ಫ್ಲಾಟ್ ಇಲ್ಲ, ಕಾರಿಲ್ಲ, 25 ಸಾವಿರ ರೂ. ಸಂಬಳ ನನ್ನ ಮದುವೆಯಾಗ್ತೀರೇನು? ರಸ್ತೆ ಬದಿಯಲ್ಲಿ ಫ್ಲೆಕ್ಸ್​ ಹಾಕಿದ ವ್ಯಕ್ತಿ

ಪುಣೆಯ 30 ವರ್ಷದ ಯುವಕನೊಬ್ಬ ತನಗೆ ಮನೆ, ಕಾರು ಇಲ್ಲ, 25 ಸಾವಿರ ರೂ. ಮಾತ್ರ ಸಂಬಳ ಎಂದು ಪ್ರಾಮಾಣಿಕವಾಗಿ ಬ್ಯಾನರ್ ಹಾಕಿ ವಧು ಅನ್ವೇಷಿಸಿದ್ದಾನೆ. ಈ ವಿಶಿಷ್ಟ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರನ್ನು ನಗೆಗಡಲಲ್ಲಿ ತೇಲಿಸಿದೆ. ಇದು ನಿಜವಾದ ಪ್ರಸ್ತಾಪವೋ ಅಥವಾ ಪ್ರಚಾರದ ಗಿಮಿಕ್ಕೋ ಎಂಬ ಚರ್ಚೆ ಶುರುವಾಗಿದೆ. ಈ ಧೈರ್ಯಶಾಲಿ ನಡೆ ಭಾರೀ ಕುತೂಹಲ ಮೂಡಿಸಿದೆ.

ಫ್ಲಾಟ್ ಇಲ್ಲ, ಕಾರಿಲ್ಲ, 25 ಸಾವಿರ ರೂ. ಸಂಬಳ ನನ್ನ ಮದುವೆಯಾಗ್ತೀರೇನು? ರಸ್ತೆ ಬದಿಯಲ್ಲಿ ಫ್ಲೆಕ್ಸ್​ ಹಾಕಿದ ವ್ಯಕ್ತಿ
ಫ್ಲೆಕ್ಸ್​

Updated on: Jul 14, 2026 | 12:34 PM

ಪುಣೆ, ಜುಲೈ 14: ಇಂದಿನ ದಿನಗಳಲ್ಲಿ ಮದುವೆ(Marriage)ಯಾಗಬೇಕಾದರೆ ಹುಡುಗನಿಗೆ ಸ್ವಂತ ಮನೆ ಇರಬೇಕು, ಕಾರು ಇರಬೇಕು, ಕೈತುಂಬಾ ಸಂಬಳವಿರಬೇಕು ಎಂಬ ಹತ್ತಾರು ಷರತ್ತುಗಳನ್ನು ಹುಡುಗಿಯರ ಕಡೆಯವರು ವಿಧಿಸುವುದು ಸಾಮಾನ್ಯ. ಹಾಗಾಗಿ ಯುವಕರು ತಮ್ಮ ಬಳಿ ಇಲ್ಲದಿರುವುದನ್ನೂ ಇದೆ ಎನ್ನುವ ಈ ಕಾಲದಲ್ಲಿ, ಮಹಾರಾಷ್ಟ್ರದ ಪುಣೆಯ 30 ವರ್ಷದ ಯುವಕನೊಬ್ಬ ತನ್ನಲ್ಲಿ ಇದಾವುದೂ ಇಲ್ಲ ಎಂಬುದನ್ನು ಮುಚ್ಚಿಡದೆ, ಇಡೀ ಜಗತ್ತಿಗೆ ತಿಳಿಯುವಂತೆ ನಗರದ ಪ್ರಮುಖ ರಸ್ತೆ ಜಂಕ್ಷನ್‌ನಲ್ಲೇ ಬೃಹತ್ ಫ್ಲೆಕ್ಸ್​ ಹಾಕುವ ಮೂಲಕ ಇಂಟರ್ನೆಟ್‌ನಲ್ಲಿ ತಲ್ಲಣ ಸೃಷ್ಟಿಸಿದ್ದಾನೆ.

ಪಿಂಪ್ರಿ-ಚಿಂಚ್‌ವಾಡ್‌ನ ಪಿಂಪಲ್ ಸೌದಾಗರ್ ಜಂಕ್ಷನ್ ಹಾಗೂ ಕೇಟ್ ಪಾಟೀಲ್ ಚೌಕ್ ಬಳಿ ಈ ವಿಚಿತ್ರ ಫ್ಲೆಕ್ಸ್​ ಹಾಕಲಾಗಿದೆ. ದಾರಿಯಲ್ಲಿ ಹೋಗುವವರೆಲ್ಲರೂ ಗಾಡಿ ನಿಲ್ಲಿಸಿ ಈ ಬ್ಯಾನರ್ ಅನ್ನು ಕುತೂಹಲದಿಂದ ನೋಡುತ್ತಿದ್ದು, ಇದರ ವಿಡಿಯೋ ಸದ್ಯ ಇನ್‌ಸ್ಟಾಗ್ರಾಮ್ ಸೇರಿದಂತೆ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಬ್ಯಾನರ್‌ನಲ್ಲೇ ಬಯೋಡೇಟಾ: ಏನಿದೆ ಆ ಪೋಸ್ಟರ್‌ನಲ್ಲಿ?
ಈ ಬೃಹತ್ ಬ್ಯಾನರ್ ಯಾವುದೇ ಮದುವೆ ಸಂಸ್ಥೆಯ ಜಾಹೀರಾತಲ್ಲ, ಬದಲಾಗಿ ರಾಘವ್ ವಿಶ್ವಾಸರಾವ್ ಶಿಂಧೆ ಎಂಬ ಸಾಮಾನ್ಯ ಯುವಕನ ಮುಚ್ಚುಮರೆಯಿಲ್ಲದ ವಿವಾಹ ಪ್ರಸ್ತಾಪ. ಆ ಬ್ಯಾನರ್‌ನಲ್ಲಿ ಯುವಕ ತನ್ನ ಇಡೀ ಸತ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಬರೆದುಕೊಂಡಿದ್ದಾರೆ.

ವಯಸ್ಸು: 30 ವರ್ಷ

ಮಾಸಿಕ ಆದಾಯ: ಕೇವಲ 25,000 ರೂ. ಸಂಬಳ

ಆಸ್ತಿ ವಿವರ: ಸ್ವಂತ ಫ್ಲಾಟ್ ಇಲ್ಲ, ಓಡಾಡಲು ಕಾರು ಇಲ್ಲ, ಇನ್ನು ಹಳ್ಳಿಯಲ್ಲಿ ಕೃಷಿ ಭೂಮಿಯೂ ಇಲ್ಲ

ಮನವಿ: ಈ ವಿವರಗಳಿಗೆ ಒಪ್ಪುವಂತಹ ಸೂಕ್ತ ವಧು ಯಾರಾದರೂ ನಿಮ್ಮ ಪರಿಚಯದಲ್ಲಿದ್ದರೆ ದಯವಿಟ್ಟು ಸೂಚಿಸಿ ಎಂದು ಬರೆದಿದ್ದಾರೆ.

ಮತ್ತಷ್ಟು ಓದಿ: Video: ಮದುವೆ ಮಂಟಪದಿಂದ ಓಡಿಹೋದ ವರ, ವಾಟ್ಸಾಪ್‌ಗೆ ಬಂದ ಆ ಒಂದು ಫೋಟೋ ತಂದ ಭಾರಿ ಫಜೀತಿ

ಈ ವಿಶಿಷ್ಟ ಪ್ರಯತ್ನವನ್ನು ಕಂಡು ಸಾರ್ವಜನಿಕರು ಹಾಗೂ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಅಣ್ಣಾ, ಎಲ್ಲವನ್ನೂ ಬರೆದೆ, ಆದರೆ ನಿನ್ನ ಫೋನ್ ನಂಬರ್ ಹಾಕೋದನ್ನೇ ಮರೆತುಬಿಟ್ಟೆಯಲ್ಲಪ್ಪಾ ಎಂದು ಕಾಲೆಳೆದಿದ್ದಾನೆ.

ಮತ್ತೊಬ್ಬ ನೆಟ್ಟಿಗ,ನಿನ್ನ 25,000 ರೂ. ಸಂಬಳದಲ್ಲಿ ಅರ್ಧದಷ್ಟು ದುಡ್ಡು ಈ ದೊಡ್ಡ ಬ್ಯಾನರ್ ಬಾಡಿಗೆ ಕಟ್ಟೋದಕ್ಕೇ ಖಾಲಿಯಾಗಿರಬೇಕಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ತಮಗೂ ಇಂತಹದ್ದೇ ಒಂದು ಬ್ಯಾನರ್ ಹಾಕಿಸಿಕೊಡಿ ಎಂದು ತಮ್ಮ ಅವಿವಾಹಿತ ಸ್ನೇಹಿತರನ್ನು ಟ್ಯಾಗ್ ಮಾಡುತ್ತಿದ್ದಾರೆ.

ಪೋಸ್ಟ್​

ಇದರ ಹಿಂದಿರಬಹುದೇ ಪ್ರಚಾರ?
ಈ ಹಿಂದೆಯೂ ಪುಣೆಯಲ್ಲಿ ಪ್ರೇಮಿಯೊಬ್ಬ ತನ್ನ ಗರ್ಲ್‌ಫ್ರೆಂಡ್‌ಗೆ ಕ್ಷಮೆ ಕೇಳಲು ಇಡೀ ಏರಿಯಾದಾದ್ಯಂತ 300ಕ್ಕೂ ಹೆಚ್ಚು ಬ್ಯಾನರ್ ಹಾಕಿ ಸುದ್ದಿಯಾಗಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಮರಾಠಿ ಸಿನಿಮಾಗಳು ಅಥವಾ ಟಿವಿ ಧಾರಾವಾಹಿಗಳ ಪ್ರಚಾರಕ್ಕಾಗಿ ಇಂತಹ ವಿಚಿತ್ರ ಕಥೆಗಳನ್ನು ಸೃಷ್ಟಿಸಿ ಪೋಸ್ಟರ್ ಹಾಕುವುದು ಫ್ಯಾಷನ್ ಆಗಿದೆ.

ಇದು ರಾಘವ್ ಎಂಬ ಯುವಕನ ನಿಜವಾದ ವಧು ಅನ್ವೇಷಣೆಯೋ ಅಥವಾ ಯಾವುದೋ ಕಂಪನಿಯ ಪ್ರಚಾರದ ಗಿಮಿಕ್ಕೋ ಎಂಬುದು ಇನ್ನೂ ಅಧಿಕೃತವಾಗಿ ಸಾಬೀತಾಗಿಲ್ಲ. ಆದರೆ, ಯುವಕನ ಈ ಪ್ರಾಮಾಣಿಕ ಮತ್ತು ಧೈರ್ಯಶಾಲಿ ಪ್ರಯತ್ನ ಮಾತ್ರ ಸದ್ಯ ಪುಣೆ ನಿವಾಸಿಗಳ ಪಾಲಿಗೆ ಸಖತ್ ಮನರಂಜನೆ ನೀಡುತ್ತಿರುವುದಂತೂ ಸುಳ್ಳಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us