ಹೈದರಾಬಾದ್, ಅಕ್ಟೋಬರ್ 1: ತೆಲಂಗಾಣದಲ್ಲಿ ಚುನಾವಣಾ ಬೇಟೆ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದಾರೆ. ಭಾನುವಾರ ಮೆಹಬೂಬನಗರದಲ್ಲಿ ನಡದ ಬಿಜೆಪಿ ಪ್ರಜಾಘರ್ಜನೆ ಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಹಾಸನದಿಂದ ತೆಲಂಗಾಣದ ಚರ್ಲಪಲ್ಲಿವರೆಗಿನ ಎಲ್ಪಿಜಿ ಪೈಪ್ಲೈನ್ (Hassan – Cherlapalli LPG Pipeline project) ಯೋಜನೆ ಸೇರಿದಂತೆ 13,500 ಕೋಟಿ ರೂಗೂ ಹೆಚ್ಚು ಮೊತ್ತದ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿಯ ಸ್ಥಾಪನೆ ಮಾಡುವುದಾಗಿ ಮೋದಿ ಹೇಳಿದ್ದಾರೆ. ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣಕ್ಕೆ ಪ್ರಧಾನಿ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ನ್ಯಾಷನಲ್ ಟರ್ಮರಿಕ್ ಬೋರ್ಡ್ (National Turmeric Board) ಸ್ಥಾಪನೆಯೂ ಒಂದು.
ಇದೇ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ತೆಲಂಗಾಣ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನಿರಂತರವಾಗಿ ಆಡಳಿತದಲ್ಲಿರುವ ಕೆಸಿಆರ್ ನೇತೃತ್ವದ ಟಿಆರ್ಎಸ್ ಪಕ್ಷವನ್ನು ಸೋಲಿಸಲು ಬಿಜೆಪಿ ಹರಸಾಹಸ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಇಂದು ಮಾಡಿದ ಘೋಷಣೆಗಳು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಕಾದುನೋಡಬೇಕು.
ಇದನ್ನೂ ಓದಿ: Swachhata Hi Seva: ಬನ್ನಿ ದೇಶವನ್ನು ಸ್ವಚ್ಛ ಹಾಗೂ ಸುಂದರವಾಗಿಸೋಣ: ಹಮೀಪುರದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಶ್ರಮದಾನ
#WATCH | Mahabubnagar, Telangana: PM Narendra Modi flags off the inaugural Hyderabad (Kacheguda) – Raichur – Hyderabad (Kacheguda) train service from Krishna station via video conferencing. pic.twitter.com/Z0HA9QRRBG
— ANI (@ANI) October 1, 2023
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಸಂಸ್ಥೆ (ಎಚ್ಪಿಸಿಎಲ್) ಕರ್ನಾಟಕದ ಹಾಸನದಿಂದ ತೆಲಂಗಾಣದ ಚೆರ್ಲಪಲ್ಲಿ ನಡುವೆ 649 ಕಿಮೀ ಉದ್ದದ ಎಲ್ಪಿಜಿ ಪೈಪ್ಲೈನ್ ಯೋಜನೆ ಕೈಗೊಳ್ಳಲಿದೆ. ಹಾಸನ, ತಿಪಟೂರು, ಶಿರಾ, ಅನಂತಪುರಂ, ಕರ್ನೂಲು, ಮೆಹಬೂಬನಗರ ಮತ್ತು ಹೈದರಾಬಾದ್ನ ಚೆರ್ಲಪಲ್ಲಿಯವರೆಗೆ ಈ ಪೈಪ್ಲೈನ್ ಸಾಗಿ ಹೋಗುತ್ತದೆ. ಅನಂತಪುರಂನಲ್ಲಿ ಬಾಟ್ಲಿಂಗ್ ಪ್ಲಾಂಟ್ ಇರಲಿದೆ.
ತೆಲಂಗಾಣ ಪರ ನಿಲ್ಲುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಇದೇ ವೇಳೆ ಹೇಳಿದ್ದಾರೆ. ರೈಲ್ವೆ, ಹೆದ್ದಾರಿ ನಿರ್ಮಾಣದಲ್ಲಿ ರಾಜ್ಯಕ್ಕೆ ಕೇಂದ್ರ ಬೆಂಬಲ ನೀಡುತ್ತಿದೆ ಎಂದ ಅವರು, ಕೇಂದ್ರವು ರೈತರಿಗೆ ರಸಗೊಬ್ಬರಕ್ಕೆ ಸಬ್ಸಿಡಿ ರೂಪದಲ್ಲಿ ಸಾವಿರಾರು ಕೋಟಿ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಹೈದರಾಬಾದ್ ಸುತ್ತ ಕೇಂದ್ರ ನಿರ್ಮಿಸುತ್ತಿರುವ ಪ್ರಾದೇಶಿಕ ವರ್ತುಲ ರಸ್ತೆಯಿಂದ ತೆಲಂಗಾಣ ರಾಜ್ಯದ ಸ್ವರೂಪವೇ ಬದಲಾಗಲಿದೆ. ಪ್ರಾದೇಶಿಕ ವರ್ತುಲ ರಸ್ತೆಯ ಸುತ್ತಲೂ ರೈಲು ಮಾರ್ಗ ನಿರ್ಮಾಣಕ್ಕೂ ಕೇಂದ್ರ ನಿರ್ಧರಿಸಿದೆ. ಪ್ರಾದೇಶಿಕ ವರ್ತುಲ ರಸ್ತೆಗೆ ಕೇಂದ್ರ 26 ಸಾವಿರ ಕೋಟಿ ರೂ ನೀಡಿದೆ. ಆದರೆ, ತೆಲಂಗಾಣಕ್ಕೆ ಕೇಂದ್ರ ಸರ್ಕಾರ ಏನನ್ನೂ ನೀಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಶನ್ ರೆಡ್ಡಿ ಈ ವೇಳೆ ತಿರುಗೇಟಿ ನೀಡದ್ದಾರೆ.
ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಪ್ರಧಾನಿ ಬಂದರೆ ಸಿಎಂ ಕೆಸಿಆರ್ ಅನುಪಸ್ಥಿತರಿದ್ದಾರೆ. ಅವರು ಪ್ರಧಾನಿಯನ್ನೂ ಭೇಟಿ ಮಾಡುತ್ತಿಲ್ಲ. ಸಿಎಂ ಕೆಸಿಆರ್ ಧೋರಣೆಯಿಂದ ತೆಲಂಗಾಣ ಸೋಲುತ್ತಿದೆ ಎಂದು ಬಿಜೆಪಿ ನಾಯಕರೂ ಆದ ಕಿಶನ್ ರೆಡ್ಡಿ ವಿಷಾದಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Sun, 1 October 23