ದೆಹಲಿಯಲ್ಲಿ 4 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ರಕ್ಷಣಾ ಸಚಿವಾಲಯದ ಮಹಿಳಾ ಅಧಿಕಾರಿ ನಿಗೂಢ ಸಾವು

ದೆಹಲಿಯ ದ್ವಾರಕಾದಲ್ಲಿ ರಕ್ಷಣಾ ಸಚಿವಾಲಯದ ಮಹಿಳಾ ಅಧಿಕಾರಿ ನಾಜಿಯಾ ಖಾನಂ ತಮ್ಮ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಮೂರು ತಿಂಗಳ ಗರ್ಭಿಣಿಯಾಗಿದ್ದ ಇವರನ್ನು ಪತಿ ಹಾಗೂ ಅತ್ತೆ-ಮಾವ ಕೊಲೆ ಮಾಡಿದ್ದಾರೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನಾಜಿಯಾ, ವರದಕ್ಷಿಣೆ ಕಿರುಕುಳಕ್ಕೆ ಒಳಗಾಗಿದ್ದರು ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೆಹಲಿಯಲ್ಲಿ 4 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ರಕ್ಷಣಾ ಸಚಿವಾಲಯದ ಮಹಿಳಾ  ಅಧಿಕಾರಿ ನಿಗೂಢ ಸಾವು
ನಾಜಿಯಾ

Updated on: Aug 23, 2026 | 3:28 PM

ನವದೆಹಲಿ, ಆಗಸ್ಟ್​ 23: ನವದೆಹಲಿಯ ದ್ವಾರಕಾ ಪ್ರದೇಶದಲ್ಲಿ ಕೇಂದ್ರ ರಕ್ಷಣಾ ಸಚಿವಾಲಯದಲ್ಲಿ ಸಹಾಯಕ ವಿಭಾಗ ಅಧಿಕಾರಿಯಾಗಿ (ASO) ಕರ್ತವ್ಯ ನಿರ್ವಹಿಸುತ್ತಿದ್ದ 30 ವರ್ಷದ ಮಹಿಳೆ ನಾಜಿಯಾ ತಮ್ಮ ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಆಕೆ ಮೂರು ತಿಂಗಳ ಗರ್ಭಿಣಿಯಾಗಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ. ಮೃತರನ್ನು ನಾಜಿಯಾ ಖಾನಮ್ ಎಂದು ಗುರುತಿಸಲಾಗಿದ್ದು, ಆಕೆಯನ್ನು ಪತಿ ಮತ್ತು ಅತ್ತೆ-ಮಾವ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ಆಕೆಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ನಾಜಿಯಾ ಅವರು ಕಳೆದ ಏಪ್ರಿಲ್ 11 ರಂದು ಅಜಮ್ ಅಲಿ ಖಾನ್ ಎಂಬಾತನನ್ನು ವಿವಾಹವಾಗಿದ್ದರು. ಪ್ರಸ್ತುತ ಅವರು ಮೂರು ತಿಂಗಳ ಗರ್ಭಿಣಿಯಾಗಿದ್ದರು. ಮದುವೆಯಾದ ಕೆಲವೇ ದಿನಗಳಿಂದ ಪತಿ ಅಜಮ್, ಅತ್ತೆ ಸಮೀನ್ ನಿಶಾ ಹಾಗೂ ಮಾವ ಬಾಬರ್ ಅಲಿ ಖಾನ್ ಅವರು ನಿರಂತರವಾಗಿ ಹಲ್ಲೆ ನಡೆಸಿ, ಮನೆಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ನಾಜಿಯಾ ತಮ್ಮ ಪೋಷಕರ ಬಳಿ ಕಣ್ಣೀರಿಟ್ಟಿದ್ದರು.

ಕುಟುಂಬದ ಕೊಲೆ ಶಂಕೆ: ಆಗಸ್ಟ್ 21 ರ ಮುಂಜಾನೆ 4 ಗಂಟೆಗೆ ನಾಜಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅತ್ತೆಯ ಮನೆಯವರು ಮಾಹಿತಿ ನೀಡಿದ್ದರು. ಆದರೆ, ಇದು ವ್ಯವಸ್ಥಿತ ಕೊಲೆಯಾಗಿದ್ದು, ಆತ್ಮಹತ್ಯೆಯಂತೆ ಬಿಂಬಿಸಲು ನೇಣು ಹಾಕಲಾಗಿದೆ ಎಂದು ನಾಜಿಯಾ ಅವರ ತಂದೆ ತವಾಬ್ ಖಾನ್ ದೂರಿದ್ದಾರೆ. ಜಗಳದ ನಂತರ ನಾಜಿಯಾ ಕೋಣೆಯ ಬಾಗಿಲು ಹಾಕಿಕೊಂಡು ಕಿಟಕಿಯ ಸರಳಿಗೆ ನೇಣು ಬಿಗಿದುಕೊಂಡಿದ್ದಳು ಎಂದು ಪತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಮತ್ತಷ್ಟು ಓದಿ: ಬಾಂಗ್ಲಾದೇಶ: ಬೀಗ ಹಾಕಿದ ಮನೆಯಲ್ಲಿ ನಿವೃತ್ತ ಹಿಂದೂ ಶಿಕ್ಷಕ, ಪತ್ನಿ, ಇಬ್ಬರು ಮಕ್ಕಳ ಶವ ಪತ್ತೆ

ಶವವನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯನ್ನು ಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಬೇಕು ಹಾಗೂ ಸಾಕ್ಷ್ಯಗಳನ್ನು ರಕ್ಷಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಭಾರತೀಯ ದಂಡ ಸಂಹಿತೆ, ಭಾರತೀಯ ನ್ಯಾಯ ಸಂಹಿತೆ (BNS) ಪ್ರಕಾರ, ಮದುವೆಯಾದ 7 ವರ್ಷಗಳ ಒಳಗೆ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟರೆ ಅದನ್ನು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ನೇತೃತ್ವದಲ್ಲೇ ತನಿಖೆ ನಡೆಸಲಾಗುತ್ತದೆ.

ಗರ್ಭಿಣಿ ಮಹಿಳೆಯ ಮೇಲೆ ನಡೆದ ದೌರ್ಜನ್ಯದ ಹಿನ್ನೆಲೆಯಲ್ಲಿ ಪೊಲೀಸರು ವರದಕ್ಷಿಣೆ ಸಾವು, ಕೌಟುಂಬಿಕ ಹಿಂಸಾಚಾರ ಹಾಗೂ ಕೊಲೆ ಸಂಚಿನ ಕೋನಗಳಲ್ಲಿ ಪತಿ ಮತ್ತು ಆತನ ಕುಟುಂಬವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us