ನವದೆಹಲಿ: ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್ ಅಥವಾ ಡಿಜಿಟಲ್ ವೈಯಕ್ತಿಕ ದಾಖಲೆಗಳ ಸಂರಕ್ಷಣಾ ಮಸೂದೆ 2023 ರ (DPDP Bill 2023) ಕರಡು ಪ್ರತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವ ನಿರೀಕ್ಷೆ ಇದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ. ಮಸೂದೆಯಲ್ಲಿನ ನಿಯಮಗಳ ಉಲ್ಲಂಘನೆಯ ಪ್ರತಿ ನಿದರ್ಶನಕ್ಕೂ 250 ಕೋಟಿ ರೂಪಾಯಿಗಳವರೆಗೆ ದಂಡ ವಿಧಿಸುವ ಬಗ್ಗೆ ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಮಸೂದೆಯ ಕರಡನ್ನು ಸಂಪುಟವು ಅನುಮೋದಿಸಿದೆ. ಮುಂಬರುವ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20 ರಿಂದ ಆಗಸ್ಟ್ 11 ರವರೆಗೆ ನಡೆಯಲಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಹಿಂದೆ ಮಾಹಿತಿಗಾಗಿ ಬಿಡುಗಡೆ ಮಾಡಿದ್ದ ಕೊನೆಯ ಕರಡಿನಲ್ಲಿದ್ದ ಬಹುತೇಕ ಎಲ್ಲಾ ನಿಬಂಧನೆಗಳನ್ನು ಮಸೂದೆ ಒಳಗೊಂಡಿದೆ ಎಂದು ಮೂಲಗಳು ಹೇಳಿವೆ.
ಪ್ರಸ್ತಾವಿತ ಮಸೂದೆಯಲ್ಲಿ ಸರ್ಕಾರಿ ಘಟಕಗಳಿಗೆ ಕೂಡ ವಿನಾಯಿತಿ ನೀಡಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ವಿವಾದಗಳ ಸಂದರ್ಭದಲ್ಲಿ, ಡಾಟಾ ಸಂರಕ್ಷಣಾ ಮಂಡಳಿಯು ನಿರ್ಧಾರ ಕೈಗೊಳ್ಳಲಿದೆ. ನಾಗರಿಕರು ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸುವ ಮೂಲಕ ಪರಿಹಾರವನ್ನು ಪಡೆದುಕೊಳ್ಳುವ ಹಕ್ಕನ್ನೂ ಹೊಂದಿರುತ್ತಾರೆ. ಈ ಮಸೂದೆಯಲ್ಲಿ ಇನ್ನಷ್ಟು ವಿಷಯಗಳ ಸೇರ್ಪಡೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಕಾನೂನು ಜಾರಿಗೆ ಬಂದ ನಂತರ ವ್ಯಕ್ತಿಗಳು ತಮ್ಮ ಡಾಟಾ ಸಂಗ್ರಹಣೆ ಮತ್ತು ಸಂಸ್ಕರಣೆಯ ಬಗ್ಗೆ ವಿವರಗಳನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ