ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಮಾನತಿಗೆ ಸುಪ್ರೀಂ ಕೋರ್ಟ್ ನಕಾರ: ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್

ಸುಪ್ರೀಂ ಕೋರ್ಟ್ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಮಾನತಿಗೆ ನಕಾರ ಹೇಳಿದೆ. ಉಳಿದ ಆಯುಕ್ತರ ಒಪ್ಪಿಗೆ ಇಲ್ಲದೆ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡ ಆರೋಪದ ಬಗ್ಗೆ ವಿವರಣೆ ನೀಡುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ECI) ನೋಟಿಸ್ ಜಾರಿ ಮಾಡಿದೆ. ಆಯೋಗದ ಉತ್ತರ ಬಂದ ನಂತರ, ಸರ್ವಾನುಮತವಿಲ್ಲದೆ ಕೈಗೊಂಡ ನಿರ್ಧಾರಗಳನ್ನು ಮರುಪರಿಶೀಲಿಸುವ ಅಥವಾ ರದ್ದುಪಡಿಸುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಹೇಳಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಮಾನತಿಗೆ ಸುಪ್ರೀಂ ಕೋರ್ಟ್ ನಕಾರ: ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್
ಜ್ಞಾನೇಶ್ ಕುಮಾರ್
Image Credit source: BBC

Updated on: Oct 05, 2026 | 1:19 PM

ನವದೆಹಲಿ, ಅಕ್ಟೋಬರ್ 05: ಉಳಿದ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆ ಪಡೆಯದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಒಳಗಾಗಿದ್ದ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಯಾವುದೇ ಮಧ್ಯಂತರ ಅಮಾನತು ಆದೇಶ ಹೊರಡಿಸಲು ಒಪ್ಪದ ನ್ಯಾಯಾಲಯ, ಆರೋಪಗಳ ಕುರಿತು ವಿವರಣೆ ನೀಡುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ECI) ನೋಟಿಸ್ ಜಾರಿ ಮಾಡಿದೆ.

ಆಯೋಗದ ಉತ್ತರ ಬಂದ ನಂತರ ಕ್ರಮ

ಚುನಾವಣಾ ಆಯೋಗವು ನೋಟಿಸ್‌ಗೆ ಉತ್ತರಿಸಿದ ಬಳಿಕ, ಅಗತ್ಯವಿರುವ ಸರ್ವಾನುಮತವಿಲ್ಲದೆ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂಬುದು ದೃಢಪಟ್ಟರೆ ಅಂತಹ ಆದೇಶಗಳನ್ನು ಮರುಪರಿಶೀಲಿಸಲಾಗುವುದು ಅಥವಾ ರದ್ದುಗೊಳಿಸಲಾಗುವುದು ಎಂದು ಪೀಠ ತಿಳಿಸಿದೆ. ನೋಟಿಸ್ ಜಾರಿಯಾದ ಬಳಿಕ, ಕೆಲವು ನಿರ್ಧಾರಗಳನ್ನು ಸರ್ವಾನುಮತವಿಲ್ಲದೆ ತೆಗೆದುಕೊಳ್ಳಲಾಗಿದೆ ಎಂದು ತೋರಿಸಿದರೆ, ನಾವು ಅಂತಹ ನಿರ್ಧಾರಗಳನ್ನು ಹಿಂಪಡೆಯುತ್ತೇವೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗವು ಬಹು-ಸದಸ್ಯರನ್ನು ಒಳಗೊಂಡ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಪ್ರಮುಖ ತೀರ್ಮಾನಗಳನ್ನು ಒಮ್ಮತದಿಂದ ಅಥವಾ ಬಹುಮತದಿಂದ ಕೈಗೊಳ್ಳಬೇಕೇ ಹೊರತು ಏಕಪಕ್ಷೀಯವಾಗಿ ಅಲ್ಲ ಎಂಬ ವಾದವನ್ನು ನ್ಯಾಯಾಲಯ ಪರಿಶೀಲಿಸುತ್ತಿದೆ.

ಮತ್ತಷ್ಟು ಓದಿ: ನಾಳೆ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ; ಜ್ಞಾನೇಶ್ ಕುಮಾರ್ ರಾಜೀನಾಮೆ ಸೇರಿದಂತೆ 3 ಬೇಡಿಕೆಗಳನ್ನಿಟ್ಟ ಸಿಜೆಪಿ

ಚುನಾವಣಾ ಆಯೋಗದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಗೆ ಸಂಬಂಧಿಸಿದ ನಿರ್ಧಾರಗಳನ್ನು ಮುಖ್ಯ ಚುನಾವಣಾ ಆಯುಕ್ತರು ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆ ಇಲ್ಲದೆ ತೆಗೆದುಕೊಂಡಿದ್ದಾರೆ ಎಂಬ ಆರೋಪದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಆರಂಭಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಮೂರು ಸದಸ್ಯರ ಪೀಠ ವಿಚಾರಣೆ ನಡೆಸುತ್ತಿದೆ.

ಕಾನೂನಿನ ಪ್ರಕಾರ ಆಯೋಗದಲ್ಲಿ ಒಮ್ಮತದಿಂದ ನಿರ್ಧಾರ ತೆಗೆದುಕೊಳ್ಳಬೇಕು ಅಥವಾ ಭಿನ್ನಾಭಿಪ್ರಾಯವಿದ್ದರೆ ಬಹುಮತದ ಆಧಾರದ ಮೇಲೆ ನಿರ್ಧಾರವಾಗಬೇಕು ಎಂದು ಅವರು ವಾದಿಸಿದರು. ಒಬ್ಬರೇ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿಲ್ಲ ಎಂದು ಹೇಳಿದರು.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಪ್ರಕರಣದಲ್ಲಿ ಸಂಬಂಧಿಸಿದ ಕಾನೂನು, ಅದರ ತಿದ್ದುಪಡಿಗಳು ಮತ್ತು ಹಿಂದಿನ ತೀರ್ಪುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು. ಕೇವಲ ಮಾಧ್ಯಮ ವರದಿಗಳ ಆಧಾರದ ಮೇಲೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದೂ ಅವರು ಸೂಚಿಸಿದರು.

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಪ್ರಕರಣದಲ್ಲಿ ಚುನಾವಣಾ ಆಯೋಗದ ನಿಲುವನ್ನು ಕೇಳಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೀಠ ತಿಳಿಸಿದೆ. ಅದೇ ವೇಳೆ, ಈ ಹಂತದಲ್ಲಿ ಸಿಇಸಿಯನ್ನು ಅಮಾನತು ಮಾಡುವಂತೆ ಅಥವಾ ಅವರ ಕಾರ್ಯ ನಿರ್ವಹಣೆಗೆ ತಕ್ಷಣ ತಡೆ ನೀಡುವಂತೆ ಯಾವುದೇ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮೊದಲು ಸಂಬಂಧಪಟ್ಟ ಪಕ್ಷದ ವಾದವನ್ನು ಕೇಳಬೇಕು ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದ್ದಾರೆ.

ಇದಕ್ಕೂ ಮೊದಲು ಬಿಹಾರದ ಎಸ್​ಐಆರ್ ಪ್ರಕ್ರಿಯೆಯ ಕಾನೂನುಬದ್ಧತೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಮತದಾರರ ಪಟ್ಟಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುವುದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದು ಕೋರ್ಟ್ ಹೇಳಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us