CBI’s diamond jubilee celebrations: ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವಲ್ಲಿ ಸಿಬಿಐನ ಪಾತ್ರ ದೊಡ್ಡದು: ನರೇಂದ್ರ ಮೋದಿ
ಈ ವೇಳೆ ಸಿಬಿಐನ ವಜ್ರ ಮಹೋತ್ಸವದ ವರ್ಷವನ್ನು ಗುರುತಿಸುವ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡುವುದರ ಜೊತೆಗೆ ಸಿಬಿಐನ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಮೋದಿ ಬಿಡುಗಡೆ ಮಾಡಿದ್ದಾರೆ.
ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಸೋಮವಾರ ಕೇಂದ್ರೀಯ ತನಿಖಾ ದಳದ (CBI) ವಜ್ರಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿದ್ದಾರೆ. ಈ ವೇಳೆ ಸಿಬಿಐನ ವಜ್ರ ಮಹೋತ್ಸವದ ವರ್ಷವನ್ನು ಗುರುತಿಸುವ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡುವುದರ ಜೊತೆಗೆ ಸಿಬಿಐನ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಮೋದಿ ಬಿಡುಗಡೆ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಮೋದಿ ಅವರು ವಿಶೇಷ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಮತ್ತು ಏಜೆನ್ಸಿಯ ಅತ್ಯುತ್ತಮ ತನಿಖಾ ಅಧಿಕಾರಿಗಳಿಗೆ ಚಿನ್ನದ ಪದಕವನ್ನು ಪ್ರದಾನ ಮಾಡಿದ್ದಾರೆ.
ಮೋದಿ ಶಿಲ್ಲಾಂಗ್, ಪುಣೆ ಮತ್ತು ನಾಗ್ಪುರದಲ್ಲಿ ಹೊಸದಾಗಿ ನಿರ್ಮಿಸಲಾದ ಸಿಬಿಐ ಕಚೇರಿ ಸಂಕೀರ್ಣಗಳನ್ನು ಉದ್ಘಾಟಿಸಿದ್ದಾರೆ. ಏಪ್ರಿಲ್ 1, 1963 ರಂದು ಕೇಂದ್ರ ಗೃಹ ಸಚಿವಾಲಯದ ನಿರ್ಣಯದ ಮೂಲಕ ಸಿಬಿಐ ಅನ್ನು ಸ್ಥಾಪಿಸಲಾಯಿತು.
ಮೋದಿ ಭಾಷಣದ ಮುಖ್ಯಾಂಶಗಳು
- ಸಿಬಿಐನ ವಜ್ರಮಹೋತ್ಸವದ ಸಮಾರಂಭದಲ್ಲಿ ಭಾಷಣ ಮಾಡಿದ ಮೋದಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಸಿಬಿಐ ಜನರ ವಿಶ್ವಾಸವನ್ನು ಗೆದ್ದಿದೆ. ಏನಾದರೂ ತನಿಖೆ ಬಂದರೆ ಜನರು ಅದನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬಯಸುತ್ತಾರೆ.ಯಾಕೆಂದರೆ ಅವರಿಗೆ ಅದರ ಮೇಲೆ ಅಷ್ಟೊಂದು ವಿಶ್ವಾಸವಿಗೆ. ಈ ರೀತಿ ಜನರ ನಂಬುಗೆ ಪಡೆಯುವುದು ಅಷ್ಟೊಂದು ಸುಲಭವಲ್ಲ. ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವಲ್ಲಿ ಸಿಬಿಐನ ಪಾತ್ರ ದೊಡ್ಡದು.
- ಸಿಬಿಐ ಸಾಮಾನ್ಯ ನಾಗರಿಕರಿಗೆ ಭರವಸೆ ಮತ್ತು ಶಕ್ತಿಯನ್ನು ನೀಡಿದೆ. ಸಿಬಿಐ ನ್ಯಾಯಕ್ಕಾಗಿ ಬ್ರಾಂಡ್ ಆಗಿ ಹೊರಹೊಮ್ಮಿರುವುದರಿಂದ ಸಿಬಿಐ ತನಿಖೆಗೆ ಒತ್ತಾಯಿಸಿ ಜನರು ಪ್ರತಿಭಟನೆಗಳನ್ನು ನಡೆಸುತ್ತಾರೆ.
- ಸಿಬಿಐನಂಥಾ ವೃತ್ತಿಪರ ಮತ್ತು ದಕ್ಷ ಸಂಸ್ಥೆಗಳಿಲ್ಲದೆ ಭಾರತ ಮುಂದುವರಿಯಲು ಸಾಧ್ಯವಿಲ್ಲ. ಬ್ಯಾಂಕ್ ವಂಚನೆಗಳಿಂದ ಹಿಡಿದು ವನ್ಯಜೀವಿಗಳಿಗೆ ಸಂಬಂಧಿಸಿದ ವಂಚನೆಗಳವರೆಗೆ, ಸಿಬಿಐನ ಕಾರ್ಯವ್ಯಾಪ್ತಿಯು ಹಲವಾರು ಪಟ್ಟು ಹೆಚ್ಚಾಗಿದೆ.
- ಪ್ರಜಾಪ್ರಭುತ್ವ ಮತ್ತು ನ್ಯಾಯಕ್ಕೆ ಭ್ರಷ್ಟಾಚಾರವು ಅತಿದೊಡ್ಡ ತಡೆಯಾಗಿದೆ, ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದು ಸಿಬಿಐನ ಪ್ರಮುಖ ಜವಾಬ್ದಾರಿಯಾಗಿದೆ.
- ಆಧುನಿಕ ತಂತ್ರಜ್ಞಾನಗಳಿಂದಾಗಿ ಇಂದು ಅಪರಾಧಗಳು ಜಾಗತಿಕವಾಗುತ್ತಿರುವುದು ನಿಜ. ಆದರೆ ಈ ತಂತ್ರಜ್ಞಾನಗಳು ಮಾತ್ರ ಈ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಬಲ್ಲವು ಎಂಬುದಂತೂ ನಿಜ. ತನಿಖೆಯಲ್ಲಿ ನ್ಯಾಯ ವಿಜ್ಞಾನದ ಬಳಕೆಯನ್ನು ನಾವು ಮತ್ತಷ್ಟು ತೀವ್ರಗೊಳಿಸಬೇಕಾಗಿದೆ.
- ದೇಶದಲ್ಲಿ ಈ ಹಿಂದೆ ಅಪನಂಬಿಕೆ ಇತ್ತು, ನೀತಿ ಪಾಲನೆಯಾಗಲು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ 2014 ರಿಂದ ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ಮರುಸ್ಥಾಪಿಸುವುದು, ಪೋಷಿಸುವುದು ಮತ್ತು ಬಲಪಡಿಸುವುದು ನಮ್ಮ ಪ್ರಾಥಮಿಕ ಗುರಿಯಾಗಿದೆ.
- ನಾವು ಕಪ್ಪುಹಣ ಹೊಂದಿರುವವರ ವಿರುದ್ಧ, ಭ್ರಷ್ಟರ ವಿರುದ್ಧ, ಭ್ರಷ್ಟಾಚಾರದ ಮೂಲ ಕಾರಣಗಳ ವಿರುದ್ಧ ಕ್ರಮ ಕ್ರಮದಲ್ಲಿ ಕೆಲಸ ಮಾಡಿದ್ದೇವೆ.
- ನಾವು ವ್ಯವಸ್ಥೆಗಳಲ್ಲಿ ಅತ್ಯಂತ ಪಾರದರ್ಶಕತೆಯನ್ನು ಖಾತ್ರಿಪಡಿಸಿದ್ದೇವೆ. 2G ಮತ್ತು 5G ಸ್ಪೆಕ್ಟ್ರಮ್ ಹಂಚಿಕೆ ಪ್ರಕ್ರಿಯೆಗಳು ಇದಕ್ಕೆ ಸಾಕ್ಷಿಯಾಗಿ ನಿಂತಿವೆ.
- ಕಳೆದ ಆರು ದಶಕಗಳಲ್ಲಿ ಸಿಬಿಐ ಬಹು ಆಯಾಮದ ಮತ್ತು ಬಹು-ಶಿಸ್ತಿನ ತನಿಖಾ ಸಂಸ್ಥೆಯಾಗಿ ಮನ್ನಣೆ ಗಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Mon, 3 April 23