ಜಾಮೀನು ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ಮಾಡಬಾರದು ಎಂದ ಕಿರಣ್ ರಿಜಿಜು; ಕಾನೂನು ಸಚಿವರ ಹೇಳಿಕೆಗೆ ವಿಪಕ್ಷ ವಾಗ್ದಾಳಿ

| Updated By: ರಶ್ಮಿ ಕಲ್ಲಕಟ್ಟ

Updated on: Dec 15, 2022 | 4:53 PM

ನೀವು ಸೂಕ್ತವಾದ ಪ್ರಕರಣಗಳನ್ನು ಕೈಗೆತ್ತಿಕೊಳ್ಳಿ ಎಂದು ನಾನು ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ಕೆಲವು ಸಲಹೆ ನೀಡಿದ್ದೇನೆ. ಜಾಮೀನು ಅರ್ಜಿಗಳು ಅಥವಾ ನಿಷ್ಪ್ರಯೋಜಕ ಪಿಐಎಲ್‌ಗಳ ವಿಚಾರಣೆ ಸುಪ್ರೀಂಕೋರ್ಟ್​​ಗೆ ಹೆಚ್ಚಿನ ಹೊರೆಯನ್ನು ಉಂಟುಮಾಡುತ್ತದೆ ಎಂದು ರಿಜಿಜು ಹೇಳಿದ್ದಾರೆ.

ಜಾಮೀನು ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ಮಾಡಬಾರದು ಎಂದ ಕಿರಣ್ ರಿಜಿಜು; ಕಾನೂನು ಸಚಿವರ ಹೇಳಿಕೆಗೆ ವಿಪಕ್ಷ ವಾಗ್ದಾಳಿ
ಕಿರಣ್ ರಿಜಿಜು
Follow us on

ಸುಪ್ರೀಂಕೋರ್ಟ್​​ನಲ್ಲಿ (Supreme Court) ಪ್ರಕರಣಗಳು ಬಾಕಿ ಇರುವುದರಿಂದ ಉಚ್ಛ ನ್ಯಾಯಾಲಯ ಜಾಮೀನು ಅರ್ಜಿಗಳನ್ನು, ನಿಷ್ಪ್ರಯೋಜಕ ಪಿಐಎಲ್​​ಗಳನ್ನು ವಿಚಾರಣೆ ನಡೆಸಬಾರದು ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiren Rijiju) ಹೇಳಿದ್ದಾರೆ. ರಾಜ್ಯಸಭೆಯಲ್ಲಿ (Rajya Sabha) ಬುಧವಾರ ಅಂಗೀಕರಿಸಲ್ಪಟ್ಟ ನ್ಯೂಡೆಲ್ಲಿ ಇಂಟರ್‌ನ್ಯಾಷನಲ್ ಆರ್ಬಿಟ್ರೇಷನ್ ಸೆಂಟರ್ ಅನ್ನು ಇಂಡಿಯಾ ಇಂಟರ್‌ನ್ಯಾಶನಲ್ ಆರ್ಬಿಟ್ರೇಷನ್ ಸೆಂಟರ್ ಎಂದು ಮರುನಾಮಕರಣ ಮಾಡುವ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ರಿಜಿಜು ಈ ಹೇಳಿಕೆ ನೀಡಿದ್ದು ವಿಪಕ್ಷಗಳು ಸಚಿವರ ಹೇಳಿಕೆ ಖಂಡಿಸಿ ವಾಗ್ದಾಳಿ ನಡೆಸಿವೆ. ನೀವು ಸೂಕ್ತವಾದ ಪ್ರಕರಣಗಳನ್ನು ಕೈಗೆತ್ತಿಕೊಳ್ಳಿ ಎಂದು ನಾನು ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ಕೆಲವು ಸಲಹೆ ನೀಡಿದ್ದೇನೆ. ಜಾಮೀನು ಅರ್ಜಿಗಳು ಅಥವಾ ನಿಷ್ಪ್ರಯೋಜಕ ಪಿಐಎಲ್‌ಗಳ ವಿಚಾರಣೆ ಸುಪ್ರೀಂಕೋರ್ಟ್​​ಗೆ ಹೆಚ್ಚಿನ ಹೊರೆಯನ್ನು ಉಂಟುಮಾಡುತ್ತದೆ ಎಂದು ರಿಜಿಜು ಹೇಳಿದ್ದಾರೆ. ಸರ್ಕಾರದ ಪಾಲು ಹೊಂದಿರುವ ವಿಚಾರಣಾ ನ್ಯಾಯಾಲಯಗಳಲ್ಲಿ 4 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ನಾವು ಹಣ, ಉತ್ತಮ ಮೂಲಸೌಕರ್ಯಗಳನ್ನು ಸೃಷ್ಟಿಸಲು ಬೆಂಬಲ ನೀಡುತ್ತೇವೆ. ಆದರೆ ಅರ್ಹರಿಗೆ ಮಾತ್ರ ನ್ಯಾಯ ಸಿಗುವಂತೆ ನೋಡಿಕೊಳ್ಳಲು ನಾವು ನ್ಯಾಯಾಂಗವನ್ನು ಕೇಳಬೇಕಾಗಿದೆ ಎಂದು ರಿಜಿಜು ಹೇಳಿದರು.

ರಿಜಿಜು ಅವರ ಈ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕರು ಖಂಡಿಸಿದ್ದಾರೆ. ಕಾನೂನು ಸಚಿವರಿಗೆ ಕಾನೂನಿಗಿಂತ ಇತರ ಕಾಳಜಿ ಜಾಸ್ತಿಯೇ ಇದೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ.ರಿಜಿಜು ಅವರು ಬಹುಶಃ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ಮೂಲ ಗ್ರಂಥವನ್ನು ಓದಿಲ್ಲ. ಜಾಮೀನು, ಜೈಲಲ್ಲ ಎಂಬುದು ನಿಯಮ. ಕಾನೂನು ಸಚಿವರು ಸುಪ್ರೀಂ ಜಾಮೀನು ಅರ್ಜಿಗಳನ್ನು ಆಲಿಸಬಾರದು ಎಂದು ಹೇಗೆ ಹೇಳಬಹುದು ಎಂದು ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಅಸೆಂಬ್ಲಿ ಚುನಾವಣೆ ನಂತರವೇ ಬಿಬಿಎಂಪಿಗೆ ಚುನಾವಣೆ! ವಾರ್ಡ್ ಮರುವಿಂಗಡಣೆ, ಮೀಸಲಾತಿ ಪರಿಷ್ಕರಣೆಗೆ ಸುಪ್ರೀಂ ಕೋರ್ಟ್ ಡೆಡ್ ಲೈನ್

ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ರಿಜಿಜು ಅವರಿಗೆ ಸ್ವಾತಂತ್ರ್ಯದ ಅರ್ಥ ಗೊತ್ತೇ ಎಂದು ಪ್ರಶ್ನಿಸಿದ್ದಾರೆ.


ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಟ್ವೀಟ್ ಮಾಡಿ, NJAC ( ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ )ಅನ್ನು ಮರೆತುಬಿಡಿ, ಸರ್ಕಾರವು ನ್ಯಾಯಾಂಗವನ್ನು ಸೂಕ್ಷ್ಮವಾಗಿ ನಿರ್ವಹಿಸಲು ಬಯಸುತ್ತದೆ: ರಜೆಗಳನ್ನು ಕಡಿತಗೊಳಿಸಿ, ಜಾಮೀನಿಗೆ ಆದ್ಯತೆ ಇಲ್ಲ,ಹೀಗೆ ಹಲವು. ಮುಂದೆ ಏನು? ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ