ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಆರ್ಟಿ-ಪಿಸಿಆರ್ ಪರೀಕ್ಷೆಗೆ ಸಂಬಂಧಪಟ್ಟಂತೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸದ್ಯ ಕೊವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲ್ಯಾಬೋರೇಟರಿಗಳಲ್ಲಿ ಆರ್ಟಿ ಪಿಸಿಆರ್ ಟೆಸ್ಟ್ ದೊಡ್ಡ ಸವಾಲಾಗಿ ಕಾಡುತ್ತಿದೆ. ಈ ಮಧ್ಯೆ ಅಗತ್ಯ ಇರುವ ಎಲ್ಲ ನಾಗರಿಕರಿಗೆ ಉತ್ತಮವಾಗಿ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಿಸಲೇಬೇಕು ಎಂದು ಐಸಿಎಂಆರ್ ಹೇಳಿದ್ದು, ಅದಕ್ಕೆ ತಕ್ಕಂತೆ ತನ್ನ ಹೊಸ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.
ಐಸಿಎಂಆರ್ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿ ಅನ್ವಯ ನಿಯಮಗಳು ಹೀಗಿವೆ:
1. ಒಮ್ಮೆ ಒಬ್ಬ ವ್ಯಕ್ತಿಗೆ ಆ್ಯಂಟಿಜೆನ್ ರ್ಯಾಪಿಡ್ ಟೆಸ್ಟ್ ಅಥವಾ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿ ಅದರಲ್ಲಿ ಕೊವಿಡ್ 19 ಪಾಸಿಟಿವ್ ಎಂದು ವರದಿ ಬಂದರೆ ಮತ್ತೊಮ್ಮೆ ಆರ್ಟಿ-ಪಿಸಿಆರ್ ತಪಾಸಣೆಗೆ ಒಳಗಾಗುವ ಅಗತ್ಯವಿಲ್ಲ.
2.ಕೊವಿಡ್ 19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಚೇತರಿಸಿಕೊಂಡು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಯಮದ ಅನುಸಾರ ಡಿಸ್ಚಾರ್ಜ್ ಆಗುವ ಹೊತ್ತಲ್ಲಿ ಅವರಿಗೆ ಮತ್ತೆ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಿಸಬೇಕಿಲ್ಲ.
3. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಯಾರಾದರೂ ಪ್ರಯಾಣ ಮಾಡಬೇಕು ಅಂತಿದ್ದು, ಅವರಲ್ಲಿ ಕೊರೊನಾದ ಯಾವುದೇ ಲಕ್ಷಣ ಇಲ್ಲದಿದ್ದರೆ ಅಂಥವರು ಆರ್ಟಿ-ಪಿಸಿಆರ್ ತಪಾಸಣೆಗೆ ಒಳಗಾಗುವುದು ಬೇಡ. ಆರ್ಎಟಿ ತಪಾಸಣೆ ಸಾಕು.
4. ಜ್ವರ, ನೆಗಡಿ, ಕೆಮ್ಮಿನಿಂತ ಲಕ್ಷಣ ಇರುವವರು ಸಾಧ್ಯವಾದಷ್ಟು ಮಟ್ಟಿಗೆ ಪ್ರಯಾಣವನ್ನು ಕಡಿಮೆ ಮಾಡಬೇಕು. ಅನಿವಾರ್ಯ ಇಲ್ಲ ಎಂದರೆ ಒಂದುಕಡೆಯಿಂದ ಇನ್ನೊಂದು ಕಡೆಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಅಂತಾರಾಜ್ಯ ಪ್ರಯಾಣವೂ ಬೇಡ. ಅದಕ್ಕಾಗಿ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಿಸುವುದು ಬೇಡ.
5. ರಾಜ್ಯಸರ್ಕಾರಗಳು ಸಂಚಾರಿ ವ್ಯವಸ್ಥೆಯ ಮೂಲಕ ಉತ್ತಮ ಗುಣಮಟ್ಟದ ಆರ್ಟಿ-ಪಿಸಿಆರ್ ಟೆಸ್ಟ್ನ್ನು ಹೆಚ್ಚಿಸಬೇಕು.
ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹೆಚ್ಚಿಸಲು ಕ್ರಮಗಳು
RAT (Rapid Antigen Test) ತಪಾಸಣೆಯನ್ನು ಎಲ್ಲ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಮಾಡಲಾಗುವುದು.
ಹಾಗೇ ಆರ್ಎಟಿ ತಪಾಸಣೆಗೆಂದೇ ಎಲ್ಲ ನಗರಗಳಲ್ಲಿ, ಪಟ್ಟಣಗಳು, ಹಳ್ಳಿಗಳಲ್ಲಿ ಬೂತ್ಗಳನ್ನು ಸ್ಥಾಪಿಸಬೇಕು.
ಎಲ್ಲ ರೀತಿಯ ಆರೋಗ್ಯ ವ್ಯವಸ್ಥೆಗಳು, ಆರ್ಡಬ್ಲ್ಯೂಎ, ಎಲ್ಲ ಕಚೇರಿಗಳು, ಶಾಲೆ-ಕಾಲೇಜುಗಳು, ಸಮುದಾಯ ಕೇಂದ್ರಗಳಲ್ಲೂ RAT ತಪಾಸಣಾ ಕೇಂದ್ರಗಳನ್ನು ನಿರ್ಮಿಸಬಹುದು.
ಹೀಗೆ ಸ್ಥಾಪಿಸಲಾದ ಬೂತ್ಗಳಲ್ಲಿ ಸೇವೆ 24ಗಂಟೆಯೂ ಲಭ್ಯ ಇರಬೇಕು. ಅಂದರೆ ಟೆಸ್ಟಿಂಗ್ ಇಡೀ ದಿನ ನಡೆಯುತ್ತಿರಬೇಕು.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಬಂಧಿತರಾಗಿದ್ದವರಿಗೆ ಜಾಮೀನು