ಶಿರೋಮಣಿ ಅಕಾಲಿ ದಳ (SAD)ದ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಬುಧವಾರ ಬಿಜೆಪಿಯನ್ನು ಸೇರಿದ್ದಾರೆ. ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಮುಖ್ಯಸ್ಥ ಸ್ಥಾನದಿಂದ ತಾವು ಕೆಳಗೆ ಇಳಿಯುತ್ತಿರುವ ಬಗ್ಗೆ ಇತ್ತೀಚೆಗಷ್ಟೇ ಘೋಷಿಸಿದ್ದ ಸಿರ್ಸಾ, ನಿನ್ನೆ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಕಮಲ ಪಾಳಯಕ್ಕೆ ಸೇರ್ಪಡೆಗೊಂಡಿದ್ದಾರೆ. ಇದು ಮುಂದಿನ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸಿಖ್ ಸಮುದಾಯದ ಮತದಾರರನ್ನು ಸೆಳೆಯುವ ಬಿಜೆಪಿಯ ಪ್ರಯತ್ನ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಸಿರ್ಸಾ ರಾಜೌರಿ ಗಾರ್ಡನ್ನ ಮಾಜಿ ಶಾಸಕರು. ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿ ಭಾಗಗಳಲ್ಲಿ ಹೋರಾಡುತ್ತಿರುವ ರೈತರಿಗೆ ಬೆಂಬಲ ನೀಡುತ್ತಿದ್ದ ಸಂಘಟನೆಗಳಲ್ಲಿ ಒಂದಾಗಿದ್ದ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಮುಖ್ಯಸ್ಥರಾಗಿದ್ದರು. ಹಾಗೇ, ಕೃಷಿ ಕಾಯ್ದೆಗಳನ್ನು ತೀವ್ರವಾಗಿ ವಿರೋಧಿಸಿದ್ದರು. ಇತ್ತೀಚೆಗೆ ಕಮಿಟಿ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು, ನಾನು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಮತ್ತು ಕಮಿಟಿಯ ಮುಂಬರುವ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ನನ್ನ ಸಮುದಾಯ, ರಾಷ್ಟ್ರಕ್ಕೆ ಸೇವೆ ಮುಂದುವರಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.
ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಮಾತನಾಡಿದ ಸಿರ್ಸಾ, ದೇಶಾದ್ಯಂತ ಸಿಖ್ ಸಮುದಾಯಕ್ಕೆ ಹಲವು ಸಮಸ್ಯೆಗಳು ಇವೆ. ಅದರ ಬಗ್ಗೆ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಅಲ್ಲದೆ ಪ್ರಧಾನಿ ಮೋದಿಯವರ ಬಳಿಯೂ ಮಾತನಾಡಲು ಅವಕಾಶ ಸಿಕ್ಕಿದ್ದು ತುಂಬ ಖುಷಿಕೊಟ್ಟಿತು. ಸಿಖ್ಖರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಅಮಿತ್ ಶಾ ಕೂಡ ತಮ್ಮ ಟ್ವಿಟರ್ನಲ್ಲಿ ಸಿರ್ಸಾ ಅವರು ಬಿಜೆಪಿಗೆ ಸೇರ್ಪಡೆಯಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಶಿರೋಮಣಿ ಅಕಾಲಿ ದಳ ಎನ್ಡಿಎ ಒಕ್ಕೂಟದ ಮೈತ್ರಿ ಪಕ್ಷವೇ ಆಗಿತ್ತು. ಆದರೆ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದನ್ನು ಎಸ್ಎಡಿ ವಿರೋಧಿಸಿತ್ತು. ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಶಿರೋಮಣಿ ಅಕಾಲಿ ದಳ ಎನ್ಡಿಎ ಒಕ್ಕೂಟದಿಂದ ಹೊರನಡೆದು, ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯವಿಲ್ಲ ಎಂದಿತ್ತು. ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ರ ಆಪ್ತರೆನಿಸಿಕೊಂಡಿದ್ದ ಮಂಜಿಂದರ್ ಸಿಂಗ್ ಸಿರ್ಸಾ ಕೃಷಿ ಕಾಯ್ದೆಗಳನ್ನು ತುಂಬ ಸಲ ಟೀಕಿಸಿದ್ದಾರೆ. ಇದೀಗ ಆ ಮೂರು ಕೃಷಿ ಕಾಯ್ದೆಗಳು ರದ್ದುಗೊಂಡ ಬೆನ್ನಲ್ಲೇ ಅವರು ಬಿಜೆಪಿ ಪಕ್ಷ ಸೇರಿದ್ದಾರೆ. ಆದರೆ ಸಿರ್ಸಾ ಯೂ ಟರ್ನ್ ತೆಗೆದುಕೊಂಡಿದ್ದನ್ನು ಅವರದ್ದೇ ಪಕ್ಷದ ಅನೇಕ ಸದಸ್ಯರು ಟೀಕಿಸುತ್ತಿದ್ದಾರೆ.
ਸਰਦਾਰ @mssirsa ਜੀ ਦਾ ਭਾਜਪਾ ਵਿੱਚ ਸਵਾਗਤ ਹੈ। ਪ੍ਰਧਾਨ ਮੰਤਰੀ ਸ਼੍ਰੀ @NarendraModi ਜੀ ਦੀ ਅਗਵਾਈ ਵਿੱਚ ਸਿੱਖ ਕੌਮ ਦੀ ਭਲਾਈ ਲਈ ਭਾਜਪਾ ਦੇ ਸੰਕਲਪ ਵਿੱਚ ਵਿਸ਼ਵਾਸ ਪ੍ਰਗਟ ਕਰਦੇ ਹੋਏ, ਉਹ ਪਾਰਟੀ ਵਿੱਚ ਸ਼ਾਮਲ ਹੋਏ ਹਨ। ਮੈਨੂੰ ਯਕੀਨ ਹੈ ਕਿ ਉਨ੍ਹਾਂ ਦੇ ਪਾਰਟੀ ਵਿੱਚ ਆਉਣ ਨਾਲ ਇਸ ਸੰਕਲਪ ਨੂੰ ਹੋਰ ਤਾਕਤ ਮਿਲੇਗੀ। pic.twitter.com/crhGYjuW5y
— Amit Shah (@AmitShah) December 1, 2021
ಇದನ್ನೂ ಓದಿ: India vs South Africa: ಓಮಿಕ್ರಾನ್ ಭೀತಿ: ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ