
ನವದೆಹಲಿ, ನವೆಂಬರ್ 12: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ಹಾಗೂ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೊಗಳಿದ್ದಾರೆ. ಮೋದಿ ಒಬ್ಬ ಒಳ್ಳೆಯ ವಾಗ್ಮಿ, ಕಠಿಣ ಪರಿಶ್ರಮಿ ಹಾಗೂ ವೈಯಕ್ತಿಕವಾಗಿ ಆತ್ಮೀಯ ವ್ಯಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ತಮಗೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ಸಮಸ್ಯೆಗಳಿಲ್ಲ. ಆದರೆ ಅವರ ರಾಜಕೀಯ ಸಿದ್ಧಾಂತಗಳು ಮತ್ತು ದೇಶದ ಬಗ್ಗೆ ಇರುವ ದೃಷ್ಟಿಕೋನದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಐಎಎನ್‌ಎಸ್ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸ್ಯಾಮ್ ಪಿತ್ರೋಡಾ, ಪ್ರಧಾನಿ ಮೋದಿ ಅವರನ್ನು ತಾವು ವ್ಯಕ್ತಿಯಾಗಿ ಗೌರವಿಸುವುದಾಗಿ ಹೇಳಿದ್ದಾರೆ. ಮೋದಿ ಗುಜರಾತ್‌ನವರು. ಅವರೊಂದಿಗೆ ತಮಗೆ ಸ್ನೇಹಪೂರ್ಣ ಸಂಬಂಧವಿದೆ. ತಮ್ಮ ಪತ್ನಿಯೊಂದಿಗೆ ಹಲವು ಬಾರಿ ಮೋದಿಯನ್ನು ಭೇಟಿಯಾಗಿದ್ದೇನೆ. ವೈಯಕ್ತಿಕವಾಗಿ ಅವರು ತುಂಬಾ ಆತ್ಮೀಯರು, ದಯಾಳು ಹಾಗೂ ಕಾಳಜಿ ವಹಿಸುವ ವ್ಯಕ್ತಿ ಎಂದು ಪಿತ್ರೋಡಾ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೂ ಅವರೊಂದಿಗೆ ಕುಳಿತು ಊಟ ಮಾಡಬಹುದು, ನಗುತ್ತಾ ಮಾತನಾಡಬಹುದು ಎಂದು ಪಿತ್ರೋಡಾ ಹೇಳಿದ್ದಾರೆ. ಅವರ ವ್ಯಕ್ತಿತ್ವದ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ. ಆದರೆ ಅವರ ರಾಜಕೀಯ ಸಿದ್ಧಾಂತಗಳು ಮತ್ತು ಜಗತ್ತನ್ನು ನೋಡುವ ದೃಷ್ಟಿಕೋನದ ಬಗ್ಗೆ ನನ್ನದೇ ಆದ ಭಿನ್ನಾಭಿಪ್ರಾಯಗಳಿವೆ ಎಂದು ತಿಳಿಸಿದ್ದಾರೆ.
ವ್ಯಕ್ತಿಯೊಬ್ಬರ ವೈಯಕ್ತಿಕ ಗುಣ ಮತ್ತು ಅವರ ರಾಜಕೀಯ ವಿಚಾರಧಾರೆ ಎರಡನ್ನೂ ಪ್ರತ್ಯೇಕವಾಗಿ ನೋಡಬೇಕು. ವ್ಯಕ್ತಿಯೊಂದಿಗೆ ಸ್ನೇಹ ಹೊಂದಿದ್ದರೂ ಅವರ ಆಲೋಚನೆಗಳನ್ನು ಒಪ್ಪಲೇಬೇಕೆಂದಿಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಸ್ ಯಂತ್ರದಿಂದ ಇನ್‌ಸ್ಟಾಗ್ರಾಂ ರೀಲ್ಸ್‌ವರೆಗೆ, 25 ವರ್ಷಗಳಲ್ಲಿ ರಾಜಕೀಯ, ಮಾಧ್ಯಮದ ಸ್ವರೂಪ ಬದಲಾಗಿದೆ: ಮೋದಿ
2018ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿಯವರ ಭಾಷಣದ ಶೈಲಿಯನ್ನು ಉಲ್ಲೇಖಿಸಿ ಅವರನ್ನು ಉತ್ತಮ ವಾಗ್ಮಿ ಎಂದು ಬಣ್ಣಿಸಿದ್ದರು. ಆದರೆ ಭಾಷಣ ಮಾಡುವಾಗ ಅವರು ತಪ್ಪು ಮಾಹಿತಿಯನ್ನು ನೀಡುತ್ತಾರೆ ಎಂಬ ಟೀಕೆಯನ್ನೂ ಮಾಡಿದ್ದರು. ಇದೀಗ ಸೋನಿಯಾ ಗಾಂಧಿಯವರ ಆ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುವಾಗ ಪಿತ್ರೋಡಾ ಕೂಡ ಮೋದಿ ಅವರ ಭಾಷಣದ ಸಾಮರ್ಥ್ಯವನ್ನು ಮೆಚ್ಚಿದ್ದಾರೆ.
ಮೋದಿ ಒಳ್ಳೆಯ ವಾಗ್ಮಿ, ಜನರ ಮುಂದೆ ತಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಮಂಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ಅವರು ತುಂಬಾ ಪರಿಶ್ರಮಿ ಎಂದು ಪಿತ್ರೋಡಾ ಹೇಳಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಏಕೆಂದರೆ ಅವರು ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದು, ಪ್ರಧಾನಿ ಮೋದಿ ಅವರ ರಾಜಕೀಯ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಆದರೂ ಮೋದಿಯವರ ವೈಯಕ್ತಿಕ ಗುಣಗಳನ್ನು ಬಹಿರಂಗವಾಗಿ ಮೆಚ್ಚಿಕೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ಪಿತ್ರೋಡಾ ಅವರು ಮೋದಿಯವರ ಗುಜರಾತ್ ನಿವಾಸಕ್ಕೂ ಹಲವು ಬಾರಿ ಭೇಟಿ ನೀಡಿದ್ದಾರಂತೆ. ತಮ್ಮ ಪತ್ನಿಯೊಂದಿಗೂ ಮೋದಿಯನ್ನು ಭೇಟಿಯಾಗಿದ್ದಾಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅವರ ಮಾತಿನ ಮುಖ್ಯ ಸಂದೇಶ ಏನೆಂದರೆ, ರಾಜಕೀಯದಲ್ಲಿ ವಿರೋಧಿಗಳಾಗಿದ್ದರೂ ವೈಯಕ್ತಿಕವಾಗಿ ಸ್ನೇಹಿತರಾಗಿರಬಹುದು. ವ್ಯಕ್ತಿಯನ್ನು ವಿರೋಧಿಸುವುದಕ್ಕೂ ಅವರ ಸಿದ್ಧಾಂತವನ್ನು ವಿರೋಧಿಸುವುದಕ್ಕೂ ವ್ಯತ್ಯಾಸವಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ