BBC Documentary: ಬಿಬಿಸಿ ಡಾಕ್ಯುಮೆಂಟರಿ ನಿಷೇಧ ಪ್ರಕರಣ: ಸುಪ್ರೀಂಕೋರ್ಟ್​ನಲ್ಲಿ ಇಂದು ವಿಚಾರಣೆ

|

Updated on: Feb 03, 2023 | 7:47 AM

Supreme Court To Hear Pleas on BBC Documentary: ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಸತ್ಯಾಂಶಗಳನ್ನು ದಾಖಲು ಮಾಡಲಾಗಿದೆ. ಗಲಭೆಯಲ್ಲಿ ನೊಂದವರಿಗೆ ನ್ಯಾಯ ದೊರಕಿಸಲು ಈ ಸಾಕ್ಷ್ಯ ಸಹಾಯವಾಗಬಹುದು. ಆದ್ದರಿಂದ ಬಿಬಿಸಿ ಡಾಕ್ಯುಮೆಂಟರಿಯನ್ನು ನಿಷೇಧಿಸಿದ ಸರ್ಕಾರದ ಆದೇಶಕ್ಕೆ ತಡೆ ಕೊಡಬೇಕು ಎಂದು ಸುಪ್ರೀಂಕೋರ್ಟ್​ಗೆ ಮನವಿ ಮಾಡಲಾಗಿದೆ.

BBC Documentary: ಬಿಬಿಸಿ ಡಾಕ್ಯುಮೆಂಟರಿ ನಿಷೇಧ ಪ್ರಕರಣ: ಸುಪ್ರೀಂಕೋರ್ಟ್​ನಲ್ಲಿ ಇಂದು ವಿಚಾರಣೆ
ಸುಪ್ರೀಂಕೋರ್ಟ್
Follow us on

ನವದೆಹಲಿ: ಬಿಬಿಸಿ ಡಾಕ್ಯುಮೆಂಟರಿ (BBC documentary) ನಿಷೇಧಿಸಿದ ಸರ್ಕಾರದ ಕ್ರಮದ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ (Supreme Court) ಇಂದು ಶುಕ್ರವಾರ ವಿಚಾರಣೆ ನಡೆಯಲಿದೆ. 2002ರ ಗುಜರಾತ್ ಗಲಭೆ ಘಟನೆಯನ್ನು ಆಧರಿಸಿ ಬಿಬಿಸಿ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿತ್ತು. ಸರ್ಕಾರ ಅದನ್ನು ಭಾರತದಲ್ಲಿ ಸಂಪೂರ್ಣ ನಿಷೇಧಿಸಿದೆ. ಈ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೈಗೆತ್ತಿಕೊಂಡಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂಎಂ ಸುಂದರೇಶ್ ಅವರಿರುವ ಸರ್ವೋಚ್ಚ ನ್ಯಾಯಪೀಠ ವಿಚಾರಣೆ ಆಲಿಸಲಿದೆ.

ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್, ಟಿಎಂಸಿ ನಾಯಕಿ ಮಹುವಾ ಮೋಯಿತ್ರಾ ಮತ್ತು ಹಿರಿಯ ಪತ್ರಕರ್ತ ಎನ್ ರಾಮ್ ಅವರು ಬಿಬಿಸಿ ಡಾಕ್ಯುಮೆಂಟರಿ ನಿಷೇಧ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವವರು. ಈ ಅರ್ಜಿಯ ತುರ್ತು ವಿಚಾರಣೆ ಆಗಬೇಕೆಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮುಂದೆ ಜನವರಿ 30ರಂದು ಮನವಿ ಮಾಡಲಾಗಿತ್ತು. ಅಂತೆಯೇ ಇಂದಿನಿಂದ ಈ ಅರ್ಜಿಗಳ ವಿಚಾರಣೆ ನಡೆಯಲಿದೆ.

ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಸತ್ಯಾಂಶಗಳನ್ನು ದಾಖಲು ಮಾಡಲಾಗಿದೆ. ಗಲಭೆಯಲ್ಲಿ ನೊಂದವರಿಗೆ ನ್ಯಾಯ ದೊರಕಿಸಲು ಈ ಸಾಕ್ಷ್ಯ ಸಹಾಯವಾಗಬಹುದು. ಆದ್ದರಿಂದ ಬಿಬಿಸಿ ಡಾಕ್ಯುಮೆಂಟರಿಯನ್ನು ನಿಷೇಧಿಸಿದ ಸರ್ಕಾರದ ಆದೇಶಕ್ಕೆ ತಡೆ ಕೊಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಡಾಕ್ಯುಮೆಂಟರಿ ಕುರಿತ ಪೋಸ್ಟ್​ಗಳನ್ನು ನಿರ್ಬಂಧಿಸಿದ ಕ್ರಮಗಳಿಗೂ ತಡೆ ಕೊಡಬೇಕು ಎಂಬುದು ಅರ್ಜಿದಾರರ ಮನವಿ. ಅರ್ಜಿದಾರರ ಪರ ನ್ಯಾಯವಾದಿಗಳಾದ ಎಂಎಲ್ ಶರ್ಮಾ, ಸಿಯು ಸಿಂಗ್ ಅವರು ಕೋರ್ಟ್​ನಲ್ಲಿ ವಾದ ಮಂಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Krishnaguru Eknaam Akhanda Kirtan: ಅಸ್ಸಾಂನ ಕೃಷ್ಣಗುರು ಸೇವಾಶ್ರಮದಲ್ಲಿ ನಡೆಯಲಿರುವ ಅಖಂಡ ಕೀರ್ತನೆಯಲ್ಲಿ ಪ್ರಧಾನಿ ಮೋದಿ ಭಾಗಿ

ಇದೇ ವೇಳೆ, ಬಿಬಿಸಿ ಡಾಕ್ಯುಮೆಂಟರಿ ವಿರುದ್ಧವೇ ಕೆಲವರು ಕೋರ್ಟ್​ನಲ್ಲಿ ದೂರು ದಾಖಲಿಸಿದ್ದಾರೆ. ಬಿಬಿಸಿ ಮತ್ತದರ ಉದ್ಯೋಗಿಗಳ ವಿರುದ್ಧ ತನಿಖೆ ನಡೆಯಬೇಕು ಎಂದು ಸಿಜೆಐ ಮುಂದೆ ಮನವಿ ಬಂದಿದೆ. ಇದರ ವಿಚಾರಣೆಯನ್ನು ನಿನ್ನೆ ಗುರುವಾರ ನಡೆಸಿದ ಸಿಜೆಐ, ಶುಕ್ರವಾರ ಇದರ ತುರ್ತು ವಿಚಾರಣೆಗೆ ಅನುಮತಿ ನೀಡುವ ಸಾಧ್ಯತೆ ಇದೆ. ಬೀರೇಂದ್ರ ಕುಮಾರ್ ಸಿಂಗ್ ಎಂಬ ರೈತ ಮತ್ತು ಹಿಂದೂ ಸೇನಾ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಬಿಬಿಸಿ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರು.

ಬಿಬಿಸಿ ಡಾಕ್ಯುಮೆಂಟರಿಯು ಭಾರತ ಮತ್ತು ಇಲ್ಲಿನ ಸರ್ಕಾರದ ವಿರುದ್ಧ ಷಡ್ಯಂತ್ರ ರೂಪಿಸಿದೆ. ಜಾಗತಿಕವಾಗಿ ಪ್ರಬಲವಾಗಿ ಬೆಳೆಯುತ್ತಿರುವ ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಒಂದು ಪ್ರಯತ್ನ ಇದಾಗಿದೆ ಎಂಬುದು ಈ ಅರ್ಜಿದಾರರ ಆರೋಪ. ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಪ್ರಧಾನಿ ಮೋದಿ ಅವರ ವರ್ಚಸ್ಸಿಗೆ ಕುಂದು ತರುವ ಉದ್ದೇಶ ಮಾತ್ರವಲ್ಲ, ಹಿಂದು ವಿರೋಧಿ ಷಡ್ಯಂತ್ರವೂ ಇದೆ ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಏನಿದು ಬಿಬಿಸಿ ಸಾಕ್ಷ್ಯಚಿತ್ರ?

2002ರಲ್ಲಿ ಗುಜರಾತ್​ನ ಗೋಧ್ರಾದಲ್ಲಿ ರೈಲು ಬೋಗಿಯೊಂದಕ್ಕೆ ಬೆಂಕಿ ಬಿದ್ದು ಹಲವು ಬಲಿಯಾಗಿದ್ದರು. ಆ ಘಟನೆ ಬಳಿಕ ಗುಜರಾತ್ ರಾಜ್ಯಾದ್ಯಂತ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಮಧ್ಯೆ ತೀವ್ರ ಗಲಭೆಗಳಾಗಿ ಸಾವಿರಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದರು. ಬಲಿಯಾದವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು. ಆಗ ಸಿಎಂ ಆಗಿದ್ದ ನರೇಂದ್ರ ಮೋದಿ. ಅಂದಿನ ಸರ್ಕಾರ ಗಲಭೆ ಘಟನೆಗಳನ್ನು ನಿಯಂತ್ರಿಸುವ ಬದಲು ಪೊಲೀಸರ ಕೈಕಟ್ಟಿತ್ತು. ಅಷ್ಟೇ ಅಲ್ಲ ಮುಸ್ಲಿಂ ವಿರೋಧಿ ಗಲಭೆಗಳಿಗೆ ಸರ್ಕಾರವೇ ನೆರವು ನೀಡಿತ್ತು ಎಂಬ ಆರೋಪಗಳಿವೆ. ಇದನ್ನೇ ಆಧಾರವಾಗಿಟ್ಟುಕೊಂಡು ಬಿಬಿಸಿಯು ಇಂಡಿಯಾ: ಮೋದಿ ಕ್ವಶ್ಚನ್ ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿದೆ.

ಇದನ್ನೂ ಓದಿ: India Rain Updates: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಕೇರಳ, ತಮಿಳುನಾಡಿನಲ್ಲಿ ಭಾರಿ ಮಳೆ

ಗುಜರಾತ್ ಗಲಭೆಗಳಲ್ಲಿ ಸರ್ಕಾರಿ ಯಂತ್ರದ ಪಾತ್ರದ ಕುರಿತು ಭಾರತೀಯ ನ್ಯಾಯಾಲಯಗಳಲ್ಲಿ ಈ ಹಿಂದೆ ಬಹಳಷ್ಟು ವಿಚಾರಣೆಗಳು ನಡೆದಿವೆ. ಸಿಎಂ ನರೇಂದ್ರ ಮೋದಿ ಅವರು ಗಲಭೆಗೆ ಕುಮ್ಮಕ್ಕು ಕೊಟ್ಟರೆಂಬ ಆರೋಪಕ್ಕೆ ಯಾವುದೇ ಸರಿಯಾದ ಸಾಕ್ಷ್ಯಾಧಾರ ಇಲ್ಲ ಎಂದು ಸುಪ್ರೀಂಕೋರ್ಟ್ ಕೂಡ ಕ್ಲೀನ್ ಚಿಟ್ ಕೊಟ್ಟಿದೆ. ಆದಾಗ್ಯೂ ಬಿಬಿಸಿ ಡಾಕ್ಯುಮೆಂಟರಿಯಲ್ಲಿ ನರೇಂದ್ರ ಮೋದಿ ಬಗ್ಗೆ ಗುರುತರ ಆರೋಪ ಮಾಡಿ ತಪ್ಪು ಅಭಿಪ್ರಾಯವನ್ನು ಬಿತ್ತುವ ಪ್ರಯತ್ನವಾಗಿದೆ ಎಂಬುದು ಸರ್ಕಾರದ ಕ್ರಮವನ್ನು ಸಮರ್ಥಿಸುವವರ ವಾದವಾಗಿದೆ.

ಎರಡು ಭಾಗಗಳಿರುವ ಈ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಫೇಸ್​ಬುಕ್, ಟ್ಟಿಟ್ಟರ್ ಇತ್ಯಾದಿ ಜಾಲತಾಣಗಳಲ್ಲಿ ಈ ಸಾಕ್ಷ್ಯಚಿತ್ರದ ಪೋಸ್ಟ್ ಅನ್ನು ಅಳಿಸಲಾಗಿದೆ.