ನ್ಯಾಷನಲ್ ಜ್ಯುಡಿಶಿಯಲ್ ಡೇಟಾ ಗ್ರಿಡ್ ಪೋರ್ಟಲ್​ನಲ್ಲಿ ಸಿಗಲಿದೆ ಸುಪ್ರೀಂ ಕೋರ್ಟ್ ಡೇಟಾ; ಜನರಿಗೇನು ಪ್ರಯೋಜನ? ಇಲ್ಲಿದೆ ಮಾಹಿತಿ

|

Updated on: Sep 14, 2023 | 9:22 PM

ಈಗ, ಒಂದು ಬಟನ್‌ ಕ್ಲಿಕ್ ಮಾಡುವ ಮೂಲಕ ನೀವು ಪ್ರಕರಣಗಳ ಬಾಕಿ, ವರ್ಷವಾರು, ನೋಂದಾಯಿತ ಮತ್ತು ನೋಂದಾಯಿಸದ ಪ್ರಕರಣಗಳ ಒಟ್ಟು ಬಾಕಿ ಮತ್ತು ಕೋರಂವಾರು ನಿರ್ಧರಿಸಲಾದ ಪ್ರಕರಣಗಳ ರಿಯಲ್ ಟೈಂ ಮಾಹಿತಿಯನ್ನು ನೋಡಬಹುದು ಎಂದು ಚಂದ್ರಚೂಡ್ ಅವರು ಹೇಳಿದ್ದಾರೆ.

ನ್ಯಾಷನಲ್ ಜ್ಯುಡಿಶಿಯಲ್ ಡೇಟಾ ಗ್ರಿಡ್ ಪೋರ್ಟಲ್​ನಲ್ಲಿ ಸಿಗಲಿದೆ ಸುಪ್ರೀಂ ಕೋರ್ಟ್ ಡೇಟಾ; ಜನರಿಗೇನು ಪ್ರಯೋಜನ? ಇಲ್ಲಿದೆ ಮಾಹಿತಿ
ಸುಪ್ರೀಂ ಕೋರ್ಟ್
Follow us on

ನವದೆಹಲಿ, ಸೆಪ್ಟೆಂಬರ್ 14: ಸುಪ್ರೀಂ ಕೋರ್ಟ್​ನ (Supreme Court) ದತ್ತಾಂಶಗಳು ಇನ್ನು ನ್ಯಾಷನಲ್ ಜ್ಯುಡಿಶಿಯಲ್ ಡೇಟಾ ಗ್ರಿಡ್​​ನಲ್ಲಿ​​​ (NJDG) ಲಭ್ಯವಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ಘೋಷಣೆ ಮಾಡಿದ್ದಾರೆ. ಪರಿಣಾಮವಾಗಿ, ಬಾಕಿ ಇರುವ ಪ್ರಕರಣಗಳ ಬಗ್ಗೆ ಜನರು ರಿಯಲ್ ಟೈಂ ಡಾಟಾವನ್ನು ಪಡೆಯುವುದು ಸುಲಭವಾಗಲಿದೆ. ಮುಖ್ಯ ನ್ಯಾಯಮೂರ್ತಿಗಳ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ತಂತ್ರಜ್ಞಾನದ ಇಂತಹ ಬಳಕೆಯು ದೇಶದ ನ್ಯಾಯ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದರ ಜತೆಗೆ ಪಾರದರ್ಶಕಗೊಳಿಸಲಿದೆ ಎಂದು ಮೋದಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಮತ್ತು ಸಿಜೆಐ ಡಿವೈ ಚಂದ್ರಚೂಡ್ ಅವರ ಶ್ಲಾಘನೀಯ ಹೆಜ್ಜೆ ಇದಾಗಿದೆ. ತಂತ್ರಜ್ಞಾನದ ಇಂತಹ ಬಳಕೆಯು ನಮ್ಮ ದೇಶದಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದಲ್ಲದೆ ಪಾರದರ್ಶಕಗೊಳಿಸುತ್ತದೆ ಎಂದು ಸಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಮಾಡಿರುವ ಪೋಸ್ಟ್​​ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.

ನ್ಯಾಯಾಲಯದಲ್ಲಿ ದಿನದ ಕಲಾಪವನ್ನು ಪ್ರಾರಂಭಿಸುತ್ತಿದ್ದಂತೆ ಚಂದ್ರಚೂಡ್ ಅವರು, ಸರ್ವೋಚ್ಚ ನ್ಯಾಯಾಲಯದ ಡೇಟಾವನ್ನು ನ್ಯಾಷನಲ್ ಜ್ಯುಡಿಶಿಯಲ್ ಡೇಟಾ ಗ್ರಿಡ್​​ನಲ್ಲಿ​​​ ರಿಯಲ್ ಟೈಂ ಆಧಾರದಲ್ಲಿ ಅಪ್​ಲೋಡ್ ಮಾಡಲಾಗುವುದು ಎಂದು ಹೇಳಿದ್ದರು.

ಜನಸಾಮಾನ್ಯರಿಗೆ ಏನು ಪ್ರಯೋಜನ? ಚಂದ್ರಚೂಡ್ ಹೇಳಿದ್ದಿಷ್ಟು…

ಇದೊಂದು ಐತಿಹಾಸಿಕ ದಿನ. ಇದು ಎನ್‌ಐಸಿ ಮತ್ತು ಸುಪ್ರೀಂ ಕೋರ್ಟ್‌ನ ತಂಡದಿಂದ ಅಭಿವೃದ್ಧಿಪಡಿಸಲಾದ ಒಂದು ವಿಶಿಷ್ಟ ವೇದಿಕೆಯಾಗಿದೆ. ಈಗ, ಒಂದು ಬಟನ್‌ ಕ್ಲಿಕ್ ಮಾಡುವ ಮೂಲಕ ನೀವು ಪ್ರಕರಣಗಳ ಬಾಕಿ, ವರ್ಷವಾರು, ನೋಂದಾಯಿತ ಮತ್ತು ನೋಂದಾಯಿಸದ ಪ್ರಕರಣಗಳ ಒಟ್ಟು ಬಾಕಿ ಮತ್ತು ಕೋರಂವಾರು ನಿರ್ಧರಿಸಲಾದ ಪ್ರಕರಣಗಳ ರಿಯಲ್ ಟೈಂ ಮಾಹಿತಿಯನ್ನು ನೋಡಬಹುದು ಎಂದು ಚಂದ್ರಚೂಡ್ ಅವರು ಗುರುವಾರ ಹೇಳಿದ್ದರು. ನ್ಯಾಯಾಲಯದ ‘ಮುಕ್ತ ಡೇಟಾ ನೀತಿ’ ಅಡಿಯಲ್ಲಿ ನ್ಯಾಷನಲ್ ಜ್ಯುಡಿಶಿಯಲ್ ಡೇಟಾ ಗ್ರಿಡ್​​ ಪೋರ್ಟಲ್‌ನಲ್ಲಿ ಸುಪ್ರೀಂ ಕೋರ್ಟ್ ಡೇಟಾವನ್ನು ಅಪ್​ಲೋಡ್ ಮಾಡಲಾಗುವುದು. ನ್ಯಾಯಾಂಗ ಕ್ಷೇತ್ರದಲ್ಲಿ ಪಾರದರ್ಶಕತೆ ತರುವುದು ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದು ಒಂದು ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಮನೆ ಕೆಲಸದ ಹೊರೆಯನ್ನು ಪತಿ, ಪತ್ನಿ ಸಮಾನವಾಗಿ ಹಂಚಿಕೊಳ್ಳಬೇಕು: ಬಾಂಬೆ ಹೈಕೋರ್ಟ್

ಪೋರ್ಟಲ್‌ನಲ್ಲಿ ಸಂಪೂರ್ಣ ಡೇಟಾಬೇಸ್ ಅನ್ನು ನಿಯಮಿತವಾಗಿ ಅಪ್​ಡೇಟ್ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಜತೆಗೆ, ಸುಪ್ರೀಂ ಕೋರ್ಟ್‌ನ ಡೇಟಾಗೆ ಸಂಬಂಧಿಸಿದ ವೆಬ್‌ಪುಟ ಮತ್ತು ನ್ಯಾಷನಲ್ ಜ್ಯುಡಿಶಿಯಲ್ ಡೇಟಾ ಗ್ರಿಡ್​ನಲ್ಲಿ ಗ್ರಾಫ್ ಅನ್ನು ಪ್ರದರ್ಶಿಸಿದರು.

ವೆಬ್‌ಪುಟವು ನಮಗೆ ಪ್ರಸ್ತುತ ವರ್ಷದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ಬಾಕಿ, ನೋಂದಾಯಿತ ಮತ್ತು ಒಟ್ಟು ನೋಂದಾಯಿಸದ ಬಾಕಿ ಪ್ರಕರಣಗಳ ಮಾಹಿತಿ ನೀಡುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ