
ನಾಸಿಕ್, ಏಪ್ರಿಲ್ 16: ನಾಸಿಕ್‌ನ ಟಿಸಿಎಸ್ (TCS) ಶಾಖೆಯಲ್ಲಿ ಬಯಲಾಗಿರುವ ಈ ಘಟನೆಗಳು ಕಾರ್ಪೊರೇಟ್ ಜಗತ್ತನ್ನೇ ಬೆಚ್ಚಿಬೀಳಿಸಿವೆ. ಕೇವಲ ಕೆಲಸದ ಒತ್ತಡದ ಬಗ್ಗೆ ಕೇಳುತ್ತಿದ್ದ ಐಟಿ ಕ್ಷೇತ್ರದಲ್ಲಿ, ಈಗ ಮತಾಂತರದ ಸಂಚು ಮತ್ತು ನೈತಿಕ ಅಧಃಪತನದ ಆಘಾತಕಾರಿ ಕಥೆಗಳು ಹೊರಬರುತ್ತಿವೆ. ಒಂದೆಡೆ ಮಹಿಳಾ ಉದ್ಯೋಗಿಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಟಿಸಿಎಸ್‌ನ ನಾಸಿಕ್ ಶಾಖೆಯ ಪುರುಷ ಉದ್ಯೋಗಿಯೊಬ್ಬರು ತಮಗಾದ ಅಮಾನವೀಯ ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇದು ಕೇವಲ ಕಚೇರಿಯ ಕಿರುಕುಳವಾಗಿರದೆ, ಒಬ್ಬ ವ್ಯಕ್ತಿಯ ಧರ್ಮ, ವೈಯಕ್ತಿಕ ಜೀವನ ಮತ್ತು ಘನತೆಯನ್ನು ಹತ್ತಿಕ್ಕುವ ವ್ಯವಸ್ಥಿತ ಸಂಚಿನಂತೆ ಕಾಣುತ್ತಿದೆ.
ನೈತಿಕತೆಯ ಎಲ್ಲ ಮಿತಿ ಮೀರಿದ ಬಾಸ್
ಇಂಡಿಯಾ ಟುಡೇ ಜೊತೆ ಮಾತನಾಡಿದ ಸಂತ್ರಸ್ತ ಉದ್ಯೋಗಿ, ಟೀಮ್ ಲೀಡರ್ ತೌಸಿಫ್ ಅತ್ತರ್ ಮತ್ತು ಸಹೋದ್ಯೋಗಿ ಡ್ಯಾನಿಶ್ ಶೇಖ್ ನೀಡಿದ ಕಿರುಕುಳದ ಬಗ್ಗೆ ವಿವರಿಸಿದ್ದಾರೆ. 2022ರಲ್ಲಿ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಆರಂಭವಾದ ಈ ಕಿರುಕುಳ 2026ರ ಮಾರ್ಚ್‌ವರೆಗೆ ಮುಂದುವರೆದಿದೆ.
ಸಂತ್ರಸ್ತ ಉದ್ಯೋಗಿ ಮತ್ತು ಅವರ ಪತ್ನಿಗೆ ಹಲವು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಈ ಸೂಕ್ಷ್ಮ ವಿಷಯವನ್ನೇ ಗುರಿಯಾಗಿಸಿಕೊಂಡ ವ್ಯಕ್ತಿ, ವೈದ್ಯಕೀಯ ಚಿಕಿತ್ಸೆಯಿಂದ ಮಗು ಪಡೆಯಲು ಸಾಧ್ಯವಿಲ್ಲ, ಮಗು ಬೇಕಾದರೆ ನಿನ್ನ ಹೆಂಡತಿಯನ್ನು ನನ್ನ ಬಳಿಗೆ ಕಳುಹಿಸು ಎಂದು ವಿಕೃತವಾಗಿ ಹೇಳಿದ್ದಾರೆಂದು ಕಣ್ಣೀರಿಟ್ಟಿದ್ದಾರೆ.
ಮತ್ತಷ್ಟು ಓದಿ:
ಟಿಸಿಎಸ್ ಮತಾಂತರ, ಲೈಂಗಿಕ ಕಿರುಕುಳ ಪ್ರಕರಣ; ಕಠಿಣ ತನಿಖೆಗೆ ಟಾಟಾ ಕಂಪನಿ ಆದೇಶ
ಬಲವಂತದ ನಮಾಜ್ ಮತ್ತು ಮತಾಂತರದ ಸಂಚು
ಕಟ್ಟಾ ಹಿಂದೂ ನಂಬಿಕೆಯುಳ್ಳ ಈ ಉದ್ಯೋಗಿ ರುದ್ರಾಕ್ಷಿ ಮಾಲೆ ಧರಿಸುವುದನ್ನೇ ಆತ ವಿವಾದ ಮಾಡಿದ್ದ, 2023ರ ಈದ್ ಸಂದರ್ಭದಲ್ಲಿ ಸಂತ್ರಸ್ತನನ್ನು ಮನೆಗೆ ಕರೆದೊಯ್ದು, ಬಲವಂತವಾಗಿ ತಲೆಗೆ ಟೋಪಿ ಹಾಕಿ, ನಮಾಜ್ ಮಾಡಿಸಿ ಆ ಫೋಟೋಗಳನ್ನು ಕಂಪನಿಯ ಅಧಿಕೃತ ಗ್ರೂಪ್‌ಗಳಲ್ಲಿ ಹಂಚಿ ಅವಮಾನಿಸಲಾಗಿತ್ತು.
ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡುವುದು, ಮಾಂಸಾಹಾರ ಸೇವಿಸಲು ಒತ್ತಾಯಿಸುವುದು ಮತ್ತು ಕಲ್ಮಾ ಪಠಿಸುವಂತೆ ಪೀಡಿಸುವುದು ನಿರಂತರವಾಗಿ ನಡೆಯುತ್ತಿತ್ತು. ಸಂತ್ರಸ್ತನ ತಂದೆಗೆ ಪಾರ್ಶ್ವವಾಯು ಆದಾಗ, ನಿಮ್ಮ ತಂದೆ ಇಸ್ಲಾಂಗೆ ಮತಾಂತರಗೊಂಡರೆ ಮಾತ್ರ ಚೇತರಿಸಿಕೊಳ್ಳುತ್ತಾರೆ ಎಂದು ಆರೋಪಿ ಹೇಳಿದ್ದ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಕೆಲಸದ ಸ್ಥಳವೇ ಯುದ್ಧಭೂಮಿ
ಕೇವಲ ಮಾನಸಿಕವಲ್ಲದೆ ದೈಹಿಕವಾಗಿಯೂ ಸಂತ್ರಸ್ತನನ್ನು ಕಾಡಲಾಗಿತ್ತು. ಸಂತ್ರಸ್ತ ಪ್ರತಿಭಟಿಸಿದಾಗ ತೌಸಿಫ್ ಅತ್ತರ್ ಆತನ ಮೇಲೆ ಟೇಬಲ್ ಫ್ಯಾನ್ ಎಸೆದು ಕೊಲ್ಲುವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಸಂತ್ರಸ್ತನನ್ನು ಕೆಲಸದಿಂದ ತೆಗೆಯಲು ಪ್ರಧಾನ ಕಚೇರಿಗೆ ಸುಳ್ಳು ದೂರುಗಳನ್ನು ನೀಡುವ ಮೂಲಕ ಆತನ ವೃತ್ತಿಜೀವನವನ್ನೇ ಹಾಳು ಮಾಡಲು ಈ ತಂಡ ಯತ್ನಿಸಿತ್ತು.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೌಸಿಫ್ ಅತ್ತರ್, ಡ್ಯಾನಿಶ್ ಶೇಖ್ ಮತ್ತು ಮಾನವ ಸಂಪನ್ಮೂಲ (HR) ವಿಭಾಗದ ನಿದಾ ಖಾನ್ ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದಾರೆ. ಈ ತಂಡವು ಕೇವಲ ಈತನನ್ನು ಮಾತ್ರವಲ್ಲದೆ, ಮಹಿಳಾ ಉದ್ಯೋಗಿಗಳಿಗೂ ಲೈಂಗಿಕ ಕಿರುಕುಳ ನೀಡಿ ಮದುವೆಯಾಗಲು ಪೀಡಿಸುತ್ತಿತ್ತು ಎಂಬುದು ಎಫ್‌ಐಆರ್‌ನಿಂದ ತಿಳಿದುಬಂದಿದೆ.
ಈ ಘಟನೆಯು ಕಾರ್ಪೊರೇಟ್ ವಲಯದಲ್ಲಿ ಉದ್ಯೋಗಿಗಳ ಸುರಕ್ಷತೆ ಮತ್ತು ಅಲ್ಲಿ ನಡೆಯುತ್ತಿರುವ ಧಾರ್ಮಿಕ ಪ್ರಚೋದನೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ದೇಶದ ಪ್ರತಿಷ್ಠಿತ ಐಟಿ ಸಂಸ್ಥೆಯೊಂದರ ಒಳಗೆ ಇಂತಹ ಘಟನೆಗಳು ವರ್ಷಗಟ್ಟಲೆ ನಡೆಯುತ್ತಿದ್ದರೂ ಮ್ಯಾನೇಜ್‌ಮೆಂಟ್ ಗಮನಕ್ಕೆ ಬರದಿರುವುದು ಆಶ್ಚರ್ಯದ ಸಂಗತಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:39 am, Thu, 16 April 26