‘ನೊಣವನ್ನು ಕೊಲ್ಲಲು ಸುತ್ತಿಗೆ ಏಕೆ?’; ಸಿಜೆಪಿ ಪ್ರತಿಭಟನೆಗಾಗಿ ದೆಹಲಿಯಲ್ಲಿನ ನಿರ್ಬಂಧಗಳಿಗೆ ಸುಪ್ರೀಂ ಕೋರ್ಟ್ ತರಾಟೆ

ಇಂದು (ಅಕ್ಟೋಬರ್ 10) ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಮ್ಮಿಕೊಂಡಿರುವ ದೆಹಲಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ದೆಹಲಿಯಲ್ಲಿ ವಿಧಿಸಿರುವ ಕಟ್ಟುನಿಟ್ಟಿನ ನಿರ್ಬಂಧಗಳ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಿಜೆಪಿ ಪ್ರತಿಭಟನೆ ವೇಳೆ ಅಹಿತಕರ ಘಟನೆಗಳು ನಡೆಯಬಹುದು ಎಂಬ ದೂರಾಲೋಚನೆಯಿಂದ ದೆಹಲಿ ಪೊಲೀಸರು ದೆಹಲಿ ಮೆಟ್ರೋ, ರೈಲು ಸಂಚಾರಗಳ ಮೇಲೆ ನಿರ್ಬಂಧ ವಿಧಿಸಿದ್ದರು. ಇದಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ನೊಣವನ್ನು ಕೊಲ್ಲಲು ಸುತ್ತಿಗೆ ಬಳಸಬೇಡಿ ಎಂದು ತರಾಟೆಗೆ ತೆಗೆದುಕೊಂಡಿದೆ.

ನೊಣವನ್ನು ಕೊಲ್ಲಲು ಸುತ್ತಿಗೆ ಏಕೆ?; ಸಿಜೆಪಿ ಪ್ರತಿಭಟನೆಗಾಗಿ ದೆಹಲಿಯಲ್ಲಿನ ನಿರ್ಬಂಧಗಳಿಗೆ ಸುಪ್ರೀಂ ಕೋರ್ಟ್ ತರಾಟೆ
ಸುಪ್ರೀಂ ಕೋರ್ಟ್
Image Credit source: PTI

Updated on: Oct 09, 2026 | 4:12 PM

ನವದೆಹಲಿ, ಅಕ್ಟೋಬರ್ 9: “ನೊಣವನ್ನು ಕೊಲ್ಲಲು ಸುತ್ತಿಗೆಯ ಅಗತ್ಯವಿಲ್ಲ”  ಎಂದು ಇಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಮ್ಮಿಕೊಂಡಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿದೆ. ಪ್ರಯಾಣಿಕರ ತೊಂದರೆಯ ಕುರಿತು ಕಳವಳ ವ್ಯಕ್ತಪಡಿಸಿದ ನ್ಯಾಯಾಲಯವು, ನಗರದ ಎಲ್ಲಾ ಭಾಗಗಳಿಂದ ಜನರು ಪ್ರಯಾಣಿಸುವುದರಿಂದ ಎಲ್ಲವನ್ನೂ ಬಂದ್ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿತಲ್ಲದೆ, ಮೆಟ್ರೋ ಮತ್ತು ರೈಲುಗಳ ಮೇಲಿನ ನಿರ್ಬಂಧಗಳನ್ನು ಮರುಪರಿಶೀಲಿಸುವಂತೆ ಸೂಚಿಸಿತು.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ಮೆಟ್ರೋ ನಿಲ್ದಾಣಗಳ ಬಂದ್ ಮತ್ತು ರೈಲುಗಳ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

“ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾಗಿದೆ, ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ನಾವು ಎಲ್ಲಿಯೂ ಸಂಚರಿಸಲು ಸಾಧ್ಯವಿಲ್ಲ. ನಮ್ಮ ದೇಶಕ್ಕೆ ಏನಾಗುತ್ತಿದೆ? ಇದೊಂದು ಶಾಂತಿಯುತ ಪ್ರತಿಭಟನೆ. ಇದಕ್ಕೆ ಇಷ್ಟೆಲ್ಲ ನಿರ್ಬಂಧಗಳ ಅಗತ್ಯವಿದೆಯೇ?” ಎಂದು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮತ್ತು ಸಂಸದ ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನೂ ಓದಿ: ‘ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ, ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?’; ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ

ಪ್ರಯಾಣಿಕರ ಹಕ್ಕು ಮತ್ತು ಸೌಕರ್ಯ:

“ಪ್ರತಿಭಟನಾಕಾರರನ್ನು ನಿಯಂತ್ರಿಸುವ ಅಧಿಕಾರ, ಜವಾಬ್ದಾರಿ ಪೊಲೀಸರಿಗಿದೆ. ಅದರಲ್ಲಿ ಅನುಮಾನವೇ ಇಲ್ಲ. ಆದರೆ ಅದಕ್ಕಾಗಿ ಲಕ್ಷಾಂತರ ಸಾಮಾನ್ಯ ಪ್ರಯಾಣಿಕರು, ಉದ್ಯೋಗಿಗಳು, ಯುವಕರು ಮತ್ತು ಹಿರಿಯ ನಾಗರಿಕರಿಗೆ ತೊಂದರೆ ನೀಡುವುದು ಸರಿಯಲ್ಲ. ಸಂಚಾರದ ಮೇಲಿನ ನಿಯಂತ್ರಣಕ್ಕೂ ಮತ್ತು ಸಂಪೂರ್ಣ ಬಂದ್ ಮಾಡುವುದಕ್ಕೂ ವ್ಯತ್ಯಾಸವಿದೆ” ಎಂದು ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗ್ಚಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ಮೆಟ್ರೋ ಹಾಗೂ ರೈಲು ನಿರ್ಬಂಧಗಳ ಮರುಪರಿಶೀಲನೆ:

ಪ್ರತಿಭಟನೆ ಹಿನ್ನೆಲೆಯಲ್ಲಿ ಮುಚ್ಚಲಾದ 57 ಮೆಟ್ರೋ ನಿಲ್ದಾಣಗಳ ಪಟ್ಟಿಯನ್ನು ತಕ್ಷಣವೇ ಕಡಿತಗೊಳಿಸಿ, ರೈಲುಗಳು ಮತ್ತು ಮೆಟ್ರೋಗಳನ್ನು ನಿಯಮಿತವಾಗಿ ಸಂಚರಿಸಲು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿತು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ರಸ್ತೆ ಮತ್ತು ಸಾರಿಗೆ ಸೂಚನೆಗಳನ್ನು ಪ್ರಕಟಿಸಲು ನಿರ್ದೇಶಿಸಿತು.

ಕೇಂದ್ರ ಸರ್ಕಾರದ ಭರವಸೆ:

ನ್ಯಾಯಾಲಯದ ಕಳವಳಕ್ಕೆ ಸ್ಪಂದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಂಬಂಧಪಟ್ಟ ಆಡಳಿತ ಮಂಡಳಿಗಳೊಂದಿಗೆ ಸಮಾಲೋಚಿಸಿ ಮೆಟ್ರೋ ಹಾಗೂ ರೈಲು ಸೇವೆಗಳ ಮೇಲಿನ ಸಂಪೂರ್ಣ ತಡೆಯನ್ನು ತೆರವುಗೊಳಿಸಿ, ಸಾರ್ವಜನಿಕ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ಸಡಲಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಎಸ್​ಐಆರ್ ವಿರುದ್ಧ ಬೆಂಗಳೂರಿನಲ್ಲಿ ಸಿಜೆಪಿ ಪ್ರತಿಭಟನೆ: ಆಯೋಗದ ವಿರುದ್ಧ ಗುಡುಗಿದ ದೀಪ್ಕೆ, ಧ್ರುವ್ ರಾಠಿ, ಪ್ರಕಾಶ್​ ರಾಜ್​​

ಚುನಾವಣಾ ಆಯೋಗದ ಮತದಾರರ ಪಟ್ಟಿಗಳ ಎಸ್​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಮತ್ತು ವಿವಿಧ ಪ್ರತಿಭಟನಾ ಸಂಸ್ಥೆಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿಗೆ ಕರೆ ನೀಡಿದ್ದವು. ಈ ಪ್ರತಿಭಟನೆಯನ್ನು ತಡೆಯಲು ದೆಹಲಿ ಪೊಲೀಸರು 57 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲು ಕೋರಿದ್ದರು ಹಾಗೂ ರೈಲ್ವೆ ಇಲಾಖೆಯು ದೆಹಲಿ ತಲುಪುವ ಹಲವು ಪ್ರಮುಖ ರೈಲುಗಳನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೊಲೀಸರ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us