ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದಿಲ್ಲೊಂದು ವಿವಾದಲ್ಲಿ ಸಿಲುಕ್ತಾನೆ ಬರ್ತಿದೆ. ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳಿಗೆ ನೀಡಿದ ಸಾಲವನ್ನ ವಸೂಲಿ ಮಾಡುವಲ್ಲಿ ಎಸ್‌ಬಿಐ ಇತಿಹಾಸ ಕರಾಳವಾಗಿದೆ. ಈಗ ಇಂಥದ್ದೆ ಮತ್ತೊಂದು ವಿವಾದದಲ್ಲಿ ಎಸ್‌ಬಿಐ ಸಿಲುಕಿಕೊಂಡಿದೆ.
ಖ್ಯಾತ ರುಚಿ ಸೋಯಾ ಕಂಪನಿಗೆ ನೀಡಿದ್ದ 1,800 ಕೋಟಿ ರೂ. ಸಾಲವನ್ನ ಸಂಪೂರ್ಣವಾಗಿ ವಸೂಲು ಮಾಡುವಲ್ಲಿ ಎಸ್‌ಬಿಐ ವಿಫಲವಾಗಿದೆ. ಇದರ ಬದಲು ಅದನ್ನು ಮರುಪಾವತಿಯಾಗದ ಸಾಲ ಎಂದು ಘೋಷಿಸಿ ಕೈತೊಳೆದುಕೊಂಡಿದೆ. ಇದಾದ ನಂತರ ರುಚಿ ಸೋಯಾ ಕಂಪನಿ ತಾನು ದಿವಾಳಿಯಾಗಿದ್ದೇನೆಂದು ಘೋಷಿಸಿಕೊಂಡಿದೆ. ಇದಕ್ಕಾಗಿ ಅನುಸರಿಸಬೇಕಾದ ಕಾನೂನು ಕ್ರಮಗಳನ್ನ ಕೂಡಾ ಪಾಲಿಸಿದೆ.
ಹೀಗೆ ದಿವಾಳಿ ಘೋಷಣೆ ಸಮಯದಲ್ಲೂ ಅದು ಎಸ್‌ಬಿಐಗೆ ನೀಡಬೇಕಾದ ಮೊತ್ತವನ್ನು ನೀಡಿಲ್ಲ. ಆದ್ರೆ ಕಹಾನಿಯಲ್ಲಿ ಟ್ವಿಸ್ಟ್ ಇರೋದೆ ಇಲ್ಲಿ.. ಯಾಕಂದ್ರೆ ಹೀಗೆ ದಿವಾಳಿಯಾದ ರುಚಿ ಸೋಯಾ ಕಂಪನಿಯನ್ನ ಖ್ಯಾತ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್‌ವೇದ ಗ್ರೂಪ್ ಖರೀದಿಸಿದೆ. ಇದಕ್ಕೆ ಆರ್ಥಿಕ ನೆರವು ನೀಡಿದ್ದು ಬೇರೆ ಯಾರೂ ಅಲ್ಲ ಮತ್ತದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ! ಇದಕ್ಕಾಗಿ ಅದು ಪತಂಜಲಿ ಗ್ರೂಪ್‌ಗೆ 1,200 ಕೋಟಿ ರೂ.ಗಳನ್ನ ಸಾಲವಾಗಿ ನೀಡಿದೆ.
ಎಸ್‌ಬಿಐನ ಈ ನಡೆ ಈಗ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಮೂದಲು ರುಚಿ ಸೋಯಾ ಕಂಪನಿಗೆ ನೀಡಿದ್ದ 1,800 ಕೋಟಿ ರೂ. ಸಾಲವೇ ರಿಕವರಿ ಆಗಿಲ್ಲ. ಅದನ್ನ ಬ್ಯಾಡ್ ಡೆಟ್ ಎಂದು ತನ್ನ ಖಾತೆಯಲ್ಲಿ ದಾಖಲಿಸಿಕೊಂಡು ಎಳ್ಳು ನೀರು ಬಿಟ್ಟಿದೆ. ಆದ್ರೆ ಕೆಲವೇ ದಿನಗಳಲ್ಲಿ ಅದೇ ದಿವಾಳಿಯಾದ ಕಂಪನಿಯನ್ನ ಖರೀದಿಸಲು ಎಸ್‌ಬಿಐ ಪತಂಜಲಿ ಗ್ರೂಪ್‌ಗೆ 1,200 ಕೋಟಿ ಸಾಲ ನೀಡಿದೆ. ಇದು ಆರ್ಥಿಕ ತಜ್ಞರಿಗೆ ಹಗಲು ಹೊತ್ತಿನಲ್ಲಿ ದೀಪ ಹಚ್ಚಿ ಹುಡುಕಿದರೂ ಉತ್ತರ ಸಿಗದಂಥ ಪ್ರಶ್ನೆಯಾಗಿದೆ.
ಇನ್ನೊಂದು ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಂದ್ರೆ ಪತಂಜಲಿ ಗ್ರೂಪ್ ರುಚಿ ಸೋಯಾ ಕಂಪನಿ ಖರೀದಿಸುವುದಕ್ಕಿಂತ ಮೊದಲು ಅದರ ಶೇರಿನ ಮುಖ ಬೆಲೆ ಇದ್ದದ್ದು ರೂ.3.30. ಆದ್ರೆ ಪತಂಜಲಿ ಗ್ರೂಪ್ ಅದನ್ನ ಖರೀದಿಸುತ್ತಿದ್ದಂತೆ ಶೇರಿನ ಬೆಲೆ ಏಕಾ ಏಕಿ ರೂ. 1,535ಗೆ ಏರಿಕೆಯಾಗಿದೆ. ಅಂದ್ರೆ ಶೇ. 43757.14 ರಷ್ಟು. ಇದು ಜಗತ್ತಿನಲ್ಲಿ ಎಲ್ಲೂ ಕೇಳಿರದ ಸಂಗತಿ ಅಂದರೂ ಅಚ್ಚರಿಯಲ್ಲ. ಇದೇ ಈಗ ಆರ್ಥಿಕ ತಜ್ಞರನ್ನ ವಿಸ್ಮಿತರನ್ನಾಗಿಸಿದೆ.
ತಜ್ಞರ ಪ್ರಕಾರ ಒಂದು ವೇಳೆ ರುಚಿ ಸೋಯಾ ಕಂಪನಿ ದಿವಾಳಿ ಘೋಷಿಸಿದಾಗ ಸಾಲ ಮರುಪಾವತಿಯಾಗುವುದು ಖಾತ್ರಿ ಇರದಿದ್ರೆ ತನ್ನ ಪಾಲಿನ ಸಾಲದ ಹಣವನ್ನ ಶೇರುಗಳಿಗೆ ಪರಿವರ್ತಿಸಿ ಕೊಳ್ಳಬೇಕಿತ್ತು. ಆಗ ಖರೀದಿಸುವ ಬೇರೆ ಕಂಪನಿಗಳಿಂದ ಅದರ ಪಾಲಿನ ಶೇರುಗಳ ಪಾಲಿನಿಂದಾದರೂ ಸಾಲ ಮರುಪಾವತಿಯಾಗುತ್ತೆ. ಆದ್ರೆ ಅಚ್ಚರಿ ರೀತಿಯಲ್ಲಿ ಎಸ್‌ಬಿಐ ಇದ್ಯಾವುದನ್ನು ಮಾಡಿಲ್ಲ. ಇದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲ ಇದರಲ್ಲಿ ಇರೋ ಗೋಲ್ ಮಾಲ್ ಆದ್ರೂ ಏನು ಎನ್ನುವುದು ಆರ್ಥಿಕ ತಜ್ಞರ ಪ್ರಶ್ನೆಯಾಗಿದೆ.
Published On - 2:06 pm, Sat, 18 July 20