ದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಸ್ಥಳೀಯ ಹಂತಕ್ಕೆ (Endemicity) ತಲುಪುತ್ತಿದೆ. ಅಂದರೆ, ಇಲ್ಲಿ ಇನ್ನು ಕಡಿಮೆ ಅಥವಾ ಸಾಧಾರಣ ವೈರಾಣು ಹರಡುವಿಕೆ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (World Health Organization- WHO) ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಯಾವಾಗ ಜನರು ವೈರಾಣುವಿನ ಜೊತೆಗೆ ಬದುಕಲು ಕಲಿಯುತ್ತಾರೋ ಆ ಹಂತವನ್ನು ಎಂಡೆಮಿಕ್ ಸ್ಟೇಜ್ ಎಂದು ಕರೆಯುತ್ತಾರೆ. ವೈರಾಣು ಹರಡುವಿಕೆ ತೀವ್ರವಾಗಿ ಇದ್ದಾಗ ಅದನ್ನು ಎಪಿಡೆಮಿಕ್ ಹಂತ ಎಂದು ಹೇಳುತ್ತಾರೆ. ಸೌಮ್ಯ ಸ್ವಾಮಿನಾಥನ್ ಹೇಳುವಂತೆ ಭಾರತ ಈಗ ಎಂಡೆಮಿಕ್ ಹಂತದಲ್ಲಿ ಇದೆ. ಮತ್ತು ಕೊವಿಡ್19 ಸ್ಥಳೀಯ ಜಾಡ್ಯವಾಗಿ ಇರಲಿದೆ.
ದಿ ವೈರ್ ಸುದ್ದಿಸಂಸ್ಥೆಯ ಜೊತೆಗೆ ಸಂದರ್ಶನದಲ್ಲಿ ಸೌಮ್ಯ ಸ್ವಾಮಿನಾಥನ್ ಮಾತನಾಡಿದ್ದಾರೆ. ಭಾರತದ ಜನಸಂಖ್ಯೆಯ ವೈವಿಧ್ಯತೆ ಮತ್ತು ರೋಗನಿರೋಧಕ ಶಕ್ತಿಯ ಪ್ರಮಾಣ ಗಮನಿಸಿದರೆ ದೇಶದ ಬೇರೆಬೇರೆ ಭಾಗಗಳಲ್ಲಿ ಪರಿಸ್ಥಿತಿಯು ಈಗಿರುವಂತೆ ಏರಿಳಿತಗಳ ಜೊತೆಗೆ ಮುಂದುವರಿಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾವು ಬಹುಶಃ ಎಂಡೆಮಿಸಿಟಿ ಹಂತಕ್ಕೆ ತಲುಪುತ್ತಿದ್ದೇವೆ. ಅಂದರೆ ಇಲ್ಲಿ ಕಡಿಮೆಯಿಂದ ಸಾಧಾರಣ ಹಂತದ ವೈರಾಣು ಹರಡುವಿಕೆ ಇರುತ್ತದೆ. ಆದರೆ, ಕಳೆದ ಎರಡು ತಿಂಗಳ ಹಿಂದೆ ಕಂಡಂತೆ ಬೃಹತ್ ಏರಿಕೆಯನ್ನು ನಾವು ಕಾಣುವುದಿಲ್ಲ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಭಾರತದಲ್ಲಿ ವಿವಿಧ ಪ್ರದೇಶಗಳಲ್ಲಿ, ವಿವಿಧ ಜನಸಂಖ್ಯೆಯ ಭಾಗದಲ್ಲಿ ಪ್ರತಿರೋಧಕ ಶಕ್ತಿಯ ಪ್ರಮಾಣ (Immunity Status) ಭಿನ್ನವಾಗಿದೆ. ಹಾಗಾಗಿ ಭಾರತದಲ್ಲಿ ಇನ್ನೂ ಕೆಲ ಕಾಲದವರೆಗೆ ಹೀಗೆ ಕೊವಿಡ್ ಪ್ರಕರಣಗಳಲ್ಲಿ ಏರಿಳಿತಗಳು ಕಂಡುಬರಬಹುದು. ಕೆಲವು ಕಡೆ ಮೊದಲ ಅಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಇನ್ನು ಕೆಲವೆಡೆ ಎರಡನೇ ಅಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿತ್ತು. ಮೊದಲ ಮತ್ತು ಎರಡನೇ ಅಲೆಯಲ್ಲಿ ಕೊರೊನಾದಿಂದ ಕಡಿಮೆ ಪರಿಣಾಮ ಹೊಂದಿದವರು ಅಥವಾ ಲಸಿಕೆ ನೀಡಿಕೆ ಕಡಿಮೆ ಇರುವಲ್ಲಿ ಮೂರನೇ ಅಲೆಯಲ್ಲಿ ಕೊರೊನಾ ಏರಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ.
2022ರ ಅಂತ್ಯದ ವೇಳೆಗೆ ದೇಶದಲ್ಲಿ ಲಸಿಕೆ ನೀಡಿಕೆ ಪ್ರಮಾಣ ಉತ್ತಮಗೊಳ್ಳುವ ಮೂಲಕ, ಅಂದರೆ ಸುಮಾರು ಶೇಕಡಾ 70ರಷ್ಟು ಪೂರ್ಣಗೊಳಿಸುವುದರ ಮೂಲಕ ನಾವು ಮತ್ತೆ ಮೊದಲಿನ ಜೀವನಶೈಲಿಗೆ ಬರಬಹುದು. ನಾವು ಮತ್ತೆ ನಾರ್ಮಲ್ ಸ್ಥಿತಿಗೆ ಬಂದಿರುತ್ತೇವೆ ಎಂದು ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ.
ಕೊರೊನಾ ಲಸಿಕೆ ಕೊವ್ಯಾಕ್ಸಿನ್ ಬಗ್ಗೆ ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಗುಂಪು ಕೊವ್ಯಾಕ್ಸಿನ್ಗೆ ಸುಮಾರು ಸಪ್ಟಂಬರ್ ಮಧ್ಯ ಅವಧಿಯಲ್ಲಿ ಪೂರ್ಣ ಅನುಮತಿ ದೊರೆಯಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎರಡು ವರ್ಷದಿಂದ ಕೊರೊನಾ ಕರಿನೆರಳು; ಗಣೇಶ ಮೂರ್ತಿ ತಯಾರಕರು ಕಂಗಾಲು
ಕೊರೊನಾ ಹೆಚ್ಚಾದರೆ ಶಾಲೆ ಮುಂದುವರೆಸುತ್ತೀರಾ? ಈ ಪ್ರಶ್ನೆಗೆ ಶಿಕ್ಷಣ ಸಚಿವರ ಉತ್ತರ ಇಲ್ಲಿದೆ