
ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ದೊರೆತಿದೆ. ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿಗಳು (RRB) ನಾನ್ ಟೆಕ್ನಿಕಲ್ ಪಾಪ್ಯುಲರ್ ಕ್ಯಾಟಗರಿ (RRB NTPC Graduate Level) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕೇಂದ್ರೀಕೃತ ಉದ್ಯೋಗ ಅಧಿಸೂಚನೆ CEN 06/2026 ಅನ್ನು ಬಿಡುಗಡೆ ಮಾಡಿದೆ. ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳನ್ನು ಈ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಅರ್ಹ ಪದವೀಧರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಉದ್ಯೋಗ ಪ್ರಕಟಣೆಯ ಪ್ರಕಾರ, ಭಾರತದಾದ್ಯಂತ ಇರುವ ಎಲ್ಲಾ ರೈಲ್ವೆ ನೇಮಕಾತಿ ಮಂಡಳಿಗಳನ್ನು ಸೇರಿಸಿ ಒಟ್ಟು 3,477 ತಾತ್ಕಾಲಿಕ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ (7th CPC) ನಿಯಮಾವಳಿಗಳ ಪ್ರಕಾರ ಲೆವೆಲ್-5 ಮತ್ತು ಲೆವೆಲ್-6 ಹಂತದ ಆಕರ್ಷಕ ವೇತನ ಶ್ರೇಣಿ ಸಿಗಲಿದೆ. ಹುದ್ದೆಗೆ ತಕ್ಕಂತೆ ಅಗತ್ಯವಿರುವ ವೈದ್ಯಕೀಯ ಮಾನದಂಡಗಳು ಮತ್ತು ವಯೋಮಿತಿಯ ವಿವರಗಳನ್ನು ವಿವರವಾದ ಅಧಿಸೂಚನೆಯಲ್ಲಿ ಹಂಚಿಕೊಳ್ಳಲಾಗುವುದು.
ರೈಲ್ವೆ ಇಲಾಖೆಯ ಈ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು 08.10.2026 ರಿಂದ ಪ್ರಾರಂಭವಾಗುತ್ತದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 06.11.2026ರ ರಾತ್ರಿ 23:59 ಗಂಟೆಯೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಗಳನ್ನು ಯಾವುದೇ ಅಂಚೆ ಅಥವಾ ಪೋಸ್ಟ್ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ, ಕೇವಲ ಅಧಿಕೃತ ಪೋರ್ಟಲ್ https://www.rrbapply.gov.in ಮೂಲಕವೇ ಸಲ್ಲಿಸುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: ಎಸ್‌ಬಿಐ ನೇಮಕಾತಿ: ವಾರ್ಷಿಕ 97 ಲಕ್ಷ ರೂ.ವರೆಗೆ ವೇತನ; 207 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಭವಿಷ್ಯದಲ್ಲಿ ಉಂಟಾಗುವ ವಿಳಂಬವನ್ನು ತಡೆಯಲು ಅರ್ಜಿ ಸಲ್ಲಿಸುವಾಗಲೇ ಆಧಾರ್ ಪರಿಶೀಲನೆಯನ್ನು ಮಾಡಲಾಗುತ್ತದೆ. ನಿಮ್ಮ SSLC ಅಥವಾ 10ನೇ ತರಗತಿ ಪ್ರಮಾಣಪತ್ರದಲ್ಲಿರುವ ಹೆಸರು ಹಾಗೂ ಜನ್ಮ ದಿನಾಂಕವು ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿಗೆ ಶೇ.100 ರಷ್ಟು ಹೊಂದಿಕೆಯಾಗುವುದು ಅಗತ್ಯವಾಗಿದೆ. ಆದ್ದರಿಂದ ಅರ್ಜಿ ತುಂಬುವ ಮುನ್ನವೇ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್‌ನಲ್ಲಿ ಇತ್ತೀಚಿನ ಫೋಟೋ ಮತ್ತು ಬಯೋಮೆಟ್ರಿಕ್ಸ್ (ಬೆರಳಚ್ಚು ಹಾಗೂ ಐರಿಸ್) ವಿವರಗಳನ್ನು ನವೀಕರಿಸಿಕೊಳ್ಳಲು ಸೂಚಿಸಲಾಗಿದೆ.
ಈ ಪ್ರಕಟಣೆಯು ಪ್ರಾಥಮಿಕ ಮಾಹಿತಿಗಾಗಿ ನೀಡಲಾದ ಸೂಚನಾತ್ಮಕ ಅಧಿಸೂಚನೆಯಾಗಿದೆ. ವಲಯವಾರು ಹುದ್ದೆಗಳು, ಅರ್ಜಿ ಶುಲ್ಕ, ವಯೋಸಡಿಲಿಕೆ ಮತ್ತು ಸಂಪೂರ್ಣ ನಿಯಮಾವಳಿಗಳನ್ನು ಒಳಗೊಂಡ ವಿವರವಾದ CEN 06/2026 ಅಧಿಸೂಚನೆಯನ್ನು ಎಲ್ಲಾ RRB ಗಳ ಅಧಿಕೃತ ವೆಬ್‌ಸೈಟ್ ಆದ rrb.indianrailways.gov.in ನಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ನಿರಂತರವಾಗಿ ವೆಬ್‌ಸೈಟ್ ವೀಕ್ಷಿಸುವ ಮೂಲಕ ಮುಂದಿನ ಮಾಹಿತಿಯನ್ನು ಪಡೆಯಬಹುದು.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ