ಟಿಸಿಎಸ್​ ಮತಾಂತರ, ಲೈಂಗಿಕ ಕಿರುಕುಳ ಪ್ರಕರಣ; ಕಠಿಣ ತನಿಖೆಗೆ ಟಾಟಾ ಕಂಪನಿ​ ಆದೇಶ

ಭಾರತದ ಐಟಿ ದಿಗ್ಗಜ ಕಂಪನಿಯಾದ ಟಿಸಿಎಸ್​ (Tata Consultancy Services) ನಾಸಿಕ್‌ನ ಬ್ರಾಂಚ್​​ನ ಆರೋಪಗಳ ಬಗ್ಗೆ ಟಾಟಾ ಕಂಪನಿ ತನಿಖೆಗೆ ಆದೇಶಿಸಿದೆ. ನಾಸಿಕ್‌ನ ಟಿಸಿಎಸ್ ಶಾಖೆಯಲ್ಲಿ ಕೇಳಿಬಂದಿರುವ ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ಮತಾಂತರ ಆರೋಪಗಳ ನಂತರ ಉದ್ಯೋಗಿಗಳ ದುಷ್ಕೃತ್ಯದ ವಿರುದ್ಧ ಟಾಟಾ ಕಂಪನಿ ಕಠಿಣ ನಿಲುವನ್ನು ಕಾಯ್ದುಕೊಂಡಿದೆ ಎಂದು ಟಾಟಾ ಸನ್ಸ್ ಕಂಪನಿ ಅಧ್ಯಕ್ಷ ಎನ್. ಚಂದ್ರಶೇಖರನ್ ಹೇಳಿದ್ದಾರೆ.

ಟಿಸಿಎಸ್​ ಮತಾಂತರ, ಲೈಂಗಿಕ ಕಿರುಕುಳ ಪ್ರಕರಣ; ಕಠಿಣ ತನಿಖೆಗೆ ಟಾಟಾ ಕಂಪನಿ​ ಆದೇಶ
N Chandrasekaran
Image Credit source: PTI

Updated on: Apr 13, 2026 | 9:41 PM

ನವದೆಹಲಿ, ಏಪ್ರಿಲ್ 13: ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಇಂದು ಟಿಸಿಎಸ್ ನಾಸಿಕ್‌ನಲ್ಲಿ ನಡೆದ ಲೈಂಗಿಕ ಕಿರುಕುಳ ಆರೋಪಗಳನ್ನು ಟೀಕಿಸಿದ್ದಾರೆ. “ಈ ಘಟನೆ ಗಂಭೀರವಾಗಿದ್ದು, ಕಳವಳಕಾರಿ ಮತ್ತು ದುಃಖಕರದ್ದಾಗಿದೆ” ಎಂದು ಬೇಸರ ಹೊರಹಾಕಿದ್ದಾರೆ. ಟಿಸಿಎಸ್​ (Tata Consultancy Services) ಕಂಪನಿಯ ಹಿರಿಯ ಕಾರ್ಯನಿರ್ವಾಹಕರ ನೇತೃತ್ವದಲ್ಲಿ ಈ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಬಹುರಾಷ್ಟ್ರೀಯ ಕಂಪನಿಯ ಕಚೇರಿಯಲ್ಲಿ 8 ಮಹಿಳಾ ಉದ್ಯೋಗಿಗಳಿಂದ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರದ ಆರೋಪಗಳು ಕೇಳಿಬಂದಿತ್ತು.

ಟಾಟಾ ಗ್ರೂಪ್ ತನ್ನ ಉದ್ಯೋಗಿಗಳಿಂದ ಯಾವುದೇ ರೀತಿಯ ದಬ್ಬಾಳಿಕೆ ಅಥವಾ ದುಷ್ಕೃತ್ಯವನ್ನು ಸಹಿಸುವುದಿಲ್ಲ ಎಂದು ಎನ್. ಚಂದ್ರಶೇಖರನ್ ಹೇಳಿದ್ದಾರೆ. “ಸತ್ಯಗಳನ್ನು ಪತ್ತೆಹಚ್ಚಲು ಮತ್ತು ಈ ಪರಿಸ್ಥಿತಿಗೆ ಕಾರಣರಾದ ಎಲ್ಲ ವ್ಯಕ್ತಿಗಳನ್ನು ಗುರುತಿಸಲು ಸಂಪೂರ್ಣ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಸೂಕ್ತ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದ್ದಾರೆ.

“ಟಿಸಿಎಸ್‌ನ ನಾಸಿಕ್ ಶಾಖೆಯಿಂದ ಬಂದಿರುವ ದೂರುಗಳು ಮತ್ತು ಆರೋಪಗಳು ತೀವ್ರ ಕಳವಳಕಾರಿ ಮತ್ತು ತೀವ್ರ ದುಃಖಕರವಾಗಿವೆ. ಆರೋಪಿಗಳಾದ ಉದ್ಯೋಗಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನಡೆಯುತ್ತಿರುವ ತನಿಖೆಗಳಿಗೆ ಕಂಪನಿಯು ತನ್ನ ಸಂಪೂರ್ಣ ಸಹಕಾರವನ್ನು ನೀಡುತ್ತಿದೆ” ಎಂದು ಚಂದ್ರಶೇಖರನ್ ಹೇಳಿದ್ದಾರೆ.

ಇದನ್ನೂ ಓದಿ: ನಾಸಿಕ್​ನ ಐಟಿ ಕಂಪನಿಯಲ್ಲಿ ಮಹಿಳೆಯರ ಮತಾಂತರ, ಲೈಂಗಿಕ ದೌರ್ಜನ್ಯ ದಂಧೆ ಬಯಲು 

“ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ನಾಸಿಕ್ ಶಾಖೆಯಿಂದ ಬಂದಿರುವ ದೂರುಗಳು ಮತ್ತು ಆರೋಪಗಳು ತೀವ್ರ ಕಳವಳಕಾರಿ ಮತ್ತು ದುಃಖಕರವಾಗಿವೆ. ಆರೋಪಿ ಉದ್ಯೋಗಿಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಕಂಪನಿಯು ನಡೆಯುತ್ತಿರುವ ತನಿಖೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ” ಎಂದು ಚಂದ್ರಶೇಖರನ್ ಪ್ರತಿಕ್ರಿಯೆ ನೀಡಿದ್ದಾರೆ.

ಟಿಸಿಎಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆರತಿ ಸುಬ್ರಮಣಿಯನ್ ಈ ಪ್ರಕರಣದ ತನಿಖೆಯ ನೇತೃತ್ವ ವಹಿಸಲಿದ್ದಾರೆ. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಟಾಟಾ ಗ್ರೂಪ್ ಸೂಕ್ತ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಚಂದ್ರಶೇಖರನ್ ಹೇಳಿದ್ದಾರೆ.

ಇದನ್ನೂ ಓದಿ: ಟಿಸಿಎಸ್​ನಲ್ಲಿ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳ ಸಂಖ್ಯೆ 12 ಸಾವಿರವಾ, 30 ಸಾವಿರವಾ?

ಏನಿದು ಘಟನೆ?:

ಮಾರ್ಚ್‌ನಲ್ಲಿ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿ ತನ್ನ ಸಹೋದ್ಯೋಗಿಯೊಬ್ಬರು ಮದುವೆಯ ಭರವಸೆ ನೀಡುವ ಮೂಲಕ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದಾರೆಂದು ಆರೋಪಿಸಿ ದೂರು ಸಲ್ಲಿಸಿದ್ದರು. ಈ ಪ್ರಕರಣದ ತನಿಖೆಯ ಸಮಯದಲ್ಲಿ ಪೊಲೀಸರು ಟಿಸಿಎಸ್​ ಉದ್ಯೋಗಿಯ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ಮತಾಂತರ ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಎಫ್‌ಐಆರ್‌ಗಳನ್ನು ದಾಖಲಿಸಿದ್ದರು.

ಇಲ್ಲಿಯವರೆಗೆ, ಟಿಸಿಎಸ್​ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 7 ಜನರನ್ನು ಬಂಧಿಸಲಾಗಿದೆ. ನಾಸಿಕ್ ಪೊಲೀಸ್ ಆಯುಕ್ತರ ಕಚೇರಿಗೆ ಬಂದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಬಂಧಿತ ವ್ಯಕ್ತಿಗಳನ್ನು ಆಸಿಫ್ ಅನ್ಸಾರಿ, ಶಫಿ ಶೇಖ್, ಶಾರುಖ್ ಖುರೇಷಿ, ರಜಾ ಮೆಮನ್, ತೌಸಿಫ್ ಅತ್ತಾರ್ ಮತ್ತು ಡ್ಯಾನಿಶ್ ಶೇಖ್ ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಗುರುತು ಪತ್ತೆಯಾಗದ ಮಹಿಳೆಯೂ ಇದ್ದಾರೆ ಎನ್ನಲಾಗಿದೆ. ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us