ದೆಹಲಿ: ಇದೂ ಒಂಥರಾ ಹನಿಟ್ರ್ಯಾಪ್! ಯಾಕಂದ್ರೆ ಜೇನುತುಪ್ಪ ಅಂದರೆ ಸಾಕು ಎಲ್ಲರಿಗೂ ಇಷ್ಟವೇ! ಎಲ್ಲರೂ ಜೇನುತುಪ್ಪದ ಮೋಹದ ಬಲೆಗೆ ಬೀಳುವವರೇ! ಬರಿ ಬಾಯಿರುಚಿಗಷ್ಟೇ ಅಲ್ಲದೆ, ವೈದ್ಯಕೀಯ ಕಾರಣಕ್ಕೂ ವ್ಯಾಪಕವಾಗಿ ಬಳಕೆಯಾಗುತ್ತದೆ.
ಇಷ್ಟೊಂದು ಮಹತ್ವ ಹೊಂದಿರುವ ಈ ಸಿಹಿಯಾದ ಜೇನುತುಪ್ಪದ ಬಗ್ಗೆ ಇದೀಗ ಆತಂಕಕಾರಿ ಕಹಿ ವಿಚಾರವೊಂದು ಹೊರಬಿದ್ದಿದೆ. ಹಲವು ಪ್ರತಿಷ್ಠಿತ ಕಂಪನಿಗಳು ಮಾರಾಟ ಮಾಡುತ್ತಿರುವ ಜೇನುತುಪ್ಪದಲ್ಲಿ ಅಪಾರ ಪ್ರಮಾಣದ ಕಲಬೆರಕೆಯಿದೆ ಎಂದು ಲ್ಯಾಬ್ ಟೆಸ್ಟ್ ವರದಿ ಬಹಿರಂಗಪಡಿಸಿದೆ.
ರಸ್ತೆ ಬದಿಯಲ್ಲೋ.. ಲೇಬಲ್ ಇಲ್ಲದ ಬಾಕ್ಸ್ಗಳಲ್ಲೋ ಸಿಗುವ ಜೇನುತುಪ್ಪ ಶುದ್ಧವಾಗಿ ಇರುವುದಿಲ್ಲ ಎಂಬುದು ಅನೇಕರ ನಂಬಿಕೆ. ಅದು ಹೌದಾಗಿರಬಹುದು. ಆದರೆ ಬ್ರ್ಯಾಂಡೆಡ್ ಕಂಪನಿಗಳಾದ ಡಾಬರ್, ಪತಂಜಲಿ, ಆಪಿಸ್ ಹಿಮಾಲಯನ್, ಬೈದ್ಯನಾಥ್ ಜೇನುತುಪ್ಪ, ಹಿಟ್ಕಾರಿ, ಝಂಡು ಪ್ಯೂರ್ ಜೇನುತುಪ್ಪವೂ ಶುದ್ಧವಿಲ್ಲವಂತೆ. ಈ ಎಲ್ಲದರಲ್ಲೂ ಅಪಾರ ಕಲಬೆರಕೆ ಇರುವುದು ಜರ್ಮನ್ ಲ್ಯಾಬ್ ಟೆಸ್ಟ್ನಲ್ಲಿ ಪತ್ತೆಯಾಗಿದ್ದು, ಆರೋಗ್ಯಕ್ಕೆ ಈ ಜೇನುತುಪ್ಪ ಸುರಕ್ಷಿತವಲ್ಲ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ಹೇಳಿದೆ.
ಸಕ್ಕರೆಪಾಕ ಕಲಬೆರಕೆ!
ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಹುತೇಕ ಪ್ರತಿಷ್ಠಿತ ಕಂಪನಿಗಳ ಜೇನುತುಪ್ಪದಲ್ಲಿ ಸಕ್ಕರೆ ಪಾಕ ಇರುವುದು ಪತ್ತೆಯಾಗಿದೆ. ಜರ್ಮನ್ ಮತ್ತು ಭಾರತದ ಪ್ರಯೋಗಾಲಯದಲ್ಲಿ ನಡೆದ ಜೇನುತುಪ್ಪ ಪರಿಶೀಲನೆಯ ವರದಿಯ ತನಿಖೆ ನಡೆಸಿದಾಗ ಭಾರತದ ಬಹುತೇಕ ಕಂಪನಿಗಳ ಜೇನುತುಪ್ಪದಲ್ಲಿ ಸಕ್ಕರೆ ಪಾಕದ ಅಂಶ ಇರುವುದು ಗೊತ್ತಾಗಿದೆ.
ಶೇ. 77ರಷ್ಟು ಮಾದರಿಯಲ್ಲಿ ಸಕ್ಕರೆ ಪಾಕ ಕಾಣಿಸಿಕೊಂಡಿದೆ. ಒಟ್ಟು 13 ಬ್ರ್ಯಾಂಡ್ಗಳಲ್ಲಿ ಮೂರು ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ಟ್ರೋಸ್ಕೋಪಿ ಟೆಸ್ಟ್ನಲ್ಲಿ ಉತ್ತೀರ್ಣವಾಗಿವೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರದ ಮಹಾನಿರ್ದೇಶಕರಾದ ಸುನೀತಾ ನಾರಾಯಣ್ ತಿಳಿಸಿದ್ದಾರೆ.
ಚೀನಾದ್ದಂತೂ ಬೇಡ್ವೇ ಬೇಡ
ಭಾರತದಲ್ಲಿ ಚಾಲ್ತಿಯಲ್ಲಿರುವ ಲ್ಯಾಬ್ ಟೆಸ್ಟ್ನಲ್ಲಿ ಜೇನುತುಪ್ಪದ ಶುದ್ಧತೆಯನ್ನು ಅಳೆಯಲು ಸಾಧ್ಯವಿಲ್ಲ. ಹಾಗಾಗಿ ಚೀನಾ ಕಂಪನಿಗಳು ಇಲ್ಲಿನ ಮಾನದಂಡ ಮಟ್ಟ ಮೀರಲು ಸಕ್ಕರೆ ಪಾಕವನ್ನು ಕಲಬೆರಕೆ ಮಾಡುತ್ತಿದ್ದಾರೆ ಎಂದು ಸಿಎಸ್ಇ ತಿಳಿಸಿದೆ.
ಕೊವಿಡ್ ಸೋಂಕಿನ ಛಾಯೆಯೂ ಇದೆ ಎಚ್ಚರಾ!
ಭಾರತೀಯರು ಜೇನುತುಪ್ಪವನ್ನು ಅನೇಕ ಕಾರಣಕ್ಕೆ ಬಳಸುತ್ತಾರೆ. ಪೂಜೆಯಲ್ಲೂ ಹೆಚ್ಚಿನ ಮಹತ್ವ ಇದೆ. ಅದರಲ್ಲೂ ಹೆಚ್ಚಾಗಿ ಆರೋಗ್ಯಕ್ಕಾಗಿಯೇ ಉಪಯೋಗಿಸುತ್ತಾರೆ. ಇಂಥ ಒಳ್ಳೊಳ್ಳೆ ಕಂಪನಿಗಳ ಮೇಲೆ ನಂಬಿಕೆಯಿಟ್ಟಿದ್ದಾರೆ. ಆದರೆ ಹೀಗೆ ನಿರಂತರವಾಗಿ ಕಲಬೆರಕೆ ಜೇನುತುಪ್ಪ ಸೇವನೆ ಅತ್ಯಂತ ಅಪಾಯಕಾರಿ ಎಂದೂ ವರದಿಯಲ್ಲಿ ಉಲ್ಲೇಖಿಸಿದೆ. ಸಕ್ಕರೆ ಅಂಶವಿರುವ ಜೇನುತುಪ್ಪ ದೇಹಕ್ಕೆ ಹೋದರೆ, ತೂಕ ಹೆಚ್ಚಾಗುವುದು, ಬೊಜ್ಜಿನಂತಹ ಸಮಸ್ಯೆ ಬರುತ್ತದೆ. ರೋಗನಿರೋಧಕ ಶಕ್ತಿ ಕುಂದುವ ಮೂಲಕ ಕೊವಿಡ್ ಸೋಂಕಿಗೆ ಬಹುಬೇಗನೇ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದೆ.
Published On - 5:30 pm, Wed, 2 December 20