ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆ (West Bengal Panchayat Election) ವೇಳೆ ವ್ಯಾಪಕ ಹಿಂಸಾಚಾರ ನಡೆದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಪಡೆಗಳು ವಿಫಲವಾಗಿವೆ ಎಂದು ತೃಣಮೂಲ ಕಾಂಗ್ರೆಸ್ (TMC) ಆರೋಪಿಸಿದೆ. ಕೂಚ್ ಬೆಹಾರ್ ಜಿಲ್ಲೆಯ ದಿನಾಟಾದಲ್ಲಿ, ಬಾರಾವಿಟಾ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತಪೆಟ್ಟಿಗೆಗಳನ್ನು ಧ್ವಂಸಗೊಳಿಸಿ ಮತಪತ್ರಗಳಿಗೆ ಬೆಂಕಿ ಹಚ್ಚಲಾಯಿತು. ಬಾರ್ನಾಚಿನಾ ಪ್ರದೇಶದ ಮತ್ತೊಂದು ಮತಗಟ್ಟೆಯಲ್ಲಿ ಸ್ಥಳೀಯರು ಫೇಕ್ ಮತದಾನ ಮಾಡಲಾಗಿದೆ ಎಂದು ಆರೋಪಿಸಿ ಮತಯಂತ್ರಗಳ ಜತೆಗೆ ಮತಪೆಟ್ಟಿಗೆಗೆ ಬೆಂಕಿ ಹಚ್ಚಿದ್ದಾರೆ. ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ಒತ್ತಾಯಿಸಿ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆಗಳೂ ನಡೆದಿವೆ.
ನಂದಿಗ್ರಾಮದಲ್ಲಿ ಮಹಿಳಾ ಮತದಾರರು ತಮ್ಮ ಕೈಯಲ್ಲಿ ವಿಷದ ಬಾಟಲಿಗಳೊಂದಿಗೆ ಪೊಲೀಸ್ ಅಧಿಕಾರಿಯನ್ನು ಘೇರಾವ್ ಮಾಡಿ, ಪ್ರದೇಶದಲ್ಲಿ ಕೇಂದ್ರ ಪಡೆ ನಿಯೋಜಿಸಬೇಕೆಂದು ಒತ್ತಾಯಿಸಿದರು. ಇದೆಲ್ಲದರ ನಡುವೆ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಉತ್ತರ 24 ಪರಗಣದ ವಿವಿಧ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡು ಹಿಂಸಾಚಾರದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿ ದೂರುಗಳನ್ನು ಆಲಿಸಿದ್ದಾರೆ.
ಶನಿವಾರ ನಡೆದ ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರದ ಬಗ್ಗೆ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, “ಕೊಲೆಗಳನ್ನು” ಅಧಿಕಾರದ ಗ್ಯಾರಂಟಿ ಎಂದು ಮಮತಾ ನೇತೃತ್ವದ ಪಕ್ಷ ಭಾವಿಸುತ್ತದೆ. ರಾಜ್ಯದ “ಬಾಂಬ್ ಸಂಸ್ಕೃತಿ” ಭಾರತ ಮತ್ತು ಅದರ ಪ್ರಜಾಪ್ರಭುತ್ವವನ್ನು ವಿಶ್ವದಾದ್ಯಂತ ಅವಮಾನಕ್ಕೀಡಾಗುವಂತೆ ಮಾಡಿದೆ. ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ , ಕೊಲೆ ಮತ್ತು ಅವ್ಯವಸ್ಥೆಗಳಿಲ್ಲದೆ ಮಮತಾ ಬ್ಯಾನರ್ಜಿಗೆ ರಾಜ್ಯದಲ್ಲಿ ಚುನಾವಣೆ ನಡೆಸಲು ಬರುವುದಿಲ್ಲ. ಪಂಚಾಯತ್ ಚುನಾವಣೆಯಲ್ಲಿ ತನ್ನ ಪಕ್ಷದ ಪ್ರಾಬಲ್ಯವನ್ನು ಸ್ಥಾಪಿಸಲು ಅವರು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ನೋಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: Video Viral: ಮತಗಟ್ಟೆಯಿಂದ ಮತ ಪೆಟ್ಟಿಗೆ ಕದ್ದು ಓಡಿಹೋದ ವ್ಯಕ್ತಿ; ವಿಡಿಯೋ ಇಲ್ಲಿದೆ ನೋಡಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಚುನಾವಣೆ ಸಮಯದಲ್ಲಿ 12 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು. ಮತಯಂತ್ರಗಳಲ್ಲಿ ಇವಿಎಂಗಳ ಬದಲಿಗೆ ಮತಪೆಟ್ಟಿಗೆಗಳ ಬಳಕೆಯನ್ನು ಕಟುವಾಗಿ ಟೀಕಿಸಿದ ಅವರು, ಗೂಂಡಾಗಳು ಈ ಪೆಟ್ಟಿಗೆಗಳೊಂದಿಗೆ ಓಡಿಹೋಗುತ್ತಿರುವ ದೃಶ್ಯವನ್ನು ಉಲ್ಲೇಖಿಸಿ ಅಧಿಕಾರ ಸ್ಥಾಪಿಸಲು ಜನರನ್ನು ಕೊಲ್ಲಲಾಗುತ್ತಿದೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:07 pm, Sat, 8 July 23