ಎಂದು ಅವರು ವಾದಿಸಿದ್ದರು. ಈ ಹೇಳಿಕೆ ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
ನವೆಂಬರ್ 20ರಿಂದ 22ರವರೆಗೆ ದೆಹಲಿಯ ಐತಿಹಾಸಿಕ ಪುರಾಣ ಕಿಲಾದಲ್ಲಿ ಎಸ್ಸಿಒ ನಾಗರಿಕತೆ ಮತ್ತು ಸಾಂಸ್ಕೃತಿಕ ಸಂವಾದ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ನವೆಂಬರ್ 20ರಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ವೇದಿಕೆಯಲ್ಲಿ ಪ್ರಮುಖವಾಗಿ ನಾಲ್ಕು ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
– ಸಂಸ್ಕೃತಿ ಮತ್ತು ಸಂಪ್ರದಾಯ: ಉಡುಗೆ, ಆಹಾರ, ಸಂಗೀತ ಮತ್ತು ಸಾಂಪ್ರದಾಯಿಕ ಕ್ರೀಡೆಗಳು.
– ಕಲೆ ಮತ್ತು ವಾಸ್ತುಶಿಲ್ಪ: ಐತಿಹಾಸಿಕ ಸ್ಮಾರಕಗಳು, ಶಿಲ್ಪಕಲೆ ಮತ್ತು ಕಟ್ಟಡಗಳ ಪರಂಪರೆ.
– ಭಾಷೆ ಮತ್ತು ಸಾಹಿತ್ಯ: ಭಾಷೆಗಳು, ಪ್ರಾಚೀನ ಹಸ್ತಪ್ರತಿಗಳು ಮತ್ತು ಸಾಹಿತ್ಯ.
– ಧಾರ್ಮಿಕ ಮತ್ತು ತಾತ್ವಿಕ ಪರಂಪರೆ: ಬೌದ್ಧ ಧರ್ಮ, ಇಸ್ಲಾಂ, ಸಿಖ್ ಧರ್ಮ ಸೇರಿದಂತೆ ವಿವಿಧ ಧಾರ್ಮಿಕ ಸಂಪ್ರದಾಯಗಳು.
ಈ ಕಾರ್ಯಕ್ರಮದ ಉದ್ದೇಶ ಕೇವಲ ರಾಜಕೀಯ ಮತ್ತು ಭದ್ರತಾ ವಿಚಾರಗಳಿಗೆ ಸೀಮಿತವಾಗದೆ, ವಿವಿಧ ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವುದಾಗಿದೆ.
ಭಾರತಕ್ಕೆ ಕೊನೆಯ ಬಾರಿಗೆ ಪಾಕಿಸ್ತಾನದ ಫೆಡರಲ್ ಸಚಿವರೊಬ್ಬರು ಭೇಟಿ ನೀಡಿದ್ದು 2023ರ ಮೇ ತಿಂಗಳಲ್ಲಿ. ಆಗಿನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಗೋವಾದಲ್ಲಿ ನಡೆದ SCO ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು.
2025ರ ಏಪ್ರಿಲ್ನಲ್ಲಿ ಪಹಲ್ಗಾಮ್ ಉಗ್ರ ದಾಳಿ ನಡೆದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು. ನಂತರ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಾಲ್ಕು ದಿನಗಳ ಸೇನಾ ಸಂಘರ್ಷವೂ ನಡೆದಿತ್ತು. ಇದೀಗ ಮುಸಾದಿಕ್ ಮಲಿಕ್ ಅವರ ದೆಹಲಿ ಭೇಟಿ ಎರಡು ದೇಶಗಳ ನಡುವಿನ ರಾಜತಾಂತ್ರಿಕ ಬೆಳವಣಿಗೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಭಾರತವು ಎಸ್ಸಿಒ ಸದಸ್ಯ ರಾಷ್ಟ್ರಗಳಿಗೆ ಸಾಂಸ್ಕೃತಿಕ ಸಂವಾದದಲ್ಲಿ ಭಾಗವಹಿಸಲು ಆಹ್ವಾನ ನೀಡಿದೆ. ಆರಂಭದಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಸಚಿವ ಔರಂಗಜೇಬ್ ಖಾನ್ ಖಿಚ್ಚಿ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಪಾಕಿಸ್ತಾನ ಕೊನೆಗೆ ಸಚಿವ ಮುಸಾದಿಕ್ ಮಲಿಕ್ ಅವರನ್ನು ತನ್ನ ಪ್ರತಿನಿಧಿಯಾಗಿ ಆಯ್ಕೆ ಮಾಡಿದೆ. ಈ ಆಯ್ಕೆಯು ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಿಂಧೂ ಜಲ ಒಪ್ಪಂದದ ವಿಚಾರದಲ್ಲಿ ಭಾರತದ ವಿರುದ್ಧ ಕಠಿಣ ನಿಲುವು ಹೊಂದಿರುವ ಸಚಿವರನ್ನು ಆಯ್ಕೆ ಮಾಡಿರುವುದು ಗಮನ ಸೆಳೆದಿದೆ.
ಆದರೆ ಈ ಸಾಂಸ್ಕೃತಿಕ ವೇದಿಕೆಯಲ್ಲಿ ಸಿಂಧೂ ನದಿ ನೀರಿನ ವಿವಾದವನ್ನು ಪ್ರಸ್ತಾಪಿಸಲು ಪಾಕಿಸ್ತಾನ ಅಧಿಕೃತವಾಗಿ ಯೋಜಿಸಿದೆ ಎಂಬುದಕ್ಕೆ ಸದ್ಯಕ್ಕೆ ಸ್ಪಷ್ಟ ದೃಢೀಕರಣವಿಲ್ಲ. ಪಾಕಿಸ್ತಾನದ ವಿದೇಶಾಂಗ ಇಲಾಖೆ ಮಾತ್ರ ಈ ಸಭೆಯ ಉದ್ದೇಶ ಸಾಂಸ್ಕೃತಿಕ ಸಂವಾದ ಮತ್ತು ಜನರ ನಡುವಿನ ಸಂಪರ್ಕವನ್ನು ಹೆಚ್ಚಿಸುವುದಾಗಿದೆ ಎಂದು ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ