
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ಖಾಲಿ ಇರುವ 80 ಅಸಿಸ್ಟೆಂಟ್ ಪ್ರಾವಿಡೆಂಟ್ ಫಂಡ್ ಕಮಿಷನರ್ (APFC) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು UPSC ಅಧಿಕೃತ ವೆಬ್‌ಸೈಟ್‌ಗಳಾದ upsc.gov.in ಹಾಗೂ upsconline.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 11 ಕೊನೆಯ ದಿನಾಂಕವಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಅಥವಾ ಅದಕ್ಕೆ ತತ್ಸಮಾನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು. ವಯೋಮಿತಿಗೆ ಸಂಬಂಧಿಸಿದಂತೆ, ಸಾಮಾನ್ಯ (UR) ಮತ್ತು EWS ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ನಿಗದಿಪಡಿಸಲಾಗಿದೆ. ಇತರ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ 40 ವರ್ಷಗಳವರೆಗೆ ವಯೋಸಡಿಲಿಕೆ ಇರುತ್ತದೆ.
ಇದನ್ನೂ ಓದಿ: 15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ; ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ
ಅಭ್ಯರ್ಥಿಗಳ ಆಯ್ಕೆಯನ್ನು ಪೆನ್ ಮತ್ತು ಪೇಪರ್ ಆಧಾರಿತ ನೇಮಕಾತಿ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನಡೆಸಲಾಗುತ್ತದೆ. ಈ ಪರೀಕ್ಷೆಯು ಒಟ್ಟು 2 ಗಂಟೆಗಳ ಅವಧಿಯದ್ದಾಗಿದ್ದು, ಬಹುಆಯ್ಕೆ ಮಾದರಿಯ (MCQ) ಆಬ್ಜೆಕ್ಟಿವ್ ಪ್ರಶ್ನೆಗಳನ್ನು ಹೊಂದಿರುತ್ತದೆ. ಪರೀಕ್ಷೆಯ ಪ್ರಶ್ನೆಪತ್ರಿಕೆಯು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿರುತ್ತದೆ. ಈ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳಿದ್ದು (Negative Marking), ಪ್ರತಿ ತಪ್ಪು ಉತ್ತರಕ್ಕೆ ಆ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳಲ್ಲಿ ಮೂರನೇ ಒಂದು ಭಾಗವನ್ನು (1/3rd) ಕಳೆಯಲಾಗುತ್ತದೆ. ಉತ್ತರಿಸದೆ ಬಿಟ್ಟ ಪ್ರಶ್ನೆಗಳಿಗೆ ಯಾವುದೇ ಅಂಕ ಕಡಿತಗೊಳಿಸುವುದಿಲ್ಲ.
ಅರ್ಜಿ ಸಲ್ಲಿಸುವ ಸಾಮಾನ್ಯ, OBC ಮತ್ತು EWS ವರ್ಗದ ಪುರುಷ ಅಭ್ಯರ್ಥಿಗಳು 25 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಶುಲ್ಕವನ್ನು ವೀಸಾ, ಮಾಸ್ಟರ್, ರೂಪೇ ಡೆಬಿಟ್/ಕ್ರೆಡಿಟ್ ಕಾರ್ಡ್, ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಕೊನೆಯ ದಿನಾಂಕದೊಳಗೆ ಪಾವತಿಸಬಹುದು. ಮಹಿಳೆಯರು, SC, ST ಹಾಗೂ ವಿಕಲಚೇತನ (PwBD) ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಇತರ ವರ್ಗದ ಪುರುಷ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ವಿನಾಯಿತಿ ಲಭ್ಯವಿರುವುದಿಲ್ಲ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ